ನವದೆಹಲಿ, ಮಾ. 10: ಇತ್ತೀಚೆಗೆ ಮಹಿಳೆಯರ ಸುರಕ್ಷತೆಗೆ ಬಗ್ಗೆ ಎಷ್ಟೇ ನಿಯಮ ಜಾರಿಗೊಳಿಸಿದರೂ ಕಿರುಕುಳ ತಪ್ಪಿಲ್ಲ. ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದಂತ ಪ್ರಕರಣಗಳು ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಯುವಕರಿಬ್ಬರು ಮದುವೆ ಮನೆಯಲ್ಲಿ ಯುವತಿಯೊಬ್ಬಳನ್ನು ಹಿಂಬಾಲಿಸಿ ಕಿರುಕುಳ ನೀಡಿರುವ ಘಟನೆ ವರದಿಯಾಗಿದೆ. ಆಮಂತ್ರಣವಿಲ್ಲದ ಮದುವೆಗೆ ತೆರಳಿ ಅಲ್ಲಿದ್ದ ಯುವತಿಯೊಬ್ಬಳಿಗೆ ಕಿರುಕುಳ ನೀಡಿದ್ದಲ್ಲದೆ ಆಕೆಯ ಹಾಸ್ಟೆಲ್‌ವರೆಗೆ ಬೆನ್ನಟ್ಟಿದ್ದಾರೆ. ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.
ಮದುವೆ ಸಮಾರಂಭವೊಂದರಲ್ಲಿ ಪರಿಚಯ ಇಲ್ಲದೆ ಇರುವ ಯುವತಿಯನ್ನು ಗಮನಿಸಿದ ಇಬ್ಬರು ಯುವಕರು ಕಿರುಕುಳ ಎಸಗಿದ್ದಾರೆ. ದೆಹಲಿಯಲ್ಲಿ ಈ ಘಟನೆ ನಡೆದಿದ್ದು ಹುಡುಗಿ ತನ್ನ ಹಾಸ್ಟೆಲ್ ಕಡೆಗೆ ಹೋಗುವಾಗ ಅವಳ ಸ್ಕೂಟರ್ ಹಿಂಬಾಲಿಸುತ್ತಿರುವ ದೃಶ್ಯ ಕಂಡು ಬಂದಿದೆ. ಈ ವಿಡಿಯೊವು ಮಹಿಳೆಯರ ಸುರಕ್ಷತೆ ಬಗ್ಗೆ ಕಳವಳ ಮೂಡಿಸಿದ್ದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಡಿಯೊ ನೋಡಿ:
ಮದುವೆ ಸಮಾರಂಭದಲ್ಲಿ ಹುಡುಗಿಯನ್ನು ಗಮನಿಸಿದ ನಂತರ ಅವರು ಹೇಗೆ ಆಕೆಯನ್ನು ಹಿಂಬಾಲಿಸಿದರು ಎಂಬುದನ್ನು ಒಬ್ಬ ಯುವಕ ವಿಡಿಯೊ ಮೂಲಕ ಚಿತ್ರೀಕರಿಸಿದ್ದಾನೆ. ʼʼನನ್ನ ಸ್ನೇಹಿತ ಮತ್ತು ನಾನು ನಮ್ಮನ್ನು ಆಹ್ವಾನಿಸದ ಮದುವೆಗೆ ಹೋಗಿದ್ದೆವು. ಅಲ್ಲಿ ನಾನು ಮತ್ತು ಸ್ನೇಹಿತ ಒಬ್ಬ ಹುಡುಗಿಯನ್ನು ತುಂಬಾ ಇಷ್ಟ ಪಟ್ಟೆವು. ಆಕೆ ಅಲ್ಲಿಂದ ಹೊರಬಂದ ತಕ್ಷಣ ನಾವು ಆಕೆಯನ್ನು ಹಿಂಬಾಲಿಸಲು ನಿರ್ಧರಿಸಿದ್ದೆವುʼʼ ಎಂದು ಹೇಳಿಕೊಂಡಿದ್ದಾನೆ.
ರೀಲ್ಸ್ ತಂದ ಅವಾಂತರ; ವಿಡಿಯೊ ಮಾಡುತ್ತ ಮೈಮರೆತು ಚರಂಡಿಗೆ ಬಿದ್ದ ಯುವತಿ
ವೈರಲ್ ಆದ ದೃಶ್ಯವು ಯುವತಿ ಹಾಸ್ಟೆಲ್ ಕಡೆಗೆ ಹೋಗುವಾಗ ಅವಳ ಸ್ಕೂಟರ್ ಅನ್ನು ಇಬ್ಬರು ಹಿಂಬಾಲಿಸುತ್ತಿರುವುದನ್ನು ತೋರಿಸುತ್ತದೆ. ನಂತರ ಅವಳ ರೂಮ್ ಹುಡುಕುವ ಪ್ರಯತ್ನದಲ್ಲಿ ಹಾಸ್ಟೆಲ್ ಆವರಣದೊಳಗೆ ನುಸುಳುತ್ತಿರುವುದು ಕಂಡುಬರುತ್ತದೆ. ಆಕೆಯ ರೂಮ್ ಪತ್ತೆ ಹಚ್ಚಿ ಕಿಟಕಿಯನ್ನು ಚೀಟಿಯೊಂದನ್ನು ಎಸೆದು ಓಡಿ ಹೋಗಿದ್ದಾರೆ.
ಸದ್ಯ ಈ ವಿಡಿಯೊ ವೈರಲ್ ಆಗಿದ್ದು ನೆಟ್ಟಿಗರು ತೀವ್ರವಾಗಿ ಖಂಡಿಸಿದ್ದಾರೆ. ನೆಟ್ಟಿಗರೊಬ್ಬರು ಇಂತಹವರಿಗೆ ಸರಿಯಾದ ಶಿಕ್ಷೆ ನೀಡಬೇಕೆಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು ಅನುಮತಿ ಇಲ್ಲದೆ ಹಾಸ್ಟೆಲ್‌ನಂತಹ ಜಾಗಕ್ಕೆ ತೆರಳುವುದು ಅಪರಾಧ ಎಂದು ಕಿಡಿಕಾರಿದ್ದಾರೆ.