ಕಠ್ಮಂಡು, ಆ. 27: ನೇಪಾಳದ ಪ್ರವಾಹವು ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿದೆ. ಇತ್ತೀಚಿನ ವರ್ಷಗಳಲ್ಲಿ ದೇಶ ಕಂಡ ಅತ್ಯಂತ ಭೀಕರ ದುರಂತಗಳಲ್ಲಿ ಇದು ಒಂದಾಗಿದ್ದು ಸಾರ್ವಜನಿಕರು ತೀವ್ರ ಸಂಕಷ್ಟದಲ್ಲಿದ್ದಾರೆ. ತೀವ್ರ ಪ್ರವಾಹದಿಂದ ಜನರು ಕಂಗೆಟ್ಟಿರುವ ಈ ಪರಿಸ್ಥಿತಿಯಲ್ಲೂ ಅಘಾತಕಾರಿ ಘಟನೆಯೊಂದು ನಡೆದಿದೆ. ಪ್ರವಾಹಕ್ಕೆ ಸಿಲುಕಿ ಮೃತಪಟ್ಟ ಮಹಿಳೆಯ ದೇಹದಿಂದ ಚಿನ್ನದ ಓಲೆಯನ್ನು ಕಳವು ಮಾಡುವ ದೃಶ್ಯವೊಂದು ವೈರಲ್ (Viral News) ಆಗಿದೆ. ಈ ಸ್ಥಿತಿಯಲ್ಲೂ ಕಟುಕರ ವರ್ತನೆ ಕಂಡು ನೆಟ್ಟಿಗರು ಆಘಾತಕ್ಕೊಳಗಾಗಿದ್ದಾರೆ.
ಹಠಾತ್ ಪ್ರವಾಹದಲ್ಲಿ ಮಹಿಳೆಯ ಮೃತದೇಹವು ಅವಶೇಷಗಳ ನಡುವೆ ಸಿಲುಕಿಕೊಂಡಿದೆ. ಈ ವೇಳೆ ಬಂದ ಇಬ್ಬರು ವ್ಯಕ್ತಿಗಳಲ್ಲಿ ಒಬ್ಬ ಮರದ ತುಂಡಿನಿಂದ ಶವವನ್ನು ಎತ್ತಿದರೆ ಮತ್ತೊಬ್ಬ ಆಕೆಯ ತಲೆಗೂದಲನ್ನು ಸರಿಸಿ ಕಿವಿಯಲ್ಲಿದ್ದ ಚಿನ್ನದ ಓಲೆಯನ್ನು ಕಿತ್ತುಕೊಂಡಿದ್ದಾನೆ. ಈ ದೃಶ್ಯ ನೋಡಿದ ಅನೇಕರು ಮಾನವೀಯತೆ ಸತ್ತು ಹೋಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಕಲಿಯುಗದ ಲಕ್ಷಣ ಎಂದು ಇನ್ನೂ ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ವಿಡಿಯೊ ನೋಡಿ:
ವಿಡಿಯೊದಲ್ಲಿ ಮಹಿಳೆಯ ದೇಹವು ಧೂಳಿನಿಂದ ಕೂಡಿರುವುದನ್ನು ಕಾಣಬಹುದು. ಮೃತದೇಹವನ್ನು ಹತ್ತಿರಕ್ಕೆ ತರಲು ಒಬ್ಬ ಮರದ ದಿಮ್ಮಿಯನ್ನು ಬಳಸಿದ್ದು, ಇನ್ನೊಬ್ಬ ಒಂದು ಕೈಯಿಂದ ಕೂದಲನ್ನು ಹಿಡಿದು ಇನ್ನೊಂದು ಕೈಯಿಂದ ಕಿವಿಯೋಲೆ ತೆಗೆಯುವುದನ್ನು ಕಾಣಬಹುದು. ದುರಂತದ ನಡುವೆಯೇ ಕಿಡಿಗೇಡಿಗಳು ಅಮಾನುಷವಾಗಿ ವರ್ತಿಸಿದ್ದಾರೆ. ಖದೀಮರು ಕಿವಿಯೋಲೆಗಳನ್ನು ತೆಗೆದ ನಂತರ ಮೃತದೇಹವನ್ನು ಅಲ್ಲೇ ಎಸೆದು ಹೊರಟು ಹೋಗಿದ್ದಾರೆ. ಈ ನಾಚಿಕೆಗೇಡಿನ ಕೃತ್ಯವನ್ನು ಪಕ್ಕದಲ್ಲಿದ್ದವರು ಮೊಬೈಲ್ ಫೋನ್‌ನಲ್ಲಿ ಚಿತ್ರೀಕರಿಸಿದ್ದಾರೆ.
ಸಾರ್ವಜನಿಕರ ಮುಂದೆಯೇ ನದಿಗೆ ಕಸ ಎಸೆದ ದಂಪತಿ; ನಾಚಿಕೆಯಿಂದ ತಲೆ ತಗ್ಗಿಸಿದ ನಾಗರಿಕ ಸಮಾಜ
ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೆಟ್ಟಿಗರೊಬ್ಬರು, ʼʼಕಲಿಯುಗ ಅಂದ್ರೆ ಇದು. ಮಾನವೀಯತೆ ಬಹಳ ಹಿಂದೆಯೇ ಸತ್ತು ಹೋಗಿದೆʼʼ ಎಂದಿದ್ದಾರೆ. ಇನ್ನೊಬ್ಬರು, ʼʼಮನುಷ್ಯರಿಗಿಂತ ಪ್ರಾಣಿಗಳೇ ಮೇಲುʼʼ ಎಂದು ಬರೆದುಕೊಂಡಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೊ ಸಾರ್ವತ್ರಿಕ ಅಸಮಾಧಾನಕ್ಕೆ ಕಾರಣವಾಗಿದೆ.
ನೇಪಾಳದಲ್ಲಿ ಸಂಭವಿಸಿದ ಹಠಾತ್ ಪ್ರವಾಹದಿಂದ ಕನಿಷ್ಠ 359 ಜನರು ಸಾವನ್ನಪ್ಪಿದ್ದು ಸುಮಾರು 800 ಜನರು ಕಾಣೆಯಾಗಿದ್ದಾರೆ. ನೇಪಾಳವು ಪ್ರಸ್ತುತ ಅತ್ಯಂತ ಭೀಕರ ನೈಸರ್ಗಿಕ ವಿಕೋಪವನ್ನು ಎದುರಿಸುತ್ತಿದೆ.