ಗಾಂಧಿನಗರ, ಮೇ 13: ಪ್ರಾಣಿಗಳ ವರ್ತನೆ ಯಾವಾಗ ಬದಲಾಗುತ್ತದೆ ಎಂದು ಹೇಳಲಾಗದು. ಕೆಲವೊಮ್ಮೆ ಆಹಾರಕ್ಕಾಗಿ ಮನುಷ್ಯನ ಮೇಲೆಯೂ ದಾಳಿ ನಡೆಸುತ್ತವೆ. ಇದೀಗ ಗುಜರಾತ್ ನ ಗಿರ್ ಸಫಾರಿಯಲ್ಲಿ ಮೈ ನಡುಗಿಸುವಂತಹ ಘಟನೆಯೊಂದು ನಡೆದಿದೆ. ಸಫಾರಿಗಾಗಿ ಬಂದ ಪ್ರವಾಸಿಗರ ಮುಂದೆಯೇ ಹಸುವನ್ನು ಸಿಂಹಿಣಿಯೊಂದು ಬೇಟೆಯಾಡಿದೆ. ಈ ಭಯಾನಕ ದೃಶ್ಯವು ಸೋಷಿ ಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral Video) ಆಗುತ್ತಿದೆ.
ಸಸಾನ್ ಗಿರ್ ನ ಸಫಾರಿ ಉದ್ಯಾನವನಕ್ಕೆ ಸಾವಿರಾರು ಜನರು ಭೇಟಿ ನೀಡುತ್ತಾರೆ. ಆದರೆ ಇದೀಗ ಪ್ರವಾಸಿಗರಿಗೆ ಈ ಸಫಾರಿಯೂ ಮರೆಯಲಾಗದ ದೃಶ್ಯವಾಗಿ ಮಾರ್ಪಟ್ಟಿತು. ಸಫಾರಿ ಜೀಪಿನೊಳಗೆ ಕುಳಿತಿದ್ದ ಸಂದರ್ಶಕರು ಸಿಂಹಗಳ ಗುಂಪನ್ನು ಗಮನಿಸುತ್ತಿದ್ದಾಗ ಪರಿಸ್ಥಿತಿ ಇದ್ದಕ್ಕಿದ್ದಂತೆ ಬದಲಾಗಿದೆ.
ವಿಡಿಯೋ ನೋಡಿ:
ಪ್ರಾಣಿಗಳ ಸಫಾರಿಗಾಗಿ ಭೇಟಿ ನೀಡಿದ್ದ ಪ್ರವಾಸಿಗರು ಜೀಪಿನಲ್ಲಿ ಕುಳಿತು ಸಿಂಹಗಳ ವೀಕ್ಷಣೆಯಲ್ಲಿ ತೊಡಗಿದ್ದರು. ಈ ಸಂದರ್ಭದಲ್ಲಿ ಸಿಂಹಿಣಿಯೊಂದು ತನ್ನ ಬೇಟೆಗಾಗಿ ಪ್ರವಾಸಿಗರ ಸಫಾರಿ ಜೀಪನ್ನೆ ಬಳಸಿಕೊಂಡಿದೆ. ವಾಹನದ ಮರೆಯಲ್ಲಿ ಕುಳಿತು ಕ್ಷಣಾರ್ಧದಲ್ಲಿ ಅದು ಹಸುವನ್ನು ಬೇಟೆಯಾಡಿದೆ.
Viral Video: ಸೆಲ್ಫಿಗಾಗಿ ವಿದೇಶಿ ಮಹಿಳೆ ಹಿಂದೆ ಬಿದ್ದ ಯುವಕರು; ವಿಡಿಯೊ ವೈರಲ್
ಕೆಲವೇ ಸೆಕೆಂಡುಗಳಲ್ಲಿ, ಅದು ಹುಸುವಿನ ಕಡೆಗೆ ಹಾರಿ ದಾಳಿ ನಡೆಸಿದೆ. ಪ್ರವಾಸಿಗರ ವಾಹನಗಳ ಹತ್ತಿರ ಸಿಂಹಗಳು ಬೇಟೆಯಾಡುವುದು ಬಹಳ ವಿರಳ. ವಾಹನದ ಕೆಲವೇ ಮೀಟರ್‌ಗಳ ಅಂತರದಲ್ಲಿ ನಡೆದ ಈ ಭೀಕರ ದೃಶ್ಯ ಕಂಡು ಪ್ರವಾಸಿಗರು ಒಂದು ಕ್ಷಣ ದಂಗಾಗಿದ್ದಾರೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆತಂಕ ವ್ಯಕ್ತ ಪಡಿಸಿದ್ದಾರೆ. ಬಳಕೆದಾರರೊಬ್ಬರು ನಿಜಕ್ಕೂ ಭಯಾನಕ ದೃಶ್ಯ ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು ಸಫಾರಿಯ ಸಂದರ್ಭದಲ್ಲಿ ಜಾಗರೂಕತೆಯಿಂದ ವರ್ತಿಸಬೇಕು ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಗುಜರಾತ್‌ನಲ್ಲಿ ನೆಲೆಗೊಂಡಿರುವ ಗಿರ್ ಅರಣ್ಯ ರಾಷ್ಟ್ರೀಯ ಉದ್ಯಾನವನವು ಅಳಿವಿನಂಚಿ ನಲ್ಲಿರುವ ಏಷ್ಯಾಟಿಕ್ ಸಿಂಹದ ನೈಸರ್ಗಿಕ ತಾಣವಾಗಿದೆ. ಇಲ್ಲಿ ಸಿಂಹಗಳ ಸಂಖ್ಯೆ ಹೆಚ್ಚುತ್ತಿದ್ದು, ವನ್ಯಜೀವಿ ಪ್ರಿಯರ ನೆಚ್ಚಿನ ಪ್ರವಾಸಿ ಸ್ಥಳವಾಗಿ ಪ್ರಸಿದ್ಧಿ ಪಡೆದಿದೆ.