ಬೆಂಗಳೂರು, ಜೂ. 10: ಬೇಸಗೆಯಲ್ಲಿ ಬೆಂದು ಹೋಗಿದ್ದ ಜನರಿಗೆ ಮುಂಗಾರು ಮಳೆಯ ಆಗಮನವು ಬಹಳಷ್ಟು ಖುಷಿ ನೀಡಿದೆ. ಇದೀಗ ಸಿಲಿಕಾನ್ ಸಿಟಿ ಬೆಂಗಳೂರಿನ ತಂಪಾದ ವಾತಾವರಣ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಬೆಂಗಳೂರಿನ ಈ ಆಹ್ಲಾದಕರ ಹವಾಮಾನವನ್ನು ಹಿಮಾಚಲ ಪ್ರದೇಶದ ಪ್ರಸಿದ್ಧ ಗಿರಿಧಾಮ ಶಿಮ್ಲಾ ಜತೆ ಹೋಲಿಕೆ ಮಾಡಲಾಗಿದ್ದು ಎಲ್ಲರ ಗಮನ ಸೆಳೆದಿದೆ. ಇಲ್ಲಿನ ತಂಪಾದ ವಾತಾವರಣ, ಪ್ರಕೃತಿ ಸೌಂದರ್ಯ ಎಲ್ಲವೂ ಶಿಮ್ಲಾದ ಗಿರಿಧಾಮವನ್ನೇ ಹೋಲುವಂತಿದೆ ಎನ್ನುವ ಪೋಸ್ಟ್ ವೈರಲ್ (Viral News) ಆಗುತ್ತಿದೆ.
ನೆಟ್ಟಿಗರೊಬ್ಬರು ಬೆಂಗಳೂರು ಮತ್ತು ಶಿಮ್ಲಾ ತಾಪಮಾನದ ಸ್ಕ್ರೀನ್‌ಶಾಟ್ ಒಂದನ್ನು ಶೇರ್ ಮಾಡಿಕೊಂಡಿದ್ದು ಅದರಲ್ಲಿ ಬೆಂಗಳೂರಿನಲ್ಲಿ 22°C ತಾಪಮಾನ ಇದ್ದರೆ, ಶಿಮ್ಲಾದಲ್ಲಿ 19°C ಇರುವುದು ಕಂಡು ಬಂದಿದೆ. ಶಿಮ್ಲಾದ ಅತಿದೊಡ್ಡ ಪ್ರತಿಸ್ಪರ್ಧಿ ಇನ್ನು ಮುಂದೆ ಬೆಂಗಳೂರೇ ಆಗಿದೆ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.
ಈ ಸಮಯದಲ್ಲಿ ಶಿಮ್ಲಾಗೆ ಹೋಲಿಕೆ ಮಾಡಿದರೆ ಬೆಂಗಳೂರಿನ ಹವಾಮಾನವೇ ಉತ್ತಮವಾಗಿದೆ ಎಂದಿರುವ ನೆಟ್ಟಿಗರು ಮಾನ್ಸೂನ್ ಆಗಮನದ ನಂತರದ ತಂಪಾದ ಹವಾಮಾನವನ್ನು ಅಸ್ವಾಗತಿಸಿದ್ದಾರೆ. ಕೆಲವರು ಈ ಸಮಯದಲ್ಲಿ ಶಿಮ್ಲಾಕ್ಕಿಂತ ಉತ್ತಮ ಗಾಳಿಯ ಗುಣಮಟ್ಟವನ್ನು ಬೆಂಗಳೂರು ಹೊಂದಿದೆ ಎಂದಿದ್ದಾರೆ.
ಬೆಳಗ್ಗೆ 6:30ಕ್ಕೆ ಆಫೀಸ್‌ಗೆ ಹಾಜರಾಗಬೇಕು ಎಂಬ ಆದೇಶಕ್ಕೆ ಜೆನ್ ಝೀ ಉದ್ಯೋಗಿಯ ಖಡಕ್ ರೆಸ್ಪಾನ್ಸ್
ಬೆಂಗಳೂರು ನಗರವು ಸಮುದ್ರ ಮಟ್ಟದಿಂದ 3,000 ಅಡಿಗಳಿಗಿಂತ ಹೆಚ್ಚು ಎತ್ತರದಲ್ಲಿದೆ. ಇದು ವರ್ಷವಿಡೀ ತಾಪಮಾನವನ್ನು ಕೂಲ್ ಆಗಿ ಇರಿಸಲು ಸಹಾಯ ಮಾಡುತ್ತದೆ. ಬೆಂಗಳೂರಿನಲ್ಲಿ ಮುಂಗಾರು ಪೂರ್ವ ಮಳೆಗಳು ತಾಪಮಾನವನ್ನು ಹೆಚ್ಚು ತಂಪಾಗಿಸುತ್ತವೆ. ಆದರೆ ಬೆಂಗಳೂರು ಎಷ್ಟೇ ಕೂಲ್ ಆಗಿದ್ದರೂ ಇಲ್ಲಿನ ಟ್ರಾಫಿಕ್ ನೆನೆದರೆ ಭಯ ಹುಟ್ಟಿಸಿ ಬೀಡುತ್ತದೆ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ.
ಶಿಮ್ಲಾದಲ್ಲಿ ಸುಂದರ ಬೆಟ್ಟಗಳು ಮತ್ತು ಪ್ರಕೃತಿ ಇದ್ದರೆ, ಬೆಂಗಳೂರಿನಲ್ಲಿ ಐಟಿ ಪಾರ್ಕ್‌ಗಳು ಪ್ರಸಿದ್ಧವಾಗಿದೆ. ಆದರೆ ಶಿಮ್ಲಾದಲ್ಲಿ ಕಡಿದಾದ ರಸ್ತೆಯ ಭಯ ಇದ್ದರೆ ಬೆಂಗಳೂರಿನಲ್ಲಿ ಟ್ರಾಫಿಕ್ ದೊಡ್ಡ ತಲೆನೋವು ಎನ್ನುವುದು ಇನ್ನು ಕೆಲವರ ಅಭಿಮತ. "ಶಿಮ್ಲಾ ಮತ್ತು ಬೆಂಗಳೂರು ಎರಡರ ನಡುವೆ ಒಂದನ್ನು ಆರಿಸಿಕೊಳ್ಳುವುದು ಕಷ್ಟ'' ಎಂದು ಒಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.