ಭೋಪಾಲ್, ಜ. 23: ಹಾಡಹಗಲೇ ಮುಸುಕುಧಾರಿ ಪುರುಷರು ಯುವತಿಯೊಬ್ಬರನ್ನು ಅಪಹರಿಸಿರುವ (Kidnap) ಆಘಾತಕಾರಿ ಘಟನೆ ಮಧ್ಯ ಪ್ರದೇಶದ ಗ್ವಾಲಿಯರ್‌ನ (Gwalior) ಅತ್ಯಂತ ಜನದಟ್ಟಣೆ ಪ್ರದೇಶಗಳಲ್ಲಿ ಒಂದಾದ ದಾಲ್ ಬಜಾರ್‌ನಲ್ಲಿ ನಡೆದಿದೆ. ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾದ ಈ ಅಪರಾಧ ಕೃತ್ಯವು ಇದೀಗ ಬೆಳಕಿಗೆ ಬಂದಿದ್ದು, ನಗರದಾದ್ಯಂತ ಆಘಾತ ಸೃಷ್ಟಿಸಿದೆ.
ಈ ಘಟನೆ ದಾಲ್ ಬಜಾರ್‌ನಲ್ಲಿ ನಡೆದಿದ್ದು, ಬೆಳಗ್ಗೆಯಿಂದ ರಾತ್ರಿಯವರೆಗೆ ವ್ಯಾಪಾರಿಗಳು, ಗ್ರಾಹಕರು ಮತ್ತು ಪ್ರಯಾಣಿಕರಿಂದ ತುಂಬಿ ತುಳುಕುವ ಪ್ರದೇಶ ಇದಾಗಿದೆ. ಮುಸುಕುಧಾರಿ ವ್ಯಕ್ತಿಗಳು ಸ್ಕೂಟರ್ ಮತ್ತು ಬೈಕ್‌ನಲ್ಲಿ ಆಗಮಿಸಿ ರಸ್ತೆಯ ಮಧ್ಯದಲ್ಲಿ ಕಾರನ್ನು ನಿಲ್ಲಿಸುತ್ತಿರುವುದನ್ನು ಸಿಸಿಟಿವಿ ದೃಶ್ಯಾವಳಿಗಳು ತೋರಿಸಿವೆ. ಕಾರಿನಲ್ಲಿದ್ದವರು ಬಾಗಿಲು ತೆರೆಯಲು ನಿರಾಕರಿಸಿದಾಗ, ಶಂಕಿತರು ಕಾರಿನ ಕಿಟಕಿಯನ್ನು ಒಡೆದು, ಹಿಂದಿನ ಸೀಟಿನಿಂದ ಯುವತಿಯೊಬ್ಬಳನ್ನು ಬಲವಂತವಾಗಿ ಹೊರಗೆಳೆದರು.
ಹಾಡಹಗಲೇ ಯುವತಿಯ ಅಪಹರಣದ ದೃಶ್ಯ:
ಮಗಳು ಪ್ರಿಯಕರನೊಟ್ಟಿಗೆ ಎಸ್ಕೇಪ್; ಇತ್ತ ಪತಿಗೇ ಚಾಕು ಇರಿದು ಕೊಲೆ ಮಾಡಿದ ಪತ್ನಿ
ಕಾರನ್ನು ಒಬ್ಬ ಯುವಕ ಚಲಾಯಿಸುತ್ತಿದ್ದರೆ, ಅವನ ಪಕ್ಕದ ಸೀಟಿನಲ್ಲಿ ಮತ್ತೊಬ್ಬ ಮಹಿಳೆ ಕುಳಿತಿದ್ದಳು. ಅಪಹರಣಕ್ಕೊಳಗಾದ ಯುವತಿ ಹಿಂದಿನ ಸೀಟಿನಲ್ಲಿ ಕುಳಿತಿದ್ದಳು. ನಾಟಕೀಯ ಸನ್ನಿವೇಶದ ಸಮಯದಲ್ಲಿ ಕಾರಿನಲ್ಲಿದ್ದ ಯಾರೊಬ್ಬರೂ ಎಚ್ಚರಿಕೆ ನೀಡಲಿಲ್ಲ, ಸಹಾಯಕ್ಕಾಗಿ ಹಾರ್ನ್ ಮಾಡಲಿಲ್ಲ ಅಥವಾ ದಾಳಿಕೋರರನ್ನು ತಡೆಯಲು ಪ್ರಯತ್ನಿಸಲಿಲ್ಲ ಎಂಬುದು ಪೊಲೀಸರನ್ನು ಗೊಂದಲಕ್ಕೀಡು ಮಾಡಿದೆ.
ಸಾರ್ವಜನಿಕರು ಯಾವುದೇ ಪ್ರತಿಕ್ರಿಯೆ ನೀಡದಿರುವುದು ನಿಜಕ್ಕೂ ಆಘಾತಕಾರಿ. ಮಾರುಕಟ್ಟೆಯಲ್ಲಿ ಹೆಚ್ಚಿನ ಜನಸಂದಣಿ ಇದ್ದರೂ, ಯಾವುದೇ ವ್ಯಾಪಾರಿಯಾಗಿರಲಿ, ಗ್ರಾಹಕರು ಅಥವಾ ದಾರಿಹೋಕರು ದುಷ್ಕರ್ಮಿಗಳಿಗೆ ಸವಾಲು ಹಾಕಲು ಮುಂದೆ ಬರಲಿಲ್ಲ. ಅಪಹರಣಕಾರರು ಆತಂಕಕಾರಿಯಾದ ಕೃತ್ಯವನ್ನು ಸರಾಗವಾಗಿ ನಡೆಸಿದರು. ಯಾಕೆಂದರೆ ಅಲ್ಲಿದ್ದ ಸಾರ್ವಜನಿಕರು ತಮಗೇನೂ ಗೊತ್ತೇ ಆಗಲಿಲ್ಲ ಎಂಬಂತೆ ಇದ್ದರು ಎಂದು ಮೂಲಗಳು ತಿಳಿಸಿವೆ.
ವಿಚಿತ್ರ ಎಂದರೆ, ಕೂಗಳತೆ ದೂರದಲ್ಲಿ ಪೊಲೀಸ್ ಠಾಣೆಯಿದ್ದರೂ ಯಾವುದೇ ದೂರು ದಾಖಲಾಗಲಿಲ್ಲ. ಘಟನೆಯ ನಂತರ ಚಾಲಕನಾಗಲಿ ಅಥವಾ ಅವನ ಜತೆಗಿದ್ದ ಮಹಿಳೆಯಾಗಲಿ ಪೊಲೀಸರನ್ನು ಸಂಪರ್ಕಿಸಲಿಲ್ಲ. ಸಿಸಿಟಿವಿ ದೃಶ್ಯಾವಳಿಗಳು ವೈರಲ್ ಆದ ನಂತರವೇ ಪೊಲೀಸರು ಕ್ರಮ ಕೈಗೊಂಡರು. ಮುಸುಕುಧಾರಿಗಳು ಮತ್ತು ಕೃತ್ಯದಲ್ಲಿ ಭಾಗಿಯಾಗಿರುವ ವಾಹನಗಳನ್ನು ಗುರುತಿಸಲು ತಂಡಗಳು ವಿಡಿಯೊವನ್ನು ಸ್ಕ್ಯಾನ್ ಮಾಡುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಂಬೈನಲ್ಲಿ ಪೊಲೀಸ್ ಅಧಿಕಾರಿಯ ಮಗನನ್ನು ಅಪಹರಿಸಲು ಪ್ರಯತ್ನ
ಪೊಲೀಸ್ ಅಧಿಕಾರಿಯ ಮಗನನ್ನೇ ಅಪಹರಿಸಲು ಯತ್ನಿಸಿರುವ ಘಟನೆ ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ ನಡೆದಿದೆ. ಈ ಘಟನೆ ಬುಧವಾರ (ಜನವರಿ 21) ಸಂಜೆ ಮುಂಬೈಯ ವರ್ಲಿ ಪ್ರದೇಶದಲ್ಲಿ ಸಂಭವಿಸಿದೆ. ಅದೃಷ್ಟವಶಾತ್, ಮಗುವಿನ ತಾಯಿ ಜಾಗರೂಕರಾಗಿದ್ದರು ಮತ್ತು ಸಮಯಕ್ಕೆ ಸರಿಯಾಗಿ ಎಚ್ಚರಿಕೆ ನೀಡಿ ಅಪಹರಣ ಪ್ರಯತ್ನವನ್ನು ವಿಫಲಗೊಳಿಸಿದರು. ಆರೋಪಿಯನ್ನು ಸ್ಥಳದಲ್ಲೇ ಬಂಧಿಸಲಾಯಿತು.
ಮಗುವಿನ ತಂದೆ ಸಚಿನ್ ಥೋಂಬರೆ ಸಬ್ ಇನ್ಸ್‌ಪೆಕ್ಟರ್ ಆಗಿದ್ದು, ಪ್ರಸ್ತುತ ಕೊಲಾಬಾ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪೊಲೀಸರ ಪ್ರಕಾರ, ಮಗುವಿನ ತಾಯಿ ಆ ಸಂಜೆ ಮನೆಯಲ್ಲಿ ಅಡುಗೆ ಮಾಡುತ್ತಿದ್ದಾಗ, ಆಕೆಯ 5 ವರ್ಷದ ಮಗ ಪಕ್ಕದ ಮನೆಯಲ್ಲಿ ವಾಸಿಸುತ್ತಿದ್ದ ಹುಡುಗಿಯ ಜತೆ ಅಂಗಡಿಗೆ ಹೋಗಿದ್ದ. ಸ್ವಲ್ಪ ಸಮಯದ ನಂತರ, ಹುಡುಗಿ ಮನೆಗೆ ಓಡಿ ಬಂದು ಮಗುವನ್ನು ಬಲವಂತವಾಗಿ ಕರೆದುಕೊಂಡು ಹೋಗಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದಳು.
ಮಗುವಿನ ತಾಯಿ ತಕ್ಷಣ ಬಂದು ಮಗುವನ್ನು ಬೀಚ್‌ಗೆ ಕರೆದೊಯ್ಯಲು ಪ್ರಯತ್ನಿಸುತ್ತಿದ್ದ ಮಧ್ಯ ವಯಸ್ಕ ವ್ಯಕ್ತಿಯನ್ನು ನೋಡಿದರು. ಅವರು ಕಿರುಚಲು ಪ್ರಾರಂಭಿಸಿದರು. ಆಕೆಯ ಧ್ವನಿ ಕೇಳಿ ಜನರು ಹತ್ತಿರದಲ್ಲಿ ಜಮಾಯಿಸಿದರು. ಸ್ಥಳೀಯರ ಸಹಾಯದಿಂದ ಆರೋಪಿಯನ್ನು ಬಂಧಿಸಲಾಯಿತು ಮತ್ತು ಮಗುವನ್ನು ಸುರಕ್ಷಿತವಾಗಿ ರಕ್ಷಿಸಲಾಯಿತು. ತಕ್ಷಣವೇ ಮುಂಬೈ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಆರೋಪಿಯ ವಿರುದ್ಧ ಅಪಹರಣ ಯತ್ನಕ್ಕೆ ಸಂಬಂಧಿಸಿದ ವಿಭಾಗಗಳ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದು, ಕ್ರಮ ಕೈಗೊಂಡಿದ್ದಾರೆ.