ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ರಸ್ತೆಯಲ್ಲಿ ಅಪಾಯಕಾರಿ ಸ್ಟಂಟ್; ಚಲಿಸುವ ಆಟೋದಲ್ಲಿ ನೇತಾಡಿ ವೃದ್ಧ ಸೈಕಲ್‌ ಸವಾರನಿಗೆ ಡಿಕ್ಕಿ ಹೊಡೆದ ಕಿಡಿಗೇಡಿ: ವಿಡಿಯೊ ವೈರಲ್

Man Performing Stunt: ಸಾಮಾಜಿಕ ಮಾಧ್ಯಮಗಳಲ್ಲಿ ಲೈಕ್ಸ್ ಮತ್ತು ವೀಕ್ಷಣೆಗಳಿಗಾಗಿ ಅಪಾಯಕಾರಿ ಸ್ಟಂಟ್‌ಗಳನ್ನು ಮಾಡುವ ಹುಚ್ಚು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈ ಪ್ರವೃತ್ತಿ ಅಮಾಯಕರ ಪ್ರಾಣಕ್ಕೆ ಕುತ್ತು ತರುತ್ತಿದೆ. ಇದೀಗ ಇಂಥದ್ದೇ ಒಂದು ಆಘಾತಕಾರಿ ಘಟನೆ ನಡೆದಿದ್ದು, ಆಟೋರಿಕ್ಷಾದಿಂದ ಹೊರಗೆ ನೇತಾಡುತ್ತಾ ರೀಲ್ಸ್ ಮಾಡಲು ಹೋದ ಯುವಕನೊಬ್ಬ, ರಸ್ತೆಯಲ್ಲಿ ಹೋಗುತ್ತಿದ್ದ ವೃದ್ಧ ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದಿದ್ದಾನೆ.

ವೃದ್ಧ ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದ ಆಟೋದಲ್ಲಿ ಸ್ಟಂಟ್ ಮಾಡಿದ ಕಿಡಿಗೇಡಿ

ನವದೆಹಲಿ, ಜೂ. 30: ನಮ್ಮ ದೇಶದ ಜನರಿಗೆ ನಾಗರಿಕ ಪ್ರಜ್ಞೆ ಕಡಿಮೆ ಎಂಬ ಮಾತು ಆಗಾಗ ಕೇಳಿ ಬರುತ್ತಿರುತ್ತದೆ. ರಸ್ತೆಯಲ್ಲಿ ವಾಹನವನ್ನು ಬೇಕಾಬಿಟ್ಟಿ ಚಲಾಯಿಸಿ ಹುಚ್ಚಾಟ ಮೆರೆಯುತ್ತಾರೆ. ಎಲ್ಲರೂ ಅಲ್ಲ, ಆದರೆ ಕೆಲವೊಬ್ಬರು ಮಾಡುವ ಈ ದುರ್ವರ್ತನೆಯಿಂದ ಉಳಿದವರು ತೊಂದರೆಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ. ಅದರಲ್ಲೂ ಸಾಮಾಜಿಕ ಮಾಧ್ಯಮದಲ್ಲಿ ಖ್ಯಾತಿ ಪಡೆಯಲು ತಮ್ಮ ಜೀವನವನ್ನು ತೊಂದರೆಗೆ ಸಿಲುಕಿಸಿದ್ದಲ್ಲೇ ಇತರರನ್ನು ತಮ್ಮ ಜೀವ ಕಳೆದುಕೊಂಡವರೇ ಬಹುತೇಕರಿದ್ದಾರೆ. ಇದೀಗ ವೈರಲ್ ಆಗಿರುವ ವಿಡಿಯೊ (Viral Video) ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.

ಹೌದು, ಸಾಮಾಜಿಕ ಮಾಧ್ಯಮಗಳಲ್ಲಿ ಲೈಕ್ಸ್ ಮತ್ತು ವೀಕ್ಷಣೆಗಳಿಗಾಗಿ ಅಪಾಯಕಾರಿ ಸ್ಟಂಟ್‌ಗಳನ್ನು ಮಾಡುವ ಹುಚ್ಚು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಅಮಾಯಕರ ಪ್ರಾಣಕ್ಕೆ ಕುತ್ತು ತರುತ್ತಿದೆ. ಇದೀಗ ಇಂಥದ್ದೇ ಒಂದು ಆಘಾತಕಾರಿ ಘಟನೆ ನಡೆದಿದ್ದು, ಆಟೋರಿಕ್ಷಾದಿಂದ ಹೊರಗೆ ನೇತಾಡುತ್ತಾ ರೀಲ್ಸ್ ಮಾಡಲು ಹೋದ ಯುವಕನೊಬ್ಬ, ರಸ್ತೆಯಲ್ಲಿ ಹೋಗುತ್ತಿದ್ದ ವೃದ್ಧ ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಸಮತೋಲನ ಕಳೆದುಕೊಂಡ ಸೈಕಲ್ ಸವಾರ ರಸ್ತೆ ಮಧ್ಯೆ ಬಿದ್ದಿದ್ದಾರೆ. ಈ ದೃಶ್ಯವು ಬೈಕ್ ಸವಾರನೊಬ್ಬನ ಡ್ಯಾಶ್‌ಕ್ಯಾಮ್‌ನಲ್ಲಿ ಸೆರೆಯಾಗಿದೆ. ಇದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಘಟನೆ ಎಲ್ಲಿ ನಡೆದಿದ್ದು ಎಂಬುದು ತಿಳಿದುಬಂದಿಲ್ಲ.

ಇಲ್ಲಿದೆ ವಿಡಿಯೊ:



ವೈರಲ್ ಆಗಿರುವ ವಿಡಿಯೊದಲ್ಲಿ, ವೇಗವಾಗಿ ಚಲಿಸುತ್ತಿರುವ ಆಟೋರಿಕ್ಷಾದಿಂದ ಯುವಕನೊಬ್ಬ ಅಪಾಯಕಾರಿ ರೀತಿಯಲ್ಲಿ ಹೊರಗೆ ದೇಹವನ್ನು ಚಾಚಿ, ಸ್ಟಂಟ್‌ ಪ್ರದರ್ಶಿಸುತ್ತಿರುವುದು ಕಂಡುಬಂದಿದೆ. ಅದೇ ಸಮಯದಲ್ಲಿ ಆಟೋದ ಒಳಗಿದ್ದ ಮತ್ತೊಬ್ಬ ವ್ಯಕ್ತಿ ಇದನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡುತ್ತಿದ್ದ ಎನ್ನಲಾಗಿದೆ. ಆದರೆ, ಈ ಹುಚ್ಚಾಟದ ನಡುವೆ ಸೈಕಲ್ ತುಳಿಯುತ್ತಾ ಹೋಗುತ್ತಿದ್ದ ವೃದ್ಧರೊಬ್ಬರಿಗೆ ಯುವಕ ಡಿಕ್ಕಿ ಹೊಡೆದಿದ್ದಾನೆ. ಸಮತೋಲನ ಕಳೆದುಕೊಂಡ ಸೈಕಲ್ ಸವಾರ ರಸ್ತೆ ಮಧ್ಯೆ ಬಿದ್ದಿದ್ದಾರೆ.

ಶಾಲೆಗೆ ಹೋಗಲು ಕಾಯುತ್ತಿದ್ದ ಅಪರಿಚಿತ ಬಾಲಕಿಗೆ ನೆರವಾದ ಬಾಲಕ

ಡಿಕ್ಕಿ ಹೊಡೆದರೂ, ಹುಚ್ಚಾಟ ಮೆರದ ವ್ಯಕ್ತಿ ಅಥವಾ ಆಟೋ ಚಾಲಕನಾಗಲಿ ಸೈಕಲ್ ಸವಾರನನ್ನು ಪರೀಕ್ಷಿಸಲು ನಿಲ್ಲಿಸಲಿಲ್ಲ. ವಾಹನವು ವೇಗವಾಗಿ ಚಲಿಸುತ್ತಲೇ ಇತ್ತು, ಗಾಯಗೊಂಡ ವ್ಯಕ್ತಿಯನ್ನು ರಸ್ತೆಯಲ್ಲಿಯೇ ಬಿಟ್ಟು ಅಲ್ಲಿಂದ ಪರಾರಿಯಾಗಿದ್ದಾರೆ. ಇದು ನೆಟ್ಟಿಗರ ಕೋಪಕ್ಕೆ ಕಾರಣವಾಗಿದೆ. ಅನೇಕರು ಈ ಘಟನೆಯನ್ನು ಹಿಟ್-ಆ್ಯಂಡ್-ರನ್ ಎಂದು ಕರೆದಿದ್ದಾರೆ.

ಆಟೋದ ಹಿಂದೆ ಬರುತ್ತಿದ್ದ ಬೈಕ್ ಸವಾರನ ಹೆಲ್ಮೆಟ್ ಕ್ಯಾಮರಾದಲ್ಲಿ ಈ ಸಂಪೂರ್ಣ ದೃಶ್ಯ ಸೆರೆಯಾಗಿದೆ. ವೃದ್ಧ ಸವಾರ ಬಿದ್ದ ತಕ್ಷಣ ಆ ಬೈಕ್ ಸವಾರ ತಕ್ಷಣವೇ ತನ್ನ ವಾಹನವನ್ನು ನಿಲ್ಲಿಸಿ, ಅವರ ಮೇಲಿದ್ದ ಸೈಕಲ್ ಅನ್ನು ಪಕ್ಕಕ್ಕೆ ಸರಿಸಿ, ಅವರನ್ನು ಎಬ್ಬಿಸಲು ಸಹಾಯ ಮಾಡಿದ್ದಾನೆ. ಇದನ್ನು ನೋಡಿದ ಸುತ್ತಮುತ್ತಲಿದ್ದ ಇತರರು ಕೂಡ ಓಡಿ ಬಂದು ವೃದ್ಧರ ನೆರವಿಗೆ ನಿಂತಿದ್ದಾರೆ.

ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ಇಂತಹ ಬೇಜವಾಬ್ದಾರಿ ವರ್ತನೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೇವಲ ಸಾಮಾಜಿಕ ಮಾಧ್ಯಮದ ಪ್ರಸಿದ್ಧಿಗಾಗಿ ಇತರರ ಜೀವದ ಜೊತೆ ಆಟವಾಡುವ ಇಂತಹ ಕಿಡಿಗೇಡಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.