ಸ್ಕಾಟ್‌ಲ್ಯಾಂಡ್: ಮನುಷ್ಯನ ದೇಹವು ಕೆಲವೊಮ್ಮೆ ಅರ್ಥಮಾಡಿಕೊಳ್ಳಲಾಗದಷ್ಟು ವಿಚಿತ್ರವಾಗಿರುತ್ತದೆ. ದೇಹದಲ್ಲಿ ಕಾಣಿಸುವ ಹಲವಾರು ಆರೋಗ್ಯ ಸಮಸ್ಯೆಗಳನ್ನು ವಿವರಿಸಲು, ಅದಕ್ಕೆ ಕಾರಣವೇನು ಎಂದು ಕಂಡಹಿಡಿಯುವುದೂ ಕೆಲವೊಮ್ಮೆ ಅಸಾಧ್ಯವಾಗುತ್ತದೆ. ಇಂತಹದೇ ಒಂದು ಪ್ರಕರಣ ಸ್ಕಾಟ್‌ಲ್ಯಾಂಡ್(Scotland)ನಲ್ಲಿ ಬೆಳಕಿಗೆ ಬಂದಿದ್ದು, ವೈದ್ಯರನ್ನೇ ಆಶ್ಚರ್ಯಚಕಿತರನ್ನಾಗಿಸಿದೆ(Viral News). ಹಾಗಾದ್ರೆ ವೈದ್ಯ ಲೋಕಕ್ಕೆ ಸವಾಲಾದ ಆ ಸಮಸ್ಯೆ ಯಾವುದು..? ಆ ಸಮಸ್ಯೆ ಬಗ್ಗೆ ವೈದ್ಯರು ಏನೇಳುತ್ತಾರೆ ಎಂಬಿತ್ಯಾದಿ ಮಾಹಿತಿ ಇಲ್ಲಿದೆ.
ಅಪರೂಪದ ಪ್ರಕರಣ
ಸ್ಕಾಟ್‌ಲ್ಯಾಂಡ್‌ನ 68 ವರ್ಷದ ಜೆರಾರ್ಡ್ ಮೆಕ್‌ಎಲಿಸ್ (Gerard McEllis) ಎಂಬುವವರ ಮೂಗು ಕರೆದ ಬಜ್ಜಿಯಂತೆ ಊದಿಕೊಂಡು ಅಸಹಜ ಆಕಾರವನ್ನು ಪಡೆದುಕೊಂಡಿದ್ದು, ಈ ಸಮಸ್ಯೆಯು ಎಷ್ಟೊಂದು ಗಂಭೀರವಾಯಿತೆಂದರೆ, ಜೆರಾರ್ಡ್ ಈ ಊದಿದ ಮೂಗಿನಿಂದಾಗಿ ತನ್ನ ಪತ್ನಿಗೆ ಮುತ್ತಿಕ್ಕಲು ಸಾಧ್ಯವಾಗದೇ ಕೊನೆಗೆ ಶಸ್ತ್ರಚಿಕಿತ್ಸೆಯ ಮೊರೆಹೋಗಿದ್ದಾರೆ. ಹೌದು.. 30 ವರ್ಷಗಳಿಗೂ ಹೆಚ್ಚು ಕಾಲ ಐಬಿಎಂ(IBM)ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಜೆರಾರ್ಡ್, ತಮ್ಮ ಮುಖದ ಸ್ವರೂಪವನ್ನೇ ಬದಲಾಯಿಸಿದ ಈ ಅಸಹ್ಯಕರ ಮೂಗಿನೊಂದಿಗೆ ಸುಮಾರು 6 ವರ್ಷಗಳ ಕಾಲ ಹೋರಾಡಿದ್ದಾರೆ. ಮೂಗಿನ ಚರ್ಮದ ಮೇಲೆ ದೊಡ್ಡದಾಗಿ ಊದಿಕೊಂಡ ಗೆಡ್ಡೆಯು, ಅವರ ಮುಖದ ಚಹರೆಯನ್ನೇ ವಿರೂಪಗೊಳಿಸಿದೆ.
ಈ ಸುದ್ದಿಯನ್ನು ಓದಿ: Viral News: ಹಿಂದೂ ಧರ್ಮ ವಿರೋಧಿ ಹೇಳಿಕೆಗೆ ಜೈ ಶ್ರೀರಾಮ್ ಘೋಷಣೆ ಕೂಗಿ ಪ್ರತ್ಯುತ್ತರ ಕೊಟ್ಟ ಮುಸ್ಲಿಂ ಪೊಲೀಸ್ ಅಧಿಕಾರಿ
ರೋಗದ ಲಕ್ಷಣಗಳು
ಜೆರಾರ್ಡ್ ಅವರನ್ನು ತಪಾಸಣೆ ನಡೆಸಿದಾಗ, ಚರ್ಮದ ಕೆಳಗಿನ ತೆಳ್ಳನೆಯ ಎಣ್ಣೆಯ ಗ್ರಂಥಿಗಳು ಅವಾಸ್ತವಿಕವಾಗಿ ಬೆಳೆಯುವುದರಿಂದ ಉಂಟಾಗುವ 'ರೈನೋಫೈಮಾ' ರೋಗ ಇರುವುದು ಕಂಡುಬಂದಿದೆ. ಚರ್ಮ ಕೆಂಪಾಗುವುದು, ಊದಿಕೊಳ್ಳುವುದು ಹಾಗೂ ವಿಶೇಷವಾಗಿ ಮೂಗಿನ ಮೇಲೆ ಮಾಂಸಪಿಂಡದಂತೆ ಗೆಡ್ಡೆ ಬೆಳೆಯುವುದು ಇದರ ಪ್ರಮುಖ ಲಕ್ಷಣಗಳಾಗಿವೆ.
ಆರಂಭದಲ್ಲಿ ಜೆರಾರ್ಡ್ ಇದನ್ನು ಗಂಭೀರವಾಗಿ ಪರಿಗಣಿಸಿರಲ್ಲಿಲ್ಲ ಮತ್ತು ಸ್ವಲ್ಪ ದಿನಗಳ ಬಳಿಕ ತಾನಾಗಿಯೇ ವಾಸಿಯಾಗಬಹುದು ಎಂದು ಭಾವಿಸಿದ್ದರು. ಆದರೆ ಕಾಲಕ್ರಮೇಣ ಅವರ ಮೂಗು ದೊಡ್ಡದಾಗಿ ಬಾಯಿ ಕೆಳಗೆ ಜೋತು ಬೀಳುವಂತಾಯಿತು.
"ಇದೊಂದು ತಾತ್ಕಾಲಿಕ ರೋಗ ಎಂದು ಭಾವಿಸಿ ಚಿಂತಿಸಿರಲಿಲ್ಲ. ಆದರೆ ಇದು ನಿರಂತರವಾಗಿ ಬೆಳೆಯ ತೊಡಗಿತು. ಜನರು ನನ್ನನ್ನು ನೋಡಿ ಮುಖ ತಿರುಗಿಸುತ್ತಿದ್ದರು ಅಲ್ಲದೇ ಮಕ್ಕಳು ಅಸಹ್ಯಪಟ್ಟುಕೊಂಡು ರೀತಿ ತುಂಬಾ ನೋವನ್ನುಂಟು ಮಾಡಿತು. ವೈದ್ಯರನ್ನು ಸಂಪರ್ಕಿಸಿದಾಗ ಯಾವುದೇ ಉಸಿರಾಟದ ತೊಂದರೆ ಇಲ್ಲವಾದ ಮೇಲೆ ಶಸ್ತ್ರಚಿಕಿತ್ಸೆಯ ಅವಶ್ಯಕತೆ ಇಲ್ಲ ಎಂದು ಹೇಳಿದ್ದರು," ಎಂದು ಜೆರಾರ್ಡ್ ತಿಳಿಸಿದರು.
ಆದರೆ, ದಿನದಿಂದ ದಿನಕ್ಕೆ ಅವರ ಮೂಗು ದೊಡ್ಡದಾಗುತ್ತಿದ್ದಂತೆ ಜೆರಾರ್ಡ್ ಆತ್ಮವಿಶ್ವಾಸ ಕಳೆದುಕೊಳ್ಳಲಾರಂಭಿಸಿದರು. ಮೊಮ್ಮಕ್ಕಳ ಜನ್ಮದಿನ, ಪಾರ್ಟಿಗಳು, ಸಮಾರಂಭಗಳಲ್ಲಿ ಭಾಗಿಯಾದ ಪರಿಸ್ಥಿತಿ ನಿರ್ಮಾಣವಾಯಿತು. ಕೊನೆಗೆ ಜೆರಾರ್ಡ್ ಅವರ ಪತ್ನಿ ಕರೋಲ್ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವಂತೆ ಮನವೊಲಿಸಿ, ಗ್ಲಾಸ್ಗೋದಲ್ಲಿರುವ ಎವರ್ ಕ್ಲಿನಿಕ್‌ಗೆ ಸಂಪರ್ಕಿಸಿದರು. ಈ ರೋಗದ ಬಗ್ಗೆ ಹೆಚ್ಚಿನ ಪರಿಣಿತಿ ಹೊಂದಿದ್ದ ಡಾ. ಕರ್ಮಾಕ್ ಕನ್ವೆರಿ ಎಂಬ ವೈದ್ಯರು, ನಾಲ್ಕು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ, ಹೆಚ್ಚಾಗಿ ಬೆಳೆದ ಗಡ್ಡೆಯನ್ನು ತೆಗೆದುಹಾಕಿ, ಜೆರಾರ್ಡ್ ಅವರ ಮೂಗಿನ ಆಕಾರವನ್ನು ಪುನರ್ ರೂಪಿಸಿದರು.
ಈ ಕುರಿತು ಪ್ರತಿಕ್ರಿಯಿಸಿರುವ ವೈದ್ಯ ಡಾ. ಕನ್ವೆರಿ, "ಇದು ನಮ್ಮ ಆಸ್ಪತ್ರೆಯಲ್ಲಿ ದಾಖಲಾದ ಅಪರೂಪದ ಪ್ರಕರಣ, ಜೆರಾರ್ಡ್ ಅವರ ಸ್ಥಿತಿ ಕಠಿಣವಾಗಿದ್ದರೂ, ನಾವು ಒಂದೇ ಸೆಷನ್‌ನಲ್ಲಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಸಿದೇವೆ," ಎಂದಿದ್ದಾರೆ. ವಿರೂಪಗೊಳಿಸಿದೆಶಸ್ತ್ರ ಚಿಕಿತ್ಸೆಯ ಬಳಿಕ ನಾನು ಮತ್ತೆ ನಾನಾಗಿದ್ದೇನೆ. ನಾನೀಗ ಮತ್ತೆ ಮೊದಲಿನಂತೆ ಹೊರಗಡೆ ಹೋಗುತ್ತಿದ್ದೇನೆ, ಗೆಳೆಯರನ್ನು ಮೀಟ್ ಮಾಡುತ್ತಿದ್ದೇನೆ. ಪತ್ನಿಯೊಂದಿಗೂ ಸಂತೋಷವಾಗಿದ್ದೇನೆ ಎಂದು ಜೆರಾರ್ಡ್ ಹರ್ಷ ವ್ಯಕ್ತಪಡಿಸಿದ್ದಾರೆ.