ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಒಬಿಸಿ ವ್ಯಕ್ತಿಗೆ ಬ್ರಾಹ್ಮಣ ಯುವಕನ ಪಾದ ತೊಳೆದು ನೀರು ಸೇವಿಸುವ ಶಿಕ್ಷೆ; ನಾವು ಯಾವ ಶತಮಾನದಲ್ಲಿದ್ದೇವೆ?

Viral Video: ಮಧ್ಯ ಪ್ರದೇಶದಲ್ಲಿ ಬ್ರಾಹ್ಮಣ ವ್ಯಕ್ತಿಯ ಕಾಲು ತೊಳೆದು ನೀರನ್ನು ಸೇವಿಸುವಂತೆ ಒಬಿಸಿಗೆ ಸೇರಿದ ವ್ಯಕ್ತಿಗೆ ಶಿಕ್ಷೆ ನೀಡಲಾಗಿದೆ. ಬ್ರಾಹ್ಮಣ ವ್ಯಕ್ತಿಯನ್ನು ಅವಮಾನಿಸಿದ್ದಕ್ಕೆ ಈ ಶಿಕ್ಷೆ ವಿಧಿಸಲಾಗಿದೆ. ಸದ್ಯ ಈ ಪ್ರಕರಣ ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಭೋಪಾಲ್‌: ಮೇಲ್ಜಾತಿ-ಕೀಳುಜಾತಿ ಎಂಬ ಬೇಧ ಭಾವ ಈಗಲೂ ದೇಶದಲ್ಲಿ ನಡೆಯುತ್ತಿದೆ ಎನ್ನುವುದಕ್ಕೆ ಇಲ್ಲಿದೆ ಉತ್ತಮ ಉದಾಹರಣೆ. ಮಧ್ಯ ಪ್ರದೇಶದಲ್ಲಿ (Madhya Pradesh) ಇಂತಹದ್ದೊಂದು ಆಘಾತಕಾರಿ ಘಟನೆ ನಡೆದಿದ್ದು, ಬ್ರಾಹ್ಮಣ ವ್ಯಕ್ತಿಯ ಕಾಲು ತೊಳೆದು ನೀರನ್ನು ಸೇವಿಸುವಂತೆ ಒಬಿಸಿಗೆ (ಇತರ ಹಿಂದುಳಿದ ವರ್ಗ) ಸೇರಿದ ವ್ಯಕ್ತಿಗೆ ಶಿಕ್ಷೆ ನೀಡಲಾಗಿದೆ. ಬ್ರಾಹ್ಮಣ ವ್ಯಕ್ತಿಯನ್ನು ಅವಮಾನಿಸಿದ್ದಕ್ಕೆ ಈ ಶಿಕ್ಷೆ ವಿಧಿಸಲಾಗಿದೆ. ಮಧ್ಯ ಪ್ರದೇಶದ ದಮೋಹ್ ಜಿಲ್ಲೆಯಲ್ಲಿ ಈ ಅಮಾನುಷ ಘಟನೆ ನಡೆದಿದೆ. ಸದ್ಯ ಈ ಪ್ರಕರಣ ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ (Viral Video). ಅದಾಗ್ಯೂ ಎರಡೂ ಕಡೆಯವರು ಘಟನೆಯನ್ನು ಸುಮ್ಮನೆ ರಾಜಕೀಯಗೊಳಿಸಲಾಗುತ್ತಿದೆ ಎಂದು ಕರೆದಿದ್ದಾರೆ.

ವಿವಿಧ ಸಮುದಾಯಗಳ ನಡುವಿನ ಸಾಮರಸ್ಯಕ್ಕೆ ಧಕ್ಕೆ ತರುವ ಕೃತ್ಯ ಸೇರಿದಂತೆ ಹಲವು ವಿಭಾಗಗಳ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ʼʼಕುಶ್ವಾಹ ಸಮುದಾಯದವರು ಸಲ್ಲಿಸಿದ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆʼʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬ್ರಾಹ್ಮಣ ಯುವಕನ ಪಾದ ತೊಳೆದ ಒಬಿಸಿ ಸಮುದಾಯದ ವ್ಯಕ್ತಿಯ ವಿಡಿಯೊ ಇಲ್ಲಿದೆ:



ಈ ಸುದ್ದಿಯನ್ನೂ ಓದಿ: Viral Video: ಮಹಿಳೆಗೆ ಹೊಡೆದು, ಚಪ್ಪಲಿ ಹಾರ ಹಾಕಿ ಅರೆಬೆತ್ತಲೆ ಮೆರವಣಿಗೆ- ವಿಡಿಯೊ ನೋಡಿ

ಏನಿದು ಘಟನೆ?

ಸಂತ್ರಸ್ತನನ್ನು ಒಬಿಸಿ ಸಮುದಾಯಕ್ಕೆ ಸೇರಿದ ಪರ್ಶೋತ್ತಮ್ ಕುಶ್ವಾಹ ಎಂದು ಗುರುತಿಸಲಾಗಿದೆ. ಪರ್ಶೋತ್ತಮ್‌ಗೆ ಗ್ರಾಮಸ್ಥರ ಸಮ್ಮುಖದಲ್ಲಿ ಅನ್ನು ಪಾಂಡೆ ಎನ್ನುವ ಬ್ರಾಹ್ಮಣ ವ್ಯಕ್ತಿಯ ಪಾದಗಳನ್ನು ತೊಳೆದು ನೀರು ಕುಡಿಯುವ ಶಿಕ್ಷೆ ವಿಧಿಸಲಾಗಿದೆ. ಪಾಂಡೆಯನ್ನು ಪಾರ್ಶೋತ್ತಮ್‌ ಅವಮಾನಿಸಿದ ಹಿನ್ನೆಲೆಯಲ್ಲಿ ಈ ಶಿಕ್ಷೆ ನೀಡಲಾಗಿದೆಯಂತೆ. ಮಾತ್ರವಲ್ಲ 5,100 ರೂ. ದಂಡ ವಿಧಿಸುವ ಜತೆಗೆ ಬ್ರಾಹ್ಮಣ ಸಮುದಾಯದ ಕ್ಷಮೆಯಾಚಿಸುವಂತೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಘಟನೆ ಗ್ರಾಮ ಮಟ್ಟದ ವಿವಾದದೊಂದಿಗೆ ಪ್ರಾರಂಭವಾಯಿತು. ಪರ್ಶೋತ್ತಮ್‌ ಕುಶ್ವಾಹ ಮತ್ತು ಅನ್ನು ಪಾಂಡೆ ವಾಸಿಸುವ ಸತಾರಿಯಾ ಗ್ರಾಮದಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ. ಇದರ ಹೊರತಾಗಿಯೂ ಅನ್ನು ಪಾಂಡೆ ಮದ್ಯ ಮಾರಾಟ ಮಾಡುವುದನ್ನು ಮುಂದುವರೆಸಿದ್ದ. ಕೊನೆಗೆ ಆತನ ಈ ಕೃತ್ಯ ಬೆಳಕಿಗೆ ಬಂದು ಗ್ರಾಮಸ್ಥರು ಸಾರ್ವಜನಿಕವಾಗಿ ಕ್ಷಮೆಯಾಚಿಸುವ ಜತೆಗೆ 2,100 ರೂ. ದಂಡ ಕಟ್ಟುವಂತೆ ಸೂಚಿಸಿದರು. ಅದರಂತೆ ಪಾಂಡೆ ನಡೆದುಕೊಂಡಿದ್ದ.

ಈ ವೇಳೆ ಪರ್ಶೋತ್ತಮ್ ಒಂದು ಹೆಜ್ಜೆ ಮುಂದೆ ಹೋಗಿ ಅನ್ನು ಪಾಂಡೆ ಚಪ್ಪಲಿ ಹಾರ ಧರಿಸಿರುವಂತೆ ಎಐ ಚಿತ್ರ ರಚಿಸಿ ಸೋಶಿಯಲ್‌ ಮೀಡಿಯಾದಲ್ಲಿ ಹರಿಯಬಿಟ್ಟಿದ್ದ. ಕೆಲವೇ ನಿಮಿಷಗಳಲ್ಲಿ ಪೋಸ್ಟ್ ಅನ್ನು ಅಳಿಸಿ ಕ್ಷಮೆಯನ್ನೂ ಯಾಚಿಸಿದ್ದ. ಆದರೆ ಈ ಕೃತ್ಯವು ತಮ್ಮ ಸಮುದಾಯಕ್ಕೆ ಮಾಡಿದ ಅವಮಾನವೆಂದು ಬ್ರಾಹ್ಮಣರು ಆರೋಪಿಸುವುದರೊಂದಿಗೆ ವಿವಾದ ಹೊಸ ತಿರುವು ಪಡೆದುಕೊಂಡಿತು.

ಸ್ಥಳೀಯರ ಪ್ರಕಾರ, ಸುದ್ದಿ ಹೊರ ಬೀಳುತ್ತಿದ್ದಂತೆ ಬ್ರಾಹ್ಮಣ ಸಮುದಾಯದ ಗುಂಪೊಂದು ಪರ್ಶೋತ್ತಮ್ ತನ್ನ ಕೃತ್ಯಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕೆಂದು ಪಟ್ಟಿ ಹಿಡಿಯಿತು. ಅನ್ನುವಿನ ಪಾದಗಳನ್ನು ತೊಳೆದು, ಆ ನೀರನ್ನು ಕುಡಿದು, ಇಡೀ ಸಮುದಾಯದ ಕ್ಷಮೆಯಾಚಿಸುವಂತೆ ಸೂಚಿಸಲಾಯಿತು. ಪರ್ಶೋತ್ತಮ್ ಮಂಡಿಯೂರಿ ಅನ್ನುವಿನ ಪಾದಗಳನ್ನು ತೊಳೆಯುತ್ತಿರುವ ವಿಡಿಯೊ ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆತ ಪಾದ ತೊಳೆದ ನೀರು ಸೇವಿಸಿದ್ದಾನೆಯೇ ಎನ್ನುವುದು ತಿಳಿದುಬಂದಿಲ್ಲ.

ಈ ಸುದ್ದಿಯನ್ನೂ ಓದಿ: Viral Video: ರಾಷ್ಟ್ರಪಿತ ಎನ್ನುವುದು ಅವಮಾನ; ಟಾಲಿವುಡ್ ನಟನ ವಿವಾದಾತ್ಮಕ ಹೇಳಿಕೆಗೆ ಭುಗಿಲೆದ್ದ ಆಕ್ರೋಶ

ಈ ಮಧ್ಯೆ ಪರ್ಶೋತ್ತಮ್ ಮಾತನಾಡಿ ವಿವಾದ ಬಗೆಹರಿಸಲು ಯತ್ನಿಸಿದ್ದಾನೆ. "ನಾನು ತಪ್ಪು ಮಾಡಿದ್ದೇನೆ ಮತ್ತು ಅದಕ್ಕಾಗಿ ಕ್ಷಮೆಯಾಚಿಸಿದ್ದೇನೆ. ಅನ್ನು ಪಾಂಡೆ ನನ್ನ ಕುಟುಂಬದ ಗುರು. ದಯವಿಟ್ಟು ಇದನ್ನು ರಾಜಕೀಯಗೊಳಿಸಬೇಡಿ" ಎಂದು ಮನವಿ ಮಾಡಿ ವಿಡಿಯೊ ಹಂಚಿಕೊಂಡಿದ್ದಾನೆ. ಅನ್ನು ಪಾಂಡೆ ಕೂಡ ಇದನ್ನು ಪರಸ್ಪರ ಒಪ್ಪಿಗೆಯ ಮೇರೆಗೆ ಪರಿಹರಿಸಲಾಗಿದೆ ಎಂದು ಹೇಳಿದ್ದಾನೆ. "ಕೆಲವರು ಇದನ್ನು ರಾಜಕೀಯಗೊಳಿಸುತ್ತಿದ್ದಾರೆ. ನಮ್ಮ ನಡುವೆ ಗುರು-ಶಿಷ್ಯ ಸಂಬಂಧವಿದೆ. ನಾನು ಅವರನ್ನು ಅವಮಾನಿಸಲಿಲ್ಲ. ಅದು ಆತನ ಸ್ವಯಂಪ್ರೇರಣೆಯ ತೀರ್ಮಾನವಾಗಿತ್ತುʼʼ ಎಂದಿದ್ದಾನೆ.

ಅದಾಗ್ಯೂ ಕುಶ್ವಾಹ ಸಮುದಾಯ ದೂರು ದಾಖಲಿಸಿದೆ. ಸದ್ಯ ಈ ಘಟನೆ ದೇಶದಲ್ಲಿ ಈಗಲೂ ಬೇರೂರಿರುವ ಜಾತಿ ಪದ್ಧತಿಯ ಬಗ್ಗೆ ತೀವ್ರ ಚರ್ಚೆ ಹುಟ್ಟುಹಾಕಿದೆ. ನಾವು ಇನ್ನೂ ಯಾವ ಶತಮಾನದಲ್ಲಿ ವಾಸಿಸುತ್ತಿದ್ದೇವೆ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.