ಚಂಡೀಗಢ, ಮೇ 20: ಪಂಜಾಬ್‌ನ ಮೊಹಾಲಿ ಜಿಲ್ಲೆಯಲ್ಲಿ ಅಘಾತಕಾರಿ ಘಟನೆಯೊಂದು ನಡೆದಿದೆ. ಹಗಲು ಸಮಯದಲ್ಲೇ 4 ವರ್ಷದ ಹೆಣ್ಣು ಮಗುವೊಂದನ್ನು ಸಿನಿಮೀಯ ಮಾದರಿಯಲ್ಲಿ ಅಪಹರಿಸಲಾಗಿದೆ. ಹತ್ತಿರದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿರುವ ಈ ದೃಶ್ಯವು (Viral News) ಸ್ಥಳೀಯ ನಿವಾಸಿಗಳಲ್ಲಿ ಭೀತಿ ಹುಟ್ಟುಹಾಕಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಬಾಲಕಿ ತನ್ನ ಅಜ್ಜನೊಂದಿಗೆ ಸ್ಕೂಟರ್‌ನಲ್ಲಿ ಮನೆಯ ಹೊರಗೆ ಕುಳಿತಿದ್ದಾಗ ಘಟನೆ ಸಂಭವಿಸಿದೆ. ಅಜ್ಜಿ ಗೇಟ್ ತೆರೆಯಲು ಹೋದಾಗ ಬೈಕ್ ನಲ್ಲಿ ಬಂದ ಇಬ್ಬರು ಪುರುಷರು ಇದ್ದಕ್ಕಿದ್ದಂತೆ ಮನೆಯ ಬಳಿಗೆ ನುಗ್ಗಿದ್ದಾರೆ ಎನ್ನಲಾಗಿದೆ.
ಮಗುವನ್ನು ರಕ್ಷಿಸಲು ವೃದ್ಧ ಅಜ್ಜ ಮತ್ತು ಅಜ್ಜಿ ತಮ್ಮ ಪ್ರಾಣದ ಹಂಗು ತೊರೆದು ದುಷ್ಕರ್ಮಿಗಳ ವಿರುದ್ಧ ಹೊರಾಡಿದ್ದಾರೆ. ಇದರ ದೃಶ್ಯಗಳು ಸ್ಥಳೀಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇಡೀ ಪ್ರದೇಶದಲ್ಲಿ ತೀವ್ರ ಆತಂಕ ಮೂಡಿಸಿದೆ.
ವಿಡಿಯೊ ನೋಡಿ:
ಕಿಡ್ನ್ಯಾಪರ್‌ಗಳು ಮಗುವನ್ನು ಅಲ್ಲಿಂದಲೇ ಎಳೆದುಕೊಂಡು ಹೋಗಿದ್ದು ಕಾರಿಗೆ ಹತ್ತಿಸಿದ್ದಾರೆ. ಕೂಡಲೇ ಅಜ್ಜ ಮತ್ತು ಅಜ್ಜಿ ಮೊಮ್ಮಗುವನ್ನು ರಕ್ಷಿಸಲು ಮುಂದಾಗಿದ್ದು ಕಿರುಚಾಡುತ್ತಾ, ದುಷ್ಕರ್ಮಿಗಳನ್ನು ದೈಹಿಕವಾಗಿ ಎದುರಿಸಿದ್ದಾರೆ. ಅದಾಗ್ಯೂ ಅವರ ಪ್ರಯತ್ನ ವಿಫಲವಾಗಿದ್ದು, ದುಷ್ಕರ್ಮುಗಳು ಮಗುವನ್ನು ಕಾರಿನೊಳಗೆ ಕೂರಿಸಿ ಪರಾರಿಯಾಗಿದ್ದಾರೆ.
ಕೆಲವೇ ನಿಮಿಷಗಳಲ್ಲಿ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗುವಲ್ಲಿ ಯಶಸ್ವಿಯಾದರು. ದಾಳಿಕೋರರನ್ನು ವಿರೋಧಿಸಲು ಅಜ್ಜ-ಅಜ್ಜಿ ಹತಾಶವಾಗಿ ಪ್ರಯತ್ನಿಸುತ್ತಿರುವುದು, ಸಹಾಯಕ್ಕಾಗಿ ಕೂಗುತ್ತಿರುವುದು ವಿಡಿಯೊದಲ್ಲಿ ಕಂಡು ಬಂದಿದೆ. ವಾಹನವನ್ನು ತಡೆಯಲು ಪ್ರಯತ್ನಿಸಿದರೂ ಮತ್ತು ಸಹಾಯಕ್ಕಾಗಿ ಕೂಗುತ್ತಲೇ ಇದ್ದರು ಎಂದು ವರದಿಯಾಗಿದೆ.
ಕಿಡ್ನ್ಯಾಪರ್‌ಗಳು ತಪ್ಪಿಸಿಕೊಳ್ಳದಂತೆ ತಡೆಯಲು ವೃದ್ಧ ದಂಪತಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿದ್ದರು. ಆದರೆ, ಸುತ್ತಮುತ್ತಲಿನ ಜನರು ಬರುವಷ್ಟರಲ್ಲಿ ದುಷ್ಕರ್ಮಿಗಳು ವೇಗವಾಗಿ ಕಾರನ್ನು ಚಲಾಯಿಸಿಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ. ಈ ಭಯಾನಕ ಘಟನೆಯ ಬೆನ್ನಲ್ಲೇ ಮಗುವಿನ ತಂದೆ ಪೊಲೀಸರಿಗೆ ಗಂಭೀರ ಹೇಳಿಕೆಯೊಂದನ್ನು ನೀಡಿದ್ದಾರೆ. ಮಗುವಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಯುತ್ತಿದ್ದು, ಈ ಅಪಹರಣದಲ್ಲಿ ಪತ್ನಿಯ ಕೈವಾಡವಿದೆ ಎಂದು ಆರೋಪಿಸಿದ್ದಾರೆ. ಅಧಿಕಾರಿಗಳು ಸಂಪೂರ್ಣ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.
ಪಂಜಾಬ್ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಗುರುತಿಸಿ ಮಗುವನ್ನು ಪತ್ತೆಹಚ್ಚಲು ಸಂಭವನೀಯ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಕೇವಲ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಾಯಿಯೇ ಮಾಡಿಸಿರುವ ಕೃತ್ಯವೇ ಅಥವಾ ಇದರ ಹಿಂದೆ ಬೇರೆ ಜಾಲವಿದೆಯೇ ಎಂದು ತನಿಖೆ ಮಾಡುತ್ತಿದ್ದಾರೆ.