ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಹೀಗೊಂದು ಕೋತಿ ಚೇಷ್ಟೆ: ವಕೀಲರ ಬ್ಯಾಗ್ ಕಿತ್ತುಕೊಂಡು 2 ಲಕ್ಷ ರುಪಾಯಿ ನೋಟಿನ ಮಳೆಗೈದ ಮಂಗ

Viral Video: ಕೋತಿಯೊಂದು ವಕೀಲರ ಬ್ಯಾಗ್ ಕಿತ್ತುಕೊಂಡು 2 ಲಕ್ಷ ರುಪಾಯಿ ನೋಟುಗಳ ಸುರಿಮಳೆಗೈದಿದೆ. ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಈ ಘಟನೆ ನಡೆದಿದೆ. ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಅಚ್ಚರಿ ಪಟ್ಟಿದ್ದಾರೆ.

ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ವಕೀಲರ ಕೈಯಲ್ಲಿದ್ದ ಹಣದ ಮೇಲೆ ದಾಳಿ ಮಾಡಿದ ಕೋತಿ

ಲಖನೌ, ಮೇ 31: ಕೋತಿ ಚೇಷ್ಟೆ ಮಾಡುವ ಅನೇಕ ವಿಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತವೆ. ಕೆಲವೊಂದು ದೃಶ್ಯಗಳು ಮನಸ್ಸಿಗೆ ಹಿತ ನೀಡಿದರೆ ಇನ್ನೂ ಕೆಲವು ನಗು ತರಿಸುತ್ತವೆ. ಇದಕ್ಕೆ ಸಾಕ್ಷಿ ಎಂಬಂತೆ ಕೋತಿಯೊಂದು ವಕೀಲರ ಬ್ಯಾಗ್ ಕಿತ್ತುಕೊಂಡು 2 ಲಕ್ಷ ರುಪಾಯಿ ನೋಟುಗಳ ಸುರಿಮಳೆಗೈದಿದೆ. ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಈ ಘಟನೆ ನಡೆದಿದೆ. ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗುತ್ತಿದ್ದಂತೆ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಪೊಲೀಸರ ಪ್ರಕಾರ, ರಾಜಾ ಎಂದೂ ಕರೆಯಲ್ಪಡುವ ವಕೀಲ ರವೀಂದ್ರ ಶನಿವಾರ (ಮೇ 30) ತಮ್ಮ ಸಹಚರರಾದ ಅಮೀರ್ ಖಾನ್ ಮತ್ತು ಸೋಹನ್ ಪಾಲ್ ಅವರೊಂದಿಗೆ ಆಸ್ತಿ ನೋಂದಣಿಗಾಗಿ ಸ್ಟಾಂಪ್ ಪೇಪರ್‌ಗಳನ್ನು ಖರೀದಿಸಲು ನ್ಯಾಯಾಲಯದ ಕಡೆ ಹೋಗುತ್ತಿದ್ದರು. ಹೀಗಾಗಿ ವ್ಯವಹಾರಕ್ಕಾಗಿ ಒಂದು ಬ್ಯಾಗ್‌ನಲ್ಲಿ 2 ಲಕ್ಷ ರುಪಾಯಿ ಕೊಂಡೊಯ್ದಿದ್ದಾರೆ.

ವಿಡಿಯೊ ನೋಡಿ:



ಅವರು ನ್ಯಾಯಾಲಯಕ್ಕೆ ಹೋಗುತ್ತಿದ್ದಾಗ ಒಂದು ಕೋತಿ ಇದ್ದಕ್ಕಿದ್ದಂತೆ ಅವರ ಕೈಯಲ್ಲಿ ಇದ್ದ ಚೀಲವನ್ನು ಹಿಡಿದು ಓಡಿಹೋಗಿದೆ. ಆ ಬಳಿಕ ಮರ ಹತ್ತಿ ನೋಟುಗಳ ಮಳೆ ಸುರಿಸಿದೆ. ಈ ಅಪರೂಪದ ಘಟನೆ ಸಾರ್ವಜನಿಕರ ವಲಯದಲ್ಲಿ ಭಾರೀ ಕುತೂಹಲ ಉಂಟು ಮಾಡಿದೆ.ಹಠಾತ್ತನೆ ವಕೀಲರ ಕೈ ಚೀಲ ಕಡೆ ದಾಳಿ ಮಾಡಿದ ಕೋತಿಯೊಂದು ಹಣದ ಬ್ಯಾಗ್‌ ಅನ್ನು ಕಿತ್ತುಕೊಂಡು ಓಡಿದೆ. ಬಳಿಕ ನ್ಯಾಯಾಲಯದ ಆವರಣದಲ್ಲೇ ಇದ್ದ ಬೇವಿನ ಮರದ ತುತ್ತತುದಿಗೆ ಜಿಗಿದಿದೆ.

ಶ್ರವಣ ಸಮಸ್ಯೆಯುಳ್ಳ ವ್ಯಕ್ತಿಗೆ ವಿಮಾನ ಪ್ರಯಾಣದ ಮಾರ್ಗದರ್ಶನ ನೀಡಿದ ಇಂಡಿಗೋ ಸಿಬಂದಿ

ಕೋತಿ ಎತ್ತರದ ಕೊಂಬೆಯ ಮೇಲೆ ಕುಳಿತು ಚೀಲವನ್ನು ತೆರೆದು ನೋಟುಗಳನ್ನು ಎಸೆಯಲು ಪ್ರಾರಂಭಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಮರದಿಂದ ನೋಟುಗಳು ಕೆಳಗೆ ಬೀಳುತ್ತಿದ್ದಂತೆ, ಅಲ್ಲೇ ಇದ್ದ ಇತರ ವಕೀಲರು, ಕಕ್ಷಿದಾರರು ಮುಗಿಬಿದ್ದು ಹಣವನ್ನು ಆರಿಸಿಕೊಳ್ಳಲು ಮುಂದಾಗಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಈ ದೃಶ್ಯ ವೈರಲ್ ಆಗಿದ್ದು ಮರದಿಂದ ನೋಟುಗಳು ಕೆಳಗೆ ಹಾರುತ್ತಿರುವಾಗ ಜನರು ಹಣವನ್ನು ಪಡೆಯಲು ಪರದಾಡುತ್ತಿರುವುದು ಕಂಡು ಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯ ಪೊಲೀಸರು ಧಾವಿಸಿ ಬಂದು ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ವಕೀಲ ರವೀಂದ್ರ ಕೆಳಗೆ ಬಿದ್ದಿದ್ದ ಹಣದಲ್ಲಿ ಒಟ್ಟು 1.91 ಲಕ್ಷ ರುಪಾಯಿ ಮರಳಿ ಸಂಗ್ರಹಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉಳಿದ ಮೊತ್ತ ಏನಾಯಿತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ವೈರಲ್ ವಿಡಿಯೊ ಆನ್‌ಲೈನ್‌ನಲ್ಲಿ ವ್ಯಾಪಕ ಗಮನ ಸೆಳೆದಿದ್ದು ಹಲವರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಬಳಕೆದಾರರೊಬ್ಬರು ʼʼಈ ಕೋತಿಗೆ ವಕೀಲರ ಮೇಲೆ ಸಿಟ್ಟಿರಬೇಕುʼʼ ಎಂದು ತಮಾಷೆ ಮಾಡಿದ್ದಾರೆ. ಮತ್ತೊಬ್ಬರು ʼʼಸಿನಿಮೀಯ ದೃಶ್ಯದಂತಿದೆʼʼ ಎಂದು ಬರೆದುಕೊಂಡಿದ್ದಾರೆ.