ರಾಯ್‌ಪುರ, ಜ. 23: ಪ್ರಾಣಿ ಹಾಗೂ ಮನುಷ್ಯನ ಭಾಂಧವ್ಯ ಉತ್ತಮ ಎಂದಿದ್ದರೂ ಕೆಲವೊಮ್ಮೆ ಪ್ರಾಣಿಗಳ ವರ್ತನೆ ಮಿತಿಮೀರಿ ಹೋಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಛತ್ತೀಸ್‌ಗಢದ ಜಂಜ್‌ಗಿರ್-ಚಂಪಾ ಜಿಲ್ಲೆಯ ಸೆವ್ನಿ ಗ್ರಾಮದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. 20 ದಿನದ ನವಜಾತ ಶಿಶುವನ್ನು ಕೋತಿಯೊಂದು ಕಿತ್ತುಕೊಂಡು ಬಾವಿಗೆ ಎಸೆದ ಘಟನೆ ನಡೆದಿದ್ದು ಪವಾಡಸದೃಶವಾಗಿ ಮಗು ಬದುಕಿ ಉಳಿದಿದೆ. ಮಗುವಿಗೆ ಡೈಪರ್ ತೊಡಿಸಿದ್ದರಿಂದ ಸುಮಾರು 10 ನಿಮಿಷಗಳ ಕಾಲ ಶಿಶು ಬಾವಿಯಲಲಿ ತೇಲಿದೆ. ಬಳಿಕ ಗ್ರಾಮಸ್ಥರು ಮತ್ತು ನರ್ಸ್ ಸಕಾಲಿಕವಾಗಿ ಚಿಕಿತ್ಸೆ ನೀಡಿ ಮಗುವಿನ ಜೀವ ಉಳಿಸಿದ್ದಾರೆ. ಸದ್ಯ ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
ಸುನೀತಾ ರಾಥೋಡ್ ಎನ್ನುವವರು ಮಗುವಿನೊಂದಿಗೆ ತನ್ನ ಮನೆಯ ಹೊರಗೆ ಕುಳಿತಿದ್ದಾಗ ಈ ಘಟನೆ ನಡೆದಿದೆ. ಕುಟುಂಬ ಸದಸ್ಯರ ಪ್ರಕಾರ, ಮಂಗಗಳ ಗುಂಪೊಂದು ಹತ್ತಿರದ ಮನೆಯ ಛಾವಣಿಯನ್ನು ಏರಿದ್ದವು. ಆಗ ಇದ್ದಕ್ಕಿದ್ದಂತೆ ಒಂದು ಕೋತಿ ಕೆಳಗೆ ಹಾರಿ, ಮಗುವನ್ನು ಕಿತ್ತುಕೊಂಡು ಓಡಿದೆ. ಕೂಡಲೇ ಕುಟುಂಬ ಸದಸ್ಯರು ಸಹಾಯಕ್ಕಾಗಿ ಕೂಗಿದ್ದಾರೆ. ಬಳಿಕ ಕುಟುಂಬಸ್ಥರು ಮತ್ತು ನೆರೆಹೊರೆಯವರು ಕೋತಿಯನ್ನು ಬೆನ್ನಟ್ಟಿದ್ದಾರೆ.
ಪ್ರಾಣಿಯನ್ನು ಹೆದರಿಸುವ ಪ್ರಯತ್ನದಲ್ಲಿ ಪಟಾಕಿಗಳನ್ನು ಸಿಡಿಸಿದ್ದಾರೆ. ಶಬ್ದದಿಂದ ಬೆಚ್ಚಿಬಿದ್ದ ಕೋತಿ ಓಡಿ ಹೋಗಿದ್ದು ಮನೆಯ ಸಮೀಪವಿರುವ ತೆರೆದ ಬಾವಿಗೆ ಮಗುವನ್ನು ಎಸೆದಿದೆ. ಮಗು ಬಾವಿಗೆ ಬೀಳುತ್ತಿದ್ದಂತೆ ಗ್ರಾಮಸ್ಥರು ರಕ್ಷಿಸಿದ್ದಾರೆ.
ಇಂಡಿಗೋ ವಿಮಾನ ರದ್ದು; ಪುತ್ರನಿಗಾಗಿ 800 ಕಿ.ಮೀ ದೂರ ಕಾರು ಚಲಾಯಿಸಿದ ತಂದೆ!
ಮಗು ನೀರನ್ನು ಕುಡಿದಿದ್ದರೂ ಸಂಪೂರ್ಣವಾಗಿ ಮುಳುಗಲಿಲ್ಲ. ಅದಕ್ಕೆ ಕಾರಣ ಡೈಪರ್. ಹೌದು ಮಗುವಿಗೆ ತೊಡಿಸಿದ ಡೈಪರ್‌ನಿಂದಾಗಿ ಅದು ಸುಮಾರು 10 ನಿಮಿಷಗಳ ಕಾಲ ನೀರಿನಲ್ಲಿ ತೇಲಿದೆ. ಬಳಿಕ ಅದನ್ನು ಮೇಲಕ್ಕೆ ಎತ್ತಲಾಯಿತು. ಈ ವಿಚಾರವನ್ನು ಮಗುವಿನ ತಂದೆ ಅರವಿಂದ್ ರಾಥೋಡ್ ತಿಳಿಸಿದ್ದಾರೆ. ʼʼಮಗುವಿಗೆ ಡೈಪರ್ ತೊಡಿಸಿದ್ದ ಕಾರಣ ನೀರಿನಲ್ಲಿ ಪೂರ್ತಿ ಮುಳುಗದೆ ತೇಲಲಿದೆ. ಹೀಗಾಗಿ ನನ್ನ ಮಗುವಿನ ಪ್ರಾಣ ಉಳಿದಿದೆʼʼ ಎಂದಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರದ ನರ್ಸ್ ರಾಜೇಶ್ವರಿ ರಾಥೋಡ್ ಈ ಸಂದರ್ಭದಲ್ಲಿ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಅಲ್ಲಿ ಹಾಜರಿದ್ದರು. ಕೂಡಲೇ ಅವರು ಧಾವಿಸಿ ತುರ್ತು ಚಿಕಿತ್ಸೆ ನೀಡಿ ಮಗುವಿನ ಪ್ರಾಣ ಉಳಿಸುವಲ್ಲಿ ಮಹತ್ತರ ಪಾತ್ರ ವಹಿಸಿದರು.
ಬಾವಿಯಿಂದ ಹೊರತೆಗೆದಾಗ ಮಗು ನೀರು ಕುಡಿದು ಅರೆಪ್ರಜ್ಞಾವಸ್ಥೆಯಲ್ಲಿತ್ತು. ಆಗ ಅವರು ಮಗುವಿಗೆ ಪ್ರಥಮ ಚಿಕಿತ್ಸೆ ಮತ್ತು ಸಿಪಿಆರ್ ನೀಡಿದರು. ಸ್ವಲ್ಪ ಹೊತ್ತಿನಲ್ಲೇ ಮಗು ಅಳಲು ಪ್ರಾರಂಭಿಸಿದ್ದು, ತಕ್ಷಣವೇ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಮಗು ಪ್ರಾಣಾಪಯದಿಂದ ಪಾರಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.