ಶಿಮ್ಲಾ, ಸೆ.1: ಬೆಳ್ಳಂಬೆಳಗ್ಗೆ ಹಿಮಾಚಲ ಪ್ರದೇಶದಲ್ಲಿ ಭೀಕರ ಪ್ರವಾಹ ಸಂಭವಿಸಿದೆ. ಈ ದಿಢೀರ್ ಪ್ರವಾಹದಲ್ಲಿ ಸಿಲುಕಿದ ಬೈಕ್ ಸವಾರನೊಬ್ಬನನ್ನು ನವದಂಪತಿ ಪ್ರಾಣದ ಹಂಗು ತೊರೆದು ಅತ್ಯಂತ ಸಾಹಸಿಕವಾಗಿ ರಕ್ಷಿಸಿದ್ದಾರೆ. ಮಹಿಳೆ ಧರಿಸಿದ್ದ ದುಪ್ಪಟಾವನ್ನೇ ಹಗ್ಗವನ್ನಾಗಿ ಬಳಸಿ ಚಾಲಕನ ಜೀವ ಉಳಿಸಿದ್ದಾರೆ. ಈ ಘಟನೆಯ ವಿಡಿಯೊ ಭಾರಿ ವೈರಲ್ (Viral News) ಆಗಿದ್ದು, ನೆಟ್ಟಿಗರು ದಂಪತಿಯ ಧೈರ್ಯ, ಸಮಯ ಪ್ರಜ್ಞೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ ದಿಢೀರ್ ಪ್ರವಾಹ ಉಂಟಾಗಿದೆ. ಈ ವಿಪತ್ತಿನ ನಡುವೆ, ಘಟಶ್ನಿಯ ಮಾಮ್ಲಾ ಗ್ರಾಮದ ಬೈಕ್ ಸವಾರನೊಬ್ಬ ನೀರಿನಲ್ಲಿ ಸಿಲುಕಿಕೊಂಡು ಸಮತೋಲನ ಕಾಯ್ದುಕೊಳ್ಳಲು ಹೆಣಗಾಡುತ್ತಿದ್ದ. ಜತೆಗೆ ಪ್ರವಾಹದಲ್ಲಿ ಕೊಚ್ಚಿ ಹೋಗುವ ಭೀತಿಯಲ್ಲಿದ್ದ. ಪ್ರವಾಹವು ಆತನನ್ನು ಕೊಚ್ಚಿಕೊಂಡು ಹೋಗದಂತೆ, ಆತನ ಪ್ರಾಣ ಕಾಪಾಡಲು ದಂಪತಿ ಹರಸಾಹಸ ಪಟ್ಟಿದ್ದಾರೆ.
ವಿಡಿಯೊ ನೋಡಿ:
ಹಿಮಾಚಲ ಪ್ರದೇಶದ ಭಟಿಯಾತ್‌ನ ಭರ್ಮಲಾ ಪ್ರದೇಶದ ಕಾಕಿಯಾರ-ಟುನುಹಟ್ಟಿ ರಸ್ತೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ದಿಢೀರ್ ಪ್ರವಾಹ ಉಂಟಾಯಿತು. ಮಳೆಯ ರಭಸಕ್ಕೆ ಕೆಲವೇ ಕ್ಷಣಗಳಲ್ಲಿ ಇಡೀ ರಸ್ತೆ ಮುಳುಗಿ ಹೋಯಿತು. ಬೈಕ್ ಸವಾರನೊಬ್ಬ ರಸ್ತೆಯಲ್ಲಿದ್ದ ನೀರನ್ನು ದಾಟಲು ಯತ್ನಿಸಿ ನಿಯಂತ್ರಣ ತಪ್ಪಿ ಪ್ರವಾಹದ ಮಧ್ಯೆ ಸಿಲುಕಿಕೊಂಡಿದ್ದ.
ಮಧ್ಯ ರಸ್ತೆಯಲ್ಲೇ ಭರ್ಜರಿ ಭೋಜನ; ರಾಜಸ್ಥಾನ ಎಕ್ಸ್‌ಪ್ರೆಸ್‌ವೇಯಲ್ಲೇ ಪಾರ್ಟಿ ಮಾಡಿದ ಕುಟುಂಬ
ಆಗ ಮಹಿಳೆಯ ದುಪ್ಪಟಾವನ್ನೇ ರಕ್ಷಣಾ ಹಗ್ಗವನ್ನಾಗಿ ಬಳಸಿಕೊಂಡು ಬೈಕ್ ಸವಾರನನ್ನು ಸಾವಿನ ದವಡೆಯಿಂದ ದಂಪತಿ ಪಾರು ಮಾಡಿದ್ದಾರೆ. ಆತ ಕೊಚ್ಚಿಹೋಗುವ ಹಂತದಲ್ಲಿದ್ದಾಗ, ರಸ್ತೆ ಬದಿಯಲ್ಲಿದ್ದ ಅವರು ತಕ್ಷಣವೇ ಆತನ ನೆರವಿಗೆ ಧಾವಿಸಿದರು. ಮಹಿಳೆಯ ದುಪ್ಪಟಾವನ್ನು ಹಗ್ಗದಂತೆ ಬಳಸಲು ಮುಂದಾದ ದಂಪತಿ ಅದನ್ನು ಬೈಕ್ ಸವಾರನ ಕಡೆಗೆ ಚಾಚಿದರು. ಈ ವೇಳೆ ದಂಪತಿ ಜತೆಗಿದ್ದ ಕುಟುಂಬ ಸದಸ್ಯರು ಕೈಜೋಡಿಸಿದ್ದು ಎಲ್ಲರೂ ಸೇರಿ ಬೈಕ್ ಸವಾರನನ್ನು ದಡಕ್ಕೆ ಎಳೆದಿದ್ದಾರೆ.
ಪ್ರಾಣಾಪಾಯದ ಭೀತಿಯಿದ್ದರೂ ಅದನ್ನು ಲೆಕ್ಕಿಸದೆ ಕಾರ್ಯಪ್ರವೃತ್ತರಾದ ನವದಂಪತಿ ಮತ್ತು ಕುಟುಂಬಸ್ಥರ ಧೈರ್ಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಅವರ ಈ ತ್ವರಿತ ನಡೆ ಗಂಭೀರ ದುರಂತ ತಡೆಯಲು ಸಹಾಯ ಮಾಡಿದೆ. ನವದಂಪತಿ ಹಾಗೂ ಕುಟುಂಬದ ಸಮಯಪ್ರಜ್ಞೆಯನ್ನು ಸ್ಥಳೀಯರ ಜತೆಗೆ ನೆಟ್ಟಿಗರೂ ಕೊಂಡಾಡಿದ್ದಾರೆ.