ನವದೆಹಲಿ, ಜೂ. 16: ಇತ್ತೀಚೆಗೆ ವರ್ಕ್ ಫ್ರಮ್ ಹೋಮ್ ಎಂಬ ಪರಿಕಲ್ಪನೆ ಜಾಸ್ತಿಯಾಗಿದೆ. ಉದ್ಯೋಗಿಗಳು ಆಫೀಸ್‌ಗೆ ತೆರಳುವ ಬದಲು ಮನೆಯಿಂದಲೇ ಕೆಲಸ ಮಾಡಲು ಹೆಚ್ಚಿನ ಆಸಕ್ತಿ ವಹಿಸುತ್ತಾರೆ. ಏರ್‌ಪೋರ್ಟ್, ಬೈಕ್ ಅಥವಾ ಮರದ ಕೆಳಗೆ ಕುಳಿತು ಕೆಲಸ ಮಾಡುವ ವಿಡಿಯೊ ಬಹಳಷ್ಟು ವೈರಲ್ (Viral News) ಆಗಿವೆ. ಇವೆಲ್ಲ ಬಿಡಿ, ಇದೀಗ ಅದೆಲ್ಲವನ್ನೂ ಮೀಡಿಸುವ ದೃಶ್ಯವೊಂದು ಕಂಡು ಬಂದಿದೆ. ಇಲ್ಲೊಬ್ಬ ವ್ಯಕ್ತಿ ಸಹರಾ ಮರುಭೂಮಿಯಲ್ಲಿ ಒಂಟೆ ಮೇಲೆ ಕುಳಿತು ಆಫೀಸ್‌ನ ಝೂಮ್ ಮೀಟಿಂಗ್‌ನಲ್ಲಿ ಭಾಗಿಯಾಗಿದ್ದಾನೆ. ಸದ್ಯ ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.
ಸಹಾರಾ ಮರುಭೂಮಿಯ ಮಧ್ಯದಲ್ಲಿ ಒಂಟೆಯ ಮೇಲೆ ಸವಾರಿ ಮಾಡುತ್ತ ಉದ್ಯೋಗಿ ಝೂಮ್ ಕಾಲ್‌ಗೆ ಹಾಜರಾಗಿದ್ದಾನೆ. ಈ ವಿಡಿಯೊ ನೋಡಿದ ಅನೇಕರು ವರ್ಕ್ ಫ್ರಮ್ ಹೋಮ್ ಹೀಗೂ ಮಾಡಬಹುದು ಎಂದು ಕಾಲೆಳೆದಿದ್ದಾರೆ.
ವೈರಲ್ ವಿಡಿಯೊ ಇಲ್ಲಿದೆ:
ವಿಶಾಲವಾದ ಸಹರಾ ಮರುಭೂಮಿಯ ನಡುವೆ ಒಂಟೆಯ ಮೇಲೆ ವ್ಯಕ್ತಿ ಕುಳಿತುಕೊಂಡಿದ್ದಾನೆ. ಲ್ಯಾಪ್‌ಟಾಪ್ ಅನ್ನು ತನ್ನ ತೊಡೆಯ ಮೇಲೆ ಸಮತೋಲನದಲ್ಲಿಟ್ಟುಕೊಂಡಿದ್ದು ಒಂಟೆ ಚಲಿಸುತ್ತಿದ್ದರೂ ಸಂಪೂರ್ಣವಾಗಿ ಮೀಟಿಂಗ್‌ನಲ್ಲಿ ಮುಳುಗಿ ಹೋಗಿದ್ದಾನೆ. ಮರುಭೂಮಿಯನ್ನು ತನ್ನ ಕೆಲಸದ ಸ್ಥಳವನ್ನಾಗಿ ಪರಿವರ್ತಿಸುವ ದೃಶ್ಯವು ಇಂದು ತಂತ್ರಜ್ಞಾನ ಎಷ್ಟು ಅಭಿವೃದ್ಧಿ ಯಾಗಿದೆ ಎಂಬುದನ್ನು ತೋರಿಸುತ್ತದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ನಗರದ ಕೆಫೆಗಳಿಂದ ಮರುಭೂಮಿ ಮರಳಿನವರೆಗೆ, ʼಹೋಮ್ ಆಫೀಸ್ʼ ಕಲ್ಪನೆಯು ಈಗ ನಾಲ್ಕು ಗೋಡೆಗಳನ್ನು ಮೀರಿ ಬೆಳೆಯುತ್ತಿದೆ.
ನಾಯಿಯ ಪಾಲನೆಗೆ ತಿಂಗಳಿಗೆ 15,000 ರೂ. ಖರ್ಚು!
ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ಬಗೆಯ ಕಾಮೆಂಟ್ ಮಾಡುತ್ತಿದ್ದಾರೆ. ಒಬ್ಬರು, ʼʼಬಹುಶಃ ಈ ಒಂಟೆಗೂ ಕೆಲಸದ ಟಾರ್ಗೆಟ್ ಇರಬೇಕುʼʼ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಮತ್ತೊಬ್ಬರು, ʼʼಮನೆಯಿಂದ ಕೆಲಸ ಮಾಡ್ತಿದ್ದೀನಿ ಅಂತ ಹೇಳಿ ಒಂಟೆ ಸವಾರಿ ಮಾಡುತ್ತಿದ್ದಾರೆʼʼ ಎಂದು ತಮಾಷೆ ಮಾಡಿದ್ದಾರೆ.