ಪಾಟ್ನಾ: ಬಿಹಾರದ ಮಾಜಿ ಮುಖ್ಯಮಂತ್ರಿ (Former Bihar Chief Minister) ಹಾಗೂ ರಾಷ್ಟ್ರೀಯ ಜನತಾ ದಳ (RJD) ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ (Lalu Prasad Yadav) 78ನೇ ಹುಟ್ಟುಹಬ್ಬವನ್ನು (Birthday) ಪಾಟ್ನಾದ (Patna) ತಮ್ಮ ನಿವಾಸದಲ್ಲಿ ಬುಧವಾರ ಆಚರಿಸಿದರು. ಲಾಲು 78 ಕೆಜಿ ಲಡ್ಡುಗಳಿಂದ ತಯಾರಾದ ಕೇಕ್ ಅನ್ನು ಖಡ್ಗದಿಂದ ಕತ್ತರಿಸಿದ್ದು, ಈ ವಿಡಿಯೊ ವೈರಲ್ ಆಗಿದೆ. ಆರ್‌ಜೆಡಿ ಕಾರ್ಯಕರ್ತರು ಹೆಚ್ಚು ಸಂಖ್ಯೆಯಲ್ಲಿ ಜಮಾಯಿಸಿ ಶುಭಾಶಯ ಕೋರಿದರು.
ಕೇಕ್ ಕತ್ತರಿಸುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು “ಲಾಲು ಯಾದವ್ ಜಿಂದಾಬಾದ್” ಘೋಷಣೆಗಳು ಹಿನ್ನೆಲೆಯಲ್ಲಿ ಕೇಳಿಬಂದಿವೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎಕ್ಸ್‌ನಲ್ಲಿ ಲಾಲು ಅವರಿಗೆ ಶುಭಾಶಯ ಕೋರಿದ್ದಾರೆ. “ನಮ್ಮ ಬಾಂಧವ್ಯ ರಾಜಕೀಯಕ್ಕೆ ಸೀಮಿತವಲ್ಲ. ಇದು ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಬೇರೂರಿರುವ ಗಾಢ ಮಾನವೀಯ ಸಂಬಂಧ” ಎಂದು ರಾಹುಲ್ ಬರೆದಿದ್ದಾರೆ. ಲಾಲು ತಮ್ಮ ಜೀವನದಲ್ಲಿ ಸವಾಲುಗಳನ್ನು ಎದುರಿಸುತ್ತಲೂ ದುರ್ಬಲ ವರ್ಗಗಳ ಧ್ವನಿಯಾಗಿದ್ದಾರೆ ಎಂದು ಶ್ಲಾಘಿಸಿ, ಆರೋಗ್ಯ ಮತ್ತು ದೀರ್ಘಾಯುಷ್ಯ ಕೋರಿದ್ದಾರೆ.
ಲಾಲು ಪ್ರಸಾದ್ ಯಾದವ್ ಹುಟ್ಟುಹಬ್ಬ ಆಚರಣೆಯ ವಿಡಿಯೊ:
ಲಾಲು ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್, ಆರ್‌ಜೆಡಿಯಿಂದ ಆರು ವರ್ಷಗಳ ಕಾಲ ಉಚ್ಛಾಟಿತರಾಗಿದ್ದರೂ, ತಂದೆಗೆ ಶುಭಾಶಯ ಕೋರಿದ್ದಾರೆ. ತೇಜ್, ಲಾಲು ಅವರ ಚಿತ್ರವನ್ನು ತಬ್ಬಿಕೊಳ್ಳುವ ಫೋಟೋ ಹಂಚಿಕೊಂಡು, “ರಾತ್ರಿ ಎಷ್ಟೇ ಕತ್ತಲಾದರೂ, ಬೆಳಗಿನ ಆಗಮನ ಹತ್ತಿರವೇ ಇರುತ್ತದೆ” ಎಂದಿದ್ದಾರೆ.
ಕಾನೂನುಬದ್ಧವಾಗಿ ಬೇರೆಂದು ವಿವಾಹವಾಗಿದ್ದು, ಬೇರೊಬ್ಬ ಮಹಿಳೆಯೊಂದಿಗೆ 12 ವರ್ಷದಿಂದ ಸಂಬಂಧದಲ್ಲಿದ್ದೇನೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರಿಂದ ತೇಜ್ ಅವರನ್ನು ಉಚ್ಛಾಟನೆ ಮಾಡಲಾಗಿದೆ. ಆ ಪೋಸ್ಟ್‌ನ ವಿವಾದ ಹುಟ್ಟು ಹಾಕಿದ ಬಳಿಕ ಖಾತೆ ಹ್ಯಾಕ್ ಆಗಿತ್ತು ಎಂದು ತಿಳಿಸಿ ಡಿಲೀಟ್ ಮಾಡಿದ್ದರು. ಮೇ 25ರಂದು ಲಾಲು ಅವರು ತೇಜ್ ಅವರನ್ನು ಪಕ್ಷ ಮತ್ತು ಕುಟುಂಬದಿಂದ ಉಚ್ಛಾಟಿಸಿದ್ದರು. “ಸಾರ್ವಜನಿಕ ಜೀವನದಲ್ಲಿ ಶಿಷ್ಟಾಚಾರವನ್ನು ನಾನು ಸದಾ ಪ್ರತಿಪಾದಿಸಿದ್ದೇನೆ. ವಿಧೇಯ ಕುಟುಂಬ ಸದಸ್ಯರು ಇದನ್ನು ಪಾಲಿಸಿದ್ದಾರೆ” ಎಂದು ಲಾಲು ಹೇಳಿದ್ದರು.