ಬೆಂಗಳೂರು: ಉಬರ್ (Ubar) ಆಟೋ ಚಾಲಕನೊಬ್ಬ ತನ್ನ ಮೇಲೆ ದೌರ್ಜನ್ಯವೆಸಗಿದ್ದಾನೆ ಎಂದು ಮಹಿಳೆಯೊಬ್ಬರು ಆರೋಪಿಸಿರುವ ಆಘಾತಕಾರಿ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ. ತಾನು ಈಶಾನ್ಯ ಭಾರತದವಳಾಗಿರುವುದರಿಂದ ಆಟೋ ಚಾಲಕ ಈ ರೀತಿ ವರ್ತಿಸಿದ್ದಾನೆ ಎಂಬುದು ಮಹಿಳೆಯ ಆರೋಪವಾಗಿದೆ. ಈ ವಿಚಾರವನ್ನು ಆ ಮಹಿಳೆಯು ಇನ್ಸ್ಟಾಗ್ರಾಂನಲ್ಲಿ (Instagram) ಪೋಸ್ಟ್ ಮಾಡಿದ್ದು, ಈ ವಿಡಿಯೊ ವೈರಲ್ (Viral Video) ಆಗಿದೆ. ಆಟೋ ಚಾಲಕ ತನಗೆ ಅರ್ಥವಾಗದ ಕನ್ನಡ ಭಾಷೆಯಲ್ಲಿ ಮಾತನಾಡಲು ಹೇಳುತ್ತಿರುವುದನ್ನು ಮತ್ತು ಹೊಡೆಯಲು ಪ್ರಯತ್ನಿಸಿದ್ದಾನೆ ಎಂದು ದೂರಿದ್ದಾಳೆ.
ಕೂಡಲೇ ಈ ವಿಡಿಯೊ ವೈರಲ್ ಆಗಿದ್ದು, ಬೆಂಗಳೂರು ಪೊಲೀಸರು ಮಹಿಳೆಯಿಂದ ಹೆಚ್ಚಿನ ವಿವರಗಳನ್ನು ಕೇಳಿದ್ದಾರೆ. ಹಾಗೆಯೇ ಈ ಘಟನೆಗೆ ಉಬರ್ ಸಂಸ್ಥೆ ಕ್ಷಮೆಯಾಚಿಸಿದೆ. ಅಕ್ಟೋಬರ್ 2 ರಂದು ಈ ಘಟನೆ ನಡೆದಿದೆ. ಸವಾರಿ ರದ್ದಾದ ನಂತರ ಜಗಳ ನಡೆದಿದೆ ಎಂದು ಮಹಿಳೆ ಎನ್ ಬೀ ಹೇಳಿದರು. ಆಟೋವನ್ನು ಬುಕ್ ಮಾಡಿದ್ದ ಮಹಿಳೆಯು ಇನ್ನೇನು ಆಟೋ ಬರುತ್ತದೆ ಎಂದು ಆಪ್‍ನಲ್ಲಿ ತೋರಿಸಿದ್ದರೂ ಆಟೋ ಚಾಲಕ ಮಾತ್ರ ಬರಲಿಲ್ಲ. ಹೀಗಾಗಿ ತನಗೆ ತಡವಾಗುತ್ತಿದ್ದರಿಂದ ಅವರು ಸವಾರಿಯನ್ನು ರದ್ದುಗೊಳಿಸಿ ಮತ್ತೊಂದು ಆಟೋ ಹತ್ತಿದರು.
ಸ್ವಲ್ಪ ಸಮಯದ ನಂತರ ಮೊದಲು ಬುಕ್ ಮಾಡಿದ್ದ ಆಟೋ ಚಾಲಕ ಪವನ್ ಎಚ್.ಎಸ್. ಬಂದು ಆಕೆಯ ದಾರಿಯನ್ನು ತಡೆದಿದ್ದಾನೆ. ಅಲ್ಲದೆ ಅವನು ಹಣಕ್ಕಾಗಿ ಬೇಡಿಕೆ ಇಟ್ಟನು. ನನ್ನನ್ನು ನಿಂದಿಸಿದನು, ಹೊಡೆಯಲು ಪ್ರಯತ್ನಿಸಿದನು ಮತ್ತು ನನ್ನ ವಿಡಿಯೊವನ್ನು ಸಹ ತೆಗೆದನು ಎಂದು ಮಹಿಳೆ ಎನ್ ಬೀ ದೂರಿದ್ದಾರೆ. ಭಾಷೆಯ ಸಮಸ್ಯೆ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿತು. ಭಾಷೆ ಗೊತ್ತಿಲ್ಲ ಎಂದು ಹೇಳಿದರೂ ಚಾಲಕ ಆಕೆಯೊಂದಿಗೆ ಕನ್ನಡದಲ್ಲೇ ಮಾತನಾಡುತ್ತಲೇ ಇದ್ದನು ಎಂದು ಆರೋಪಿಸಿದ್ದಾರೆ.
ವಿಡಿಯೊ ವೀಕ್ಷಿಸಿ:
ನಾನು ಈಶಾನ್ಯ ಭಾರತದಿಂದ ಬಂದವಳು ಎಂಬ ಕಾರಣಕ್ಕೆ ಅವನು ನನ್ನನ್ನು ಈ ರೀತಿ ನಿಂದಿಸುತ್ತಿದ್ದಾನೆ ಎಂದು ಅವಳು ವಿಡಿಯೊದಲ್ಲಿ ಹೇಳುತ್ತಿರುವುದು ಕೇಳಿಬಂತು. ಒಂದು ಹಂತದಲ್ಲಿ, ಚಾಲಕ ಅವಳನ್ನು ಹೊಡೆಯಲು ಪ್ರಯತ್ನಿಸಿದಾಗ ಎನ್ ಬೀ ಆಟೋದ ನೋಂದಣಿ ಸಂಖ್ಯೆಯನ್ನು ಓದುತ್ತಿರುವುದನ್ನು ವಿಡಿಯೊ ತೋರಿಸಿದೆ. ಅವನು ನನ್ನನ್ನು ಹೊಡೆಯಲು ಪ್ರಯತ್ನಿಸುತ್ತಿದ್ದಾನೆ ಎಂದು ಅವಳು ಕೂಗಿದ್ದಾಳೆ.
ಇದನ್ನೂ ಓದಿ: Viral News: ಕಸದ ಲಾರಿಯಲ್ಲಿ ಸರ್ಕಾರಿ ಆಸ್ಪತ್ರೆಗೆ ಔಷಧ ಸಾಗಾಟ; ವೈದ್ಯನ ಅಮಾನತು
ನಾವು ನಮ್ಮ ಸ್ವಂತ ದೇಶದಲ್ಲಿಯೂ ಸುರಕ್ಷಿತವಾಗಿಲ್ಲ ಎಂದು ಮಹಿಳೆ ಎನ್ ಬೀ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದರು. ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಬೆಂಗಳೂರು ನಗರ ಪೊಲೀಸರು ಘಟನೆಯ ಸ್ಥಳ ಮತ್ತು ಅವರ ಸಂಪರ್ಕ ಸಂಖ್ಯೆಯನ್ನು ಕೋರಿದ್ದಾರೆ. ಈ ವಿಷಯವನ್ನು ಉಬರ್ ಪರಿಶೀಲನೆ ನಡೆಸುತ್ತಿದ್ದು, ಮಹಿಳೆಗಾದ ಘಟನೆಗಾಗಿ ರೈಡ್-ಹೇಲಿಂಗ್ ಅಪ್ಲಿಕೇಶನ್ ಕ್ಷಮೆಯಾಚಿಸಿದೆ. ಈ ನಡವಳಿಕೆಯು ತುಂಬಾ ಕಳವಳಕಾರಿಯಾಗಿದೆ. ಈ ರೀತಿ ಸಂಭವಿಸಿದ್ದಕ್ಕೆ ನಮಗೆ ತುಂಬಾ ವಿಷಾದವಿದೆ ಎಂದು ಅದು ಹೇಳಿದೆ.