ಬೆಲ್‌ಗ್ರೇಡ್, ಜು. 21: ʼಅತಿಥಿ ದೇವೋಭವʼ ಎಂಬ ಸಂಸ್ಕೃತಿ ಹೊಂದಿರುವ ಭಾರತೀಯರು ಎಲ್ಲೇ ಇದ್ದರೂ ಅತಿಥಿಗಳನ್ನು ಗೌರವದಿಂದ ಸತ್ಕಾರ ಮಾಡುತ್ತಾರೆ. ಅದರಲ್ಲೂ ವಿದೇಶಿಗರಿಗೆ ಭಾರತೀಯರು ತೋರುವ ಪ್ರೀತಿ, ಕಾಳಜಿ, ಉಪಚಾರ ಅದ್ಭುತವಾಗಿರುತ್ತದೆ. ಆದರೆ ವಿದೇಶದಲ್ಲಿತ ಭಾರತೀಯರಿಗೆ ಇದೇ ರೀತಿಯ ಗೌರವ ಸಿಗುತ್ತದ ಎಂದು ಕೇಳಿದರೆ ಇಲ್ಲ ಎನ್ನುವ ಉತ್ತರ ಸಿಗುತ್ತದೆ. ಅದಕ್ಕೆ ಉದಾಹರಣೆ ಎಂಬಂತೆ ದಂಪತಿ ಸೆರ್ಬಿಯಾದಲ್ಲಿ ತಾವು ಎದುರಿಸಿದ ಕಹಿ ಅನುಭವವನ್ನು ತೆರೆದಿಟ್ಟಿದ್ದಾರೆ. ರಜಾ ದಿನವನ್ನು ಕಳೆಯಬೇಕೆಂದು ವಿದೇಶಕ್ಕೆ ತೆರಳಿದ ಭಾರತೀಯರಿಗೆ ಎದುರಾದ ಭೀಕರ ಅನುಭವ ಇದಾಗಿದೆ. ಸೆರ್ಬಿಯಾಕ್ಕೆ ಕಾಲಿಟ್ಟ ಕೆಲವೇ ಸಮಯದಲ್ಲಿ ಸ್ಥಳೀಯರಿಂದ ನರಕಯಾತನೆ ಅನುಭವಿಸಿದ್ದಾಗಿ ದಂಪತಿ ಬೇಸರ ಹೊರಹಾಕಿದ್ದಾರೆ. ವ್ಲಾಗ್ ಮಾಡುತ್ತಿದ್ದ ಸಂದರ್ಭದಲ್ಲಿ ಸ್ಥಳೀಯರು ಲೈಂಗಿಕ ಕಿರುಕುಳ ನೀಡಲು ಮುಂದಾಗಿದ್ದು, ಡ್ರೆಸ್ ಎಳೆಯಲು ಪ್ರಯತ್ನಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಈ ಘಟನೆ ಸೋಷಿಯಲ್ ಮೀಡಿಯಾದಲ್ಲಿ (Viral Video) ಭಾರಿ ವೈರಲ್ ಆಗಿದ್ದು, ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಪರ್ಣಾ ಮಾಲು ಮತ್ತು ಅಜ್ಮಲ್ ಕೊಲಂಬಿಲ್ ದಂಪತಿ ರಜಾ ದಿನವನ್ನು ಕಳೆಯಲು ಸೆರ್ಬಿಯಾಕ್ಕೆ ಭೇಟಿ ನೀಡಿದ್ದರು. ಇಬ್ಬರು ವಿಡಿಯೊ ಚಿತ್ರೀಕರಿಸುತ್ತ ಸಾರ್ವಜನಿಕ ರಸ್ತೆಯಲ್ಲಿ ತೆರಳುತ್ತಿದ್ದಾಗ ಹಿಂದಿನಿಂದ ಬಂದ ಮೂವರು ಕಿಡೀಕೆಡಿಗಳು ಕಿರುಕುಳ ನೀಡಲು ಮುಂದಾಗಿದ್ದಾರೆ. ಇದನ್ನು ನಿರ್ಲಕ್ಷಿಸಿ ದಂಪತಿ ಮುಂದಕ್ಕೆ ಸಾಗಿದ್ದಾರೆ. ಆದರೆ ಆ ಗುಂಪಿನಲ್ಲಿದ್ದ ಒಬ್ಬ ಅಪರ್ಣಾ ಮಾಲು ಅವರ ಬ್ಯಾಗ್ ಎಳೆದಿದ್ದಾನೆ. ಮತ್ತೊಬ್ಬ ಆಕೆಯ ಡ್ರೆಸ್ ಎಳೆದಿದ್ದಾನೆ. ತಕ್ಷಣ ಎಚ್ಚೆತ್ತ ದಂಪತಿ, "ನೀವು ಎಲ್ಲ ಮಹಿಳೆಯರೊಂದಿಗೆ ಹೀಗೆಯೇ ವರ್ತಿಸುತ್ತೀರಾ?" ಎಂದು ಪ್ರಶ್ನಿಸಿದ್ದಾರೆ.
ದಂಪತಿ ತಾಳ್ಮೆಯಿಂದ ವರ್ತಿಸಿ, ʼʼಇದು ನ್ಯಾಯವಲ್ಲ. ನಾವು ಬೇರೆ ದೇಶದಿಂದ ಬಂದಿದ್ದೇವೆʼʼ ಎಂದು ಹೇಳಿದ್ದರೂ ಕಿಡುಗೇಡಿಗಳು ಅವ್ಯಾಚ ಪದಗಳಿಂದ ದಂಪತಿಯನ್ನು ನಿಂದಿಸಿದ್ದಾರೆ. ಬಳಿಕ ತಮ್ಮ ಕೃತ್ಯಗಳು ಕ್ಯಾಮೆರಾದಲ್ಲಿ ದಾಖಲಾಗುತ್ತಿವೆ ಎಂದು ಅವರಿಗೆ ಅರಿವಾದ ತಕ್ಷಣ, ಅವರು ಸ್ಥಳದಿಂದ ಪರಾರಿಯಾಗಿದ್ದಾರೆ.
ಈ ಬಗ್ಗೆ ಅಪರ್ಣಾ ಸೋಷಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ವಿವರಿಸುತ್ತಾ, "ನಾವು ವ್ಲಾಗ್ ಮಾಡುವಾಗ ಈ ಮೂವರು ಹಿಂಬಾಲಿಸಿದರು. ಮೊದಲಿಗೆ, ನನ್ನ ಬ್ಯಾಗ್ ಹಿಡಿದೆಳೆದರು. ಆದ್ದರಿಂದ ನಾನು ಅದನ್ನು ಮುಂಭಾಗಕ್ಕೆ ಸರಿಸಿದೆ. ಆಗ ಆ ಗುಂಪಿನಲ್ಲಿದ್ದ ಒಬ್ಬ ನನ್ನ ಉಡುಪನ್ನು ಎಳೆದಾಡಿದ" ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೊ ವೈರಲ್ ಆದ ಬೆನ್ನಲ್ಲೇ, "ನಿಮ್ಮ ಪತಿ ಯಾಕೆ ಸುಮ್ಮನೆ ಇದ್ದರು? ಅವರನ್ನು ಏಕೆ ಎದುರಿಸಲಿಲ್ಲ? ಮೂವರನ್ನು ಅಲ್ಲೇ ಹೊಡೆದು ಉರುಳಿಸಬೇಕಿತ್ತು" ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಅಪರ್ಣಾ, ʼʼನಿಮ್ಮ ಕಾಳಜಿ ನನಗೆ ಅರ್ಥವಾಗಿದೆ. ಆದರೆ ಒಂದು ವಿಷಯವನ್ನು ನೆನಪಿಡಿ. ನಾವು ಆ ದೇಶಕ್ಕೆ ಕಾಲಿಟ್ಟ ಕೆಲವೇ ಸಮಯದಲ್ಲಿ ಈ ಅನುಭವವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಜಗಳವಾಡುವುದು ಸರಿ ಎನಿಸಿಲ್ಲʼʼ ಎಂದಿದ್ದಾರೆ.
1.9 ಕೋಟಿ ರುಪಾಯಿಯ ಮೈಕ್ರೋಸಾಫ್ಟ್ ಉದ್ಯೋಗ ತ್ಯಜಿಸಿ ಅವಲತ್ತುಕೊಂಡ ಯುವಕ
ʼʼನೈಜ ಜೀವನವು ಯಾವುದೇ ಸಿನಿಮೀಯ ರೀತಿ ಇರುವುದಿಲ್ಲ. ವಾಸ್ತವ ಏನಂದ್ರೆ ನನ್ನ ಪತಿ ರಾಕಿ ಭಾಯ್ ಅಥವಾ ವಿಜಯ್ ಅಲ್ಲ. ಒಬ್ಬರೇ ಹೋಗಿ ಮೂವರ ಜತೆ ಫೈಟ್ ಮಾಡಲು ಇದು ಸಿನಿಮಾವಲ್ಲ. ಆ ಕ್ಷಣದಲ್ಲಿ ನಮಗೆ ನಮ್ಮ ಸುರಕ್ಷತೆ ಮುಖ್ಯವಾಗಿತ್ತುʼʼ ಎಂದಿದ್ದಾರೆ. ʼʼಈ ಘಟನೆಯನ್ನು ಸ್ಥಳೀಯ ಅಧಿಕಾರಿಗಳಿಗೆ ವರದಿ ಮಾಡಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದರುʼʼ ಎಂದಿದ್ದಾರೆ.
ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಅನೇಕರು ಕಳವಳ ವ್ಯಕ್ತಪಡಿಸಿದ್ದಾರೆ. ಕೆಲವರು ದಂಪತಿಯ ವರ್ತನೆಗೆ ಮೆಚ್ಚುಗೆ ಸೂಚಿಸಿದರು. ಒಬ್ಬರು, "ಪ್ರವಾಸಿಗರನ್ನು, ಅದರಲ್ಲೂ ಮಹಿಳೆಯರನ್ನು ಈ ರೀತಿ ನಡೆಸಿಕೊಳ್ಳುವುದಾ? ನಾಚಿಕೆಯಾಗಬೇಕು" ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, "ಸುರಕ್ಷತೆ ಯಾವಾಗಲೂ ಮೊದಲು. ನಿಮ್ಮ ತಾಳ್ಮೆ ಮೆಚ್ಚಲೇಬೇಕು" ಎಂದು ಹೇಳಿದ್ದಾರೆ.