ಭಾವ್‍ನಗರ: ಬೇಟೆಯನ್ನು ತಿನ್ನುತ್ತಿದ್ದ ಸಿಂಹದ ವಿಡಿಯೊ ಚಿತ್ರೀಕರಿಸುವ ಸಲುವಾಗಿ ವ್ಯಕ್ತಿಯೊಬ್ಬ ಅದರ ಬಳಿಗೆ ಹೋದ ಅಪಾಯಕಾರಿ ಘಟನೆ ಗುಜರಾತ್‌ನ ಭಾವನಗರದಲ್ಲಿ ನಡೆದಿದೆ. ಅದೃಷ್ಟವಶಾತ್ ಸಿಂಹ ಯಾವುದೇ ಹಾನಿ ಉಂಟು ಮಾಡದೆ ಇರುವುದರಿಂದ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ತನ್ನ ಬೇಟೆಯನ್ನು ಆನಂದಿಸುತ್ತಿದ್ದ ಸಿಂಹದ ಹತ್ತಿರ ವ್ಯಕ್ತಿಯೊಬ್ಬ ಹೋಗುವುದನ್ನು ವಿಡಿಯೊದಲ್ಲಿ ನೋಡಬಹದು. ಸಿಂಹ ಬೇಟೆಯನ್ನು ತಿನ್ನುತ್ತಿರುವ ದೃಶ್ಯವನ್ನು ಚಿತ್ರೀಕರಿಸುವ ಸಲುವಾಗಿ ಆತ ಅದರ ಬಳಿ ಹೋಗಿದ್ದಾನೆ. ಮನುಷ್ಯ ತನ್ನ ಹತ್ತಿರ ಬರುತ್ತಿರುವುದನ್ನು ಗಮನಿಸಿದ ಸಿಂಹವು ಅವನ ಮೇಲೆ ಗರ್ಜಿಸುತ್ತದೆ. ಈ ವೇಳೆ ಆತ ಹಿಂದೆ ಸರಿದಿದ್ದಾನೆ. ಆದರೆ ಸಿಂಹ ದಾಳಿ ಮಾಡುವುದಿಲ್ಲ.
ವರದಿಯ ಪ್ರಕಾರ, ಈ ಘಟನೆ ತಲಾಜಾ ಪ್ರದೇಶದ ಬಂಬೋರ್ ಮತ್ತು ತಲ್ಲಿ ಗ್ರಾಮಗಳ ನಡುವಿನ ಸಿಮ್ ಪ್ರದೇಶದಲ್ಲಿ ನಡೆದಿದೆ. ವಿಡಿಯೋ ವೈರಲ್ ಆದ ನಂತರ ಅರಣ್ಯ ಇಲಾಖೆಯ ಅಧಿಕಾರಿಗಳು ಆ ವ್ಯಕ್ತಿಯನ್ನು ಆತನ ಅಜಾಗರೂಕ ಕೃತ್ಯಕ್ಕಾಗಿ ಬಂಧಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೊ ವೈರಲ್ ಆಗಿದ್ದು, ನೆಟ್ಟಿಗರು ಕೂಡ ಆತನ ಕೃತ್ಯವನ್ನು ಟೀಕಿಸಿದ್ದಾರೆ.
ವಿಡಿಯೊ ವೀಕ್ಷಿಸಿ:
ಆ ವ್ಯಕ್ತಿಯ ನಿರ್ಲಕ್ಷ್ಯದ ನಡೆಗಾಗಿ ಅವನನ್ನು ನೆಟ್ಟಿಗರು ಮೂರ್ಖ ಎಂದು ಕರೆದಿದ್ದಾರೆ. ಸಿಂಹ ಗರ್ಜಿಸುತ್ತಾ ಮುಂದೆ ಬಂದರೂ ಆತ ಮಾತ್ರ ವಿಡಿಯೊ ಚಿತ್ರೀಕರಿಸುವುದನ್ನು ಮುಂದುವರೆಸಿದ್ದಾನೆ. “ಈ ಯುವಕ ಫೋಟೋ ತೆಗೆಯಲು ಸಿಂಹದ ಬಳಿ ತಲುಪಿದಾಗ ಸಿಂಹವು ತನ್ನ ಬೇಟೆಯನ್ನು ಸಂತೋಷದಿಂದ ತಿನ್ನುತ್ತಿತ್ತು. ಆಗ ಸಿಂಹ ಸ್ವಲ್ಪ ಅಸಮಾಧಾನ ವ್ಯಕ್ತಪಡಿಸಿತು. ಈ ವಿಡಿಯೊ ಗುಜರಾತ್‌ನ ಭಾವ್‍ನಗರದಲ್ಲಿ ನಡೆದಿದೆ” ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಲಾಗಿದೆ.
ವರದಿಯ ಪ್ರಕಾರ ವ್ಯಕ್ತಿಯನ್ನು ಗೌತಮ್ ಎಂದು ಗುರುತಿಸಲಾಗಿದ್ದು, ಆತನನ್ನು ಅರಣ್ಯ ಕಾಯ್ದೆಯ ವಿವಿಧ ವಿಭಾಗಗಳ ಅಡಿಯಲ್ಲಿ ಬಂಧಿಸಲಾಗಿದೆ. ಸಿಂಹ ಆ ಬೇಟೆಯನ್ನು ಬಿಟ್ಟು ಇವನ ಮೇಲೆ ದಾಳಿ ಮಾಡದೇ ಇದ್ದಿದ್ದು, ಈತನ ಅದೃಷ್ಟ. ಇಲ್ಲದಿದ್ದರೆ ಇವನ ಕಥೆ ಅಷ್ಟೇ ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಸಿಂಹ ಅವನನ್ನು ಸುಲಭವಾಗಿ ಮುಗಿಸುತ್ತಿತ್ತು. ಆದರೆ ಅದು ದಯೆ ತೋರಿಸಿತು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಅವನಿಗೆ ದಂಡ ವಿಧಿಸಬೇಕು ಮತ್ತು ಅಂತಹ ಸ್ಥಳಗಳಿಗೆ ಹೋಗುವುದನ್ನು ತಡೆಯಬೇಕು ಎಂದು ಮೂರನೇ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.