ಮುಂಬೈ, ಡಿ. 4: ಮುಂಬೈಯ (Mumbai) ವ್ಯಕ್ತಿಯೊಬ್ಬ ಹೊಸ ಮನೆ ಖರೀದಿಸಿ ತನ್ನ ಹೆತ್ತವರನ್ನು ಅಚ್ಚರಿಗೊಳಿಸಿದ ಹೃದಯಸ್ಪರ್ಶಿ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದ್ದು, ನೆಟ್ಟಿಗರನ್ನು ಮಂತ್ರಮುಗ್ಧಗೊಳಿಸಿದೆ. ವ್ಯಾಪಕವಾಗಿ ಹಂಚಿಕೊಳ್ಳಲಾದ ಈ ವಿಡಿಯೊದಲ್ಲಿ, ದಂಪತಿಯನ್ನು ಅವರ ಪುತ್ರ ಬಾಡಿಗೆ ಅಪಾರ್ಟ್‌ಮೆಂಟ್ ಎಂದು ಹೇಳಿ ಮನೆಯೊಂದಕ್ಕೆ ಕರೆದುಕೊಂಡು ಹೋಗಿದ್ದಾನೆ. ಬಳಿಕ ಆ ಮನೆಯನ್ನು ಖರೀದಿಸಿದ್ದಾಗಿ ಹೇಳಿ ಹೆತ್ತವರಿಗೆ ಸರ್‌ಪ್ರೈಸ್ ನೀಡಿದ್ದಾನೆ. ಆಶಿಶ್ ಜೈನ್ ಎಂಬಾತ ಹೆತ್ತವರಿಗೆ ಈ ರೀತಿ ಸರ್‌ಪ್ರೈಸ್ ನೀಡಿದ್ದು, ಆಸ್ತಿ ದಾಖಲೆಗಳು ಮತ್ತು ಅವರ ಹೆಸರು ಹೊಂದಿರುವ ನಾಮಫಲಕವನ್ನು ಹಸ್ತಾಂತರಿಸಿದ್ದಾನೆ. ಈ ಅಪರೂಪದ ಕ್ಷಣ ವಿಡಿಯೊದಲ್ಲಿ ಸೆರೆಯಾಗಿದೆ.
ವಿಡಿಯೊದ ಆರಂಭದಲ್ಲಿ ಜೈನ್ ತನ್ನ ಹೆತ್ತವರೊಂದಿಗೆ ಹೊಸದಾಗಿ ನಿರ್ಮಿಸಲಾದ ಸುಸಜ್ಜಿತ ಫ್ಲ್ಯಾಟ್ ಒಳಗೆ ನಿಂತಿರುವುದು ಕಂಡು ಬಂದಿದೆ. ಆತನ ತಂದೆ ಮತ್ತು ತಾಯಿ ತಾವು ಹೊಸ ಬಾಡಿಗೆ ಮನೆಗೆ ಬಂದಿದ್ದೇವೆ ಎಂದು ನೋಡುತ್ತ ನಿಂತಿದ್ದರು. ಇದು ಮತ್ತೊಂದು ಬಾಡಿಗೆ ಮನೆ ಎಂದುಕೊಂಡಿದ್ದರು. ಈ ವೇಳೆ ಆಶಿಶ್ ಜೈನ್ ಆಸ್ತಿ ದಾಖಲೆಗಳನ್ನು ತನ್ನ ಪೋಷಕರ ಕೈಗೆ ಇಡುತ್ತ, ನಿಮಗಾಗಿ ಮನೆಯನ್ನು ಖರೀದಿಸಿದ್ದೇನೆ. ಪತ್ರ ಮತ್ತು ಮುಖ್ಯ ದ್ವಾರದ ನಾಮಫಲಕದಲ್ಲಿರುವ ಹೆಸರು ನಿಮಗೆ ಸೇರಿವೆ ಎಂದು ಅವರಿಗೆ ಹೇಳಿದ್ದಾನೆ. ಈ ವೇಳೆ ಪೋಷಕರು ಒಂದು ಕ್ಷಣ ಅವಕ್ಕಾಗಿ ಆನಂದಭಾಷ್ಪ ಸುರಿಸಿದ್ದಾರೆ.
ಅಮ್ಮನ ಮಡಿಲಲ್ಲಿ ಮಲಗಬೇಕು ಎಂದು ಶಾಲೆಯಲ್ಲಿ ಕಣ್ಣೀರಿಟ್ಟ ಪುಟ್ಟ ಮಗು
ಪೋಷಕರ ಮುಖಭಾವ ಹೃದಯ ಸ್ಪರ್ಶಿಸುವಂತಿದೆ. ಆಶಿಶ್ ತಂದೆ ಅವನನ್ನು ಬಿಗಿಯಾಗಿ ಅಪ್ಪಿಕೊಂಡು, ಅವನ ಹಣೆಯ ಮೇಲೆ ಮುತ್ತಿಟ್ಟು, ಸಂತೋಷ ವ್ಯಕ್ತಪಡಿಸಿದರು. ಆರಂಭದಲ್ಲಿ ದಿಗ್ಭ್ರಮೆಗೊಂಡು ಮೌನವಾಗಿದ್ದ ಆತನ ತಾಯಿ, ಕಣ್ಣೀರು ಸುರಿಸುತ್ತಾ ಮಗನನ್ನು ಅಪ್ಪಿಕೊಂಡಿದ್ದಾರೆ.
ವಿಡಿಯೊ ವೀಕ್ಷಿಸಿ:
ನಂತರ ಆಶಿಶ್ ಜೈನ್ ಪೋಷಕರಿಗೆ ಕೀ ಹಸ್ತಾಂತರಿಸುತ್ತಾ, ಮೃದುವಾಗಿ ಈ ಮನೆ ನಿಮ್ಮದು ಎಂದು ಹೇಳುವ ಸಾಲು ಈ ವಿಡಿಯೊದ ಭಾವನಾತ್ಮಕ ಹೈಲೈಟ್ ಆಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೊವನ್ನು ಹಂಚಿಕೊಂಡ ಜೈನ್, ʼʼಅವರ ಸಂತೋಷ.. ಎಲ್ಲವೂʼʼ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೊ ಶೀಘ್ರದಲ್ಲೇ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಗರ ಹೃದಯ ಕರಗಿಸಿದೆ.
ಸದ್ಯ ಈ ವಿಡಿಯೊಗೆ ಮೆಚ್ಚುಗೆಯ ಮಹಾಪೂರವನ್ನೇ ಸಿಕ್ಕಿದೆ. ಸೋಶಿಯಲ್ ಮೀಡಿಯಾ ಬಳಕೆದಾರರು ಜೈನ್ ತನ್ನ ಹೆತ್ತವರನ್ನು ಹೃತ್ಪೂರ್ವಕವಾಗಿ ಗೌರವಿಸಿದ್ದಕ್ಕಾಗಿ ಶ್ಲಾಘಿಸಿದ್ದಾರೆ. ಅನೇಕರು ಈ ದೃಶ್ಯವನ್ನು ಪ್ರತಿಯೊಬ್ಬ ಪೋಷಕರ ಕನಸು ಎಂದು ಕರೆದಿದ್ದಾರೆ. ಸಾವಿರಾರು ಮಂದಿ ಕಮೆಂಟ್ ಮಾಡಿದ್ದಾರೆ.
ಅವರ ತಂದೆಯ ಅಭಿವ್ಯಕ್ತಿಯು ಅಪ್ಪಟ ಚಿನ್ನ ಎಂದು ಒಬ್ಬ ಬಳಕೆದಾರರು ಬರೆದರೆ, ಇನ್ನೊಬ್ಬರು ಅಯ್ಯೋ... ತಾಯಿಯ ಪ್ರತಿಕ್ರಿಯೆ ಅಮೂಲ್ಯ ಎಂದು ಹಂಚಿಕೊಂಡಿದ್ದಾರೆ. ಇನ್ನು ಕೆಲವರು ಜೈನ್ ಅವರನ್ನು ಆಶೀರ್ವಾದದಿಂದ ಹುಟ್ಟಿದ ಮಗ ಎಂದು ಕರೆದರು.