ಲಖನೌ, ಸೆ. 13: ಆಧುನಿಕ ಯುಗದಲ್ಲಿ ಮಾನವೀಯ ಮೌಲ್ಯ ಅನ್ನೋದು ಮರೆಯಾಗ್ತಿದೆ ಎನ್ನುವ ಆರೋಪ ಜೋರಾಗಿದೆ. ತಮ್ಮ ಸ್ವಾರ್ಥವನ್ನೇ ಬಯಸುವ ಈ ಕಾಲದಲ್ಲೂ ಇಲ್ಲೊಬ್ಬ ವ್ಯಕ್ತಿ ಮಾನವೀಯತೆ ಜೀವಂತವಾಗಿದೆ ಅನ್ನೋದನ್ನು ತೋರಿಸಿಕೊಟ್ಟಿದ್ದಾರೆ. ಕ್ಯಾಬ್ ಚಾಲಕನೊಬ್ಬ ತೀರಾ ನಿದ್ದೆಯಲ್ಲಿ ಇರುವುದನ್ನು ಗಮನಿಸಿದ ಪ್ರಯಾಣಿಕರೊಬ್ಬರು ತಾವೇ ಕ್ಯಾಬ್ ಚಲಾಯಿಸಿ ಲಖನೌ ತಲುಪಿದ್ದಾರೆ. ಪ್ರಯಾಣಿಕ ತೋರಿದ ಮಾನವೀಯ ಕಾರ್ಯಕ್ಕೆ ಸೋಷಿಯಲ್ ಮೀಡಿಯಾದಲ್ಲಿ (Viral News) ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಉತ್ತರ ಪ್ರದೇಶದ ನೋಯ್ಡಾದಿಂದ ಲಕ್ನೋಗೆ ಕ್ಯಾಬ್‌ನಲ್ಲಿ ಹೊರಟಿದ್ದ ಪ್ರಯಾಣಿಕ ಶಿವ ಮಿಶ್ರಾ ಚಾಲಕ ಸುಸ್ತಾಗಿರುವುದನ್ನು ಗಮನಿಸಿದರು. ಗಂಟೆಗಟ್ಟಲೆ ವಾಹನ ಚಲಾಯಿಸಿದ್ದ ಚಾಲಕ ತೀವ್ರ ದಣಿವುಗೊಂಡು ಮುಂದೆ ಚಲಾಯಿಸಲು ಸಾಧ್ಯವಾಗದ ಸ್ಥಿತಿಯಲ್ಲಿದ್ದರು. ಆಗ ಖುದ್ದಾಗಿ ಶಿವ ಮಿಶ್ರಾ ಕಾರ್ ಚಲಾಯಿಸಿದರೆ, ಚಾಲಕ ಹೊಂಬದಿ ಸೀಟ್‌ನಲ್ಲಿ ಮಲಗಿ ವಿಶ್ರಾಂತಿ ಪಡೆದಿದ್ದಾರೆ.
ಘಟನೆ ವಿವರ
ಶಿವ ಮಿಶ್ರಾ ನೋಯ್ಡಾದಿಂದ ಲಖನೌಗೆ ಕ್ಯಾಬ್ ಬುಕ್ ಮಾಡಿದ್ದರು. ಆದರೆ ಕ್ಯಾಬ್ ಚಾಲಕ ವಿಶ್ರಾಂತಿಯಿಲ್ಲದೆ ಸುಸ್ತಾಗಿ ಇರುವಂತೆ ಕಂಡು ಬಂದಿತ್ತು. ಚಾಲಕನ ಆಯಾಸವನ್ನು ಗಮನಿಸಿದ ಶಿವ ಮಿಶ್ರಾ ಜಗಳವಾಡದೆ ತಾವೇ ಡ್ರೈವ್ ಮಾಡಲು ನಿರ್ಧರಿಸಿದರು. ಬಳಿಕ ಆಯಾಸಗೊಂಡಿದ್ದ ಚಾಲಕನಿಗೆ ಕಾರಿನ ಹಿಂದಿನ ಸೀಟ್‌ನಲ್ಲಿ ಮಲಗುವುದಕ್ಕೆ ಅವಕಾಶ ಮಾಡಿಕೊಟ್ಟರು.
ವಿಡಿಯೊ ನೋಡಿ:
ಈ ಪ್ರಯಾಣದ ದೃಶ್ಯದ ವಿಡಿಯೊ ಇನ್‌ಸ್ಟಾಗ್ರಾಮ್‌ನಲ್ಲಿ ಗಮನ ಸೆಳೆದಿದ್ದು, ಅನೇಕರು ಮಿಶ್ರಾ ಅವರ ಈ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವೈರಲ್ ಆದ ವಿಡಿಯೊದಲ್ಲಿ ಮಿಶ್ರಾ ಚಾಲಕನ ಸೀಟಿನಲ್ಲಿ ಕುಳಿತು ವಾಹನ ಚಲಾಯಿಸುತ್ತಿರುವುದು ಮತ್ತು ಅವರ ಸಹೋದರ ಪಕ್ಕದಲ್ಲಿ ಕುಳಿತಿರುವುದು ಕಂಡುಬರುತ್ತದೆ. ಕ್ಯಾಬ್ ಚಾಲಕ ಹಿಂಬದಿಯ ಸೀಟಿನಲ್ಲಿ ವಿಶ್ರಾಂತಿ ಪಡೆದಿದ್ದಾರೆ.
ನ್ಯಾಯ ಸಿಕ್ಕಿಲ್ಲ ಎಂದು ಬೇಸತ್ತು ಪೊಲೀಸ್ ಠಾಣೆಯಲ್ಲೇ ವಿಷ ಸೇವಿಸಿದ ಯುವತಿ!
ʼʼಸ್ನೇಹಿತರೇ, ನಾನು ಈಗ ನೋಯ್ಡಾದಿಂದ ಲಖನೌಗೆ ಪ್ರಯಾಣಿಸುತ್ತಿದ್ದೇನೆ. ನಾನು ಕ್ಯಾಬ್ ಬುಕ್ ಮಾಡಿದ್ದೆ. ಆದರೆ ಚಾಲಕ ಹಿಂದಿನ ದಿನದಿಂದಲೂ ವಾಹನ ಚಲಾಯಿಸಿ ತುಂಬಾ ದಣಿದಿದ್ದರು. ಇಂತಹ ಸಂದರ್ಭಗಳಲ್ಲಿ ಚಾಲಕರ ಮೇಲೆ ಕೋಪಗೊಳ್ಳಬಾರದು ಎಂದು ನನಗನ್ನಿಸುತ್ತದೆ. ಬದಲಾಗಿ, ನಾನೇ ಸ್ವತಃ ಡ್ರೈವಿಂಗ್ ಜವಾಬ್ದಾರಿಯನ್ನು ವಹಿಸಿಕೊಂಡೆʼʼ ಎಂದು ಬರೆದುಕೊಂಡಿದ್ದಾರೆ. ಶಿವ ಮಿಶ್ರಾ ಅವರ ನಡೆಗೆ ಇಂಟರ್‌ನೆಟ್‌ನಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ನೆಟ್ಟಿಗರೊಬ್ಬರು, ʼʼನಿಜಕ್ಕೂ ನೀವು ಬಂಗಾರದಂತಹ ವ್ಯಕ್ತಿʼʼ ಎಂದು ಶ್ಲಾಘಿಸಿದ್ದಾರೆ.