ಅಹಮದಾಬಾದ್: ನವರಾತ್ರಿ ಹಬ್ಬದ ಸಂದರ್ಭದಲ್ಲಿ ಗುಜರಾತ್‍ನಲ್ಲಿ ಗಾರ್ಬಾ ನೃತ್ಯ (Garba Tradition) ಪ್ರದರ್ಶಿಸುವುದು ಸಂಪ್ರದಾಯ. ಹೆಣ್ಮಕ್ಕಳು ಸಂಪ್ರದಾಯದಂತೆ ಸೀರೆ ಧರಿಸಿ ನೃತ್ಯ ಮಾಡುತ್ತಾರೆ. ಆದರೆ, ಅಹಮದಾಬಾದ್‍ನ (Ahmedabad) ಕೋಟೆಯ ನಗರದ ಸದು ಮಾತಾ ನಿ ಪೋಲ್‌ನ ಕಿರಿದಾದ ಓಣಿಗಳಲ್ಲಿ, ಪ್ರತಿ ನವರಾತ್ರಿಯಂದು ಹಬ್ಬದ ಎಂಟನೇ ರಾತ್ರಿ ಬರೋಟ್ ಸಮುದಾಯದ ಪುರುಷರು ಸೀರೆ ಉಟ್ಟು ಗರ್ಬಾ ನೃತ್ಯ ಮಾಡುತ್ತಾರೆ. ಇದು ಇಲ್ಲಿನ ವಿಶೇಷ. ಪುರುಷರು ಗಾರ್ಬಾ ನೃತ್ಯ ಪ್ರದರ್ಶಿಸುವುದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ.
ಹೌದು, ಇಲ್ಲಿ 200 ವರ್ಷಗಳಷ್ಟು ಹಳೆಯದಾದ ಸಂಪ್ರದಾಯವನ್ನು ಈಗಲೂ ಪಾಲಿಸಿಕೊಂಡು ಬರಲಾಗುತ್ತಿದೆ. ಸದುಮಾ ನಾ ಗರ್ಬಾ ಎಂದು ಕರೆಯಲ್ಪಡುವ ಈ ವಿಶಿಷ್ಟ ಸಂಪ್ರದಾಯವು ಶತಮಾನಗಳಷ್ಟು ಹಳೆಯದಾದ ಭಕ್ತಿ, ದ್ರೋಹ ಮತ್ತು ಪ್ರಾಯಶ್ಚಿತ್ತದ ಕಥೆಯಲ್ಲಿ ಬೇರೂರಿದೆ. ಈ ಕಾರ್ಯಕ್ರಮದ ಒಂದು ವಿಡಿಯೊ ವೈರಲ್ ಆಗಿದ್ದು, 1.9 ಮಿಲಿಯನ್ ವೀಕ್ಷಣೆಗಳು ಮತ್ತು 60,000 ಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ. ಇದು ಇತಿಹಾಸ, ಸಂಸ್ಕೃತಿ ಮತ್ತು ಲಿಂಗ ಪಾತ್ರಗಳ ಕುರಿತು ಹೊಸ ಚರ್ಚೆಗೆ ನಾಂದಿ ಹಾಡಿದೆ.
ವಿಡಿಯೊ ವೀಕ್ಷಿಸಿ:
ಪುರುಷರು ಸೀರೆ ಧರಿಸಿ ನೃತ್ಯ ಮಾಡುವುದೇಕೆ?
ಸ್ಥಳೀಯ ದಂತಕಥೆಯ ಪ್ರಕಾರ, ಈ ಆಚರಣೆಯು ಮೊಘಲ್ ಕುಲೀನನೊಬ್ಬ ತನ್ನನ್ನು ಉಪಪತ್ನಿಯಾಗಿ ತೆಗೆದುಕೊಳ್ಳಲು ಪ್ರಯತ್ನಿಸಿದಾಗ ಈ ಸಮುದಾಯದ ಸದುಬೆನ್ ಎಂಬ ಮಹಿಳೆಯ ದುರಂತ ಕಥೆಯನ್ನು ನೆನಪಿಸುತ್ತದೆ. ಆ ಪುರುಷರು ಅವಳನ್ನು ರಕ್ಷಿಸಲು ನಿರಾಕರಿಸಿದರು ಮತ್ತು ಸದುಬೆನ್ ತನ್ನ ಮಗುವನ್ನು ಕಳೆದುಕೊಂಡಳು. ಎದೆಗುಂದಿದ ಅವಳು ಪುರುಷರನ್ನು ಶಪಿಸಿ, ಅವರ ವಂಶಸ್ಥರು ಹೇಡಿಗಳಾಗುತ್ತಾರೆ ಎಂದು ಶಾಪ ನೀಡಿದಳು. ಸಮುದಾಯವು ಪಶ್ಚಾತ್ತಾಪದಿಂದ ನೆನಪಿಸಿಕೊಳ್ಳುವ ಪರಂಪರೆಯನ್ನು ಬಿಟ್ಟುಹೋದಳು. ಹೀಗಾಗಿ ಈ ಆಚರಣೆ ಚಾಲ್ತಿಗೆ ಬಂತು.
ಇಂದಿಗೂ, ಬರೋಟ್ ಸಮುದಾಯದ ಪುರುಷರು ನವರಾತ್ರಿಯ ಎಂಟನೇ ರಾತ್ರಿಯ ಗರ್ಬಾ ಸಮಯದಲ್ಲಿ ಸೀರೆಯನ್ನು ಉಟ್ಟು ನೃತ್ಯ ಮಾಡುತ್ತಾರೆ. ಇದು ನಮ್ರತೆ ಮತ್ತು ಪಶ್ಚಾತ್ತಾಪವನ್ನು ಸಂಕೇತಿಸುತ್ತದೆ. ಹಾಗೆಯೇ ಸದುಬೆನ್ ಅವರ ತ್ಯಾಗಕ್ಕೆ ಗೌರವ ಸಲ್ಲಿಸುತ್ತದೆ. ಇನ್ಸ್ಟಾಗ್ರಾಂನಲ್ಲಿ ಈ ವಿಡಿಯೊ ವೈರಲ್ ಆಗಿದ್ದು, ಕೆಲವು ಬಳಕೆದಾರರು ಮೆಚ್ಚುಗೆ ಸೂಚಿಸಿದರು.
ಬರೋಟ್ ಸಮುದಾಯದ ಪುರುಷರು ಸದುಬೆನ್‍ರನ್ನು ರಕ್ಷಿಸಲು ಅಸಮರ್ಥರಾಗಿದ್ದಕ್ಕಾಗಿ ಪಶ್ಚಾತ್ತಾಪ ಮತ್ತು ಕ್ಷಮೆಯಾಚನೆಯ ಕ್ರಿಯೆಯಾಗಿ ಮಹಿಳೆಯರಂತೆ ಉಡುಗೆ ತೊಡುವ 200 ವರ್ಷಗಳಷ್ಟು ಹಳೆಯ ಸಂಪ್ರದಾಯವಿದು ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ. ಇದು ಪುರುಷರಿಗೆ ನಮ್ರತೆ ಮತ್ತು ಮಹಿಳೆಯರ ಬಗ್ಗೆ ಗೌರವವನ್ನು ಕಲಿಸುವುದು. ಬಂಗಾಳದ ಕೆಲವು ಭಾಗಗಳಲ್ಲಿಯೂ ಇದೇ ರೀತಿಯ ಸಂಪ್ರದಾಯವಿದೆ ಎಂದು ಮತ್ತೊಬ್ಬ ಬಳಕೆದಾರರು ಹೇಳಿದರು.
ಇದನ್ನೂ ಓದಿ: Viral News: ಇದಪ್ಪ ಮಾನವೀಯತೆ ಅಂದ್ರೆ; ಗಾಯಗೊಂಡ ಮಹಿಳೆಯನ್ನು ಬೆನ್ನಮೇಲೆ ಹೊತ್ತು ಆಸ್ಪತ್ರೆಗೆ ದಾಖಲಿಸಿದ ಕಾನ್ಸ್‌ಟೇಬಲ್