Viral Video: ಮಹಿಳೆಗೆ ಹೊಡೆದು, ಚಪ್ಪಲಿ ಹಾರ ಹಾಕಿ ಅರೆಬೆತ್ತಲೆ ಮೆರವಣಿಗೆ- ವಿಡಿಯೊ ನೋಡಿ
Woman thrashed: ಗ್ರಾಮದ ಹಲವು ಮನೆಗಳಲ್ಲಿ ಕಳ್ಳತನ ಮಾಡಿದ್ದಾಳೆ ಎಂದು ಆರೋಪಿಸಿ ಮಹಿಳೆಯೊಬ್ಬಳನ್ನು ಗ್ರಾಮಸ್ಥರು ಹಿಡಿದು ಥಳಿಸಿದ್ದಾರೆ. ಅಷ್ಟೇ ಅಲ್ಲದೆ, ಆಕೆಗೆ ಚಪ್ಪಲಿ ಹಾರ ಹಾಕಿ, ಅರೆಬೆತ್ತಲೆ ಮೆರವಣಿಗೆ ಮಾಡಿದ್ದಾರೆ. ಜಾರ್ಖಂಡ್‌ನ ಪಿಪ್ರಾಲಿ ಗ್ರಾಮದಲ್ಲಿ ಅಮಾನವೀಯ ಘಟನೆ ನಡೆದಿದೆ.

-

ರಾಂಚಿ: ಮಹಿಳೆಯೊಬ್ಬಳನ್ನು ಥಳಿಸಿ (thrashed), ಕೂದಲು ಕತ್ತರಿಸಿ, ನಂತರ ಆಕೆಯ ಕುತ್ತಿಗೆಗೆ ಚಪ್ಪಲಿ ಹಾರ ಹಾಕಿ ಅರೆಬೆತ್ತಲೆಯಾಗಿ ಹಳ್ಳಿಯ ಸುತ್ತಲೂ ಮೆರವಣಿಗೆ ಮಾಡಲಾದ ಅಮಾನವೀಯ ಘಟನೆ ಜಾರ್ಖಂಡ್ (Jharkhand)ನ ಗಿರಿದಿಹ್ ಜಿಲ್ಲೆಯ ದುಮ್ರಿ ಪೊಲೀಸ್ ಠಾಣೆ ವ್ಯಾಪ್ತಿಯ ಪಿಪ್ರಾಲಿ ಗ್ರಾಮದಲ್ಲಿ ನಡೆದಿದೆ.
ವರದಿಗಳ ಪ್ರಕಾರ, ಸಂತ್ರಸ್ತ ಮಹಿಳೆಯು ಮನೆಗಳಿಗೆ ನುಗ್ಗಿ ಕೆಲವು ವಸ್ತುಗಳನ್ನು ಕದ್ದಿದ್ದಾಳೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಭಾನುವಾರ ಸಂಜೆ ಅನುಮಾನದ ಮೇರೆಗೆ ಗ್ರಾಮದ ನಿವಾಸಿಗಳ ಗುಂಪೊಂದು ಆಕೆಯನ್ನು ಹಿಡಿದು ಹಲ್ಲೆ ನಡೆಸಿದ್ದಾರೆ. ಅಲ್ಲದೆ ಗ್ರಾಮದಾದ್ಯಂತ ಮೆರವಣಿಗೆ ನಡೆಸಿ, ಕ್ರೂರತನ ಮೆರೆದಿದ್ದಾರೆ. ಈ ದೃಶ್ಯವನ್ನು ಕೆಲವರು ತಮ್ಮ ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ.
ಆರೋಪಿ ಎಂದು ಹೇಳಲಾದ ಸಂತ್ರಸ್ತ ಮಹಿಳೆಯನ್ನು ಸುತ್ತುವರೆದ ಮಹಿಳೆಯರ ಗುಂಪೊಂದು ಆಕೆಗೆ ಹಲ್ಲೆ ಮಾಡಿದ್ದಾರೆ. ಮರದ ಕೋಲಿನಿಂದ ಮಹಿಳೆಗೆ ಮನಬಂದಂತೆ ಥಳಿಸಿದ್ದಾರೆ. ನಂತರ ಆಕೆಯ ತಲೆಗೂದಲನ್ನು ಕತ್ತರಿಸಿ, ಅರೆಬೆತ್ತಲೆ ಮಾಡಿ, ಗ್ರಾಮದಲ್ಲಿ ಮೆರವಣಿಗೆ ಮಾಡಲಾಗಿದೆ. ಈ ವೇಳೆ ಆಕೆಯನ್ನು ಗ್ರಾಮಸ್ಥರು ಸುತ್ತುವರಿದು ನಿಂದಿಸಿದ್ದಾರೆ.
ವಿಡಿಯೊ ಇಲ್ಲಿದೆ
🚨बेहद गंभीर मामला झारखंड🚨🚨
— Sutibro Goswami ( पत्रकार ) (@sutibro_goswami) September 1, 2025
झारखंड महिला को अर्धनग्न व मुंडन कर चप्पल पहनाकर ग्रामीणों ने घुमाया ....😔 @HemantSorenJMM 🚨@deepakbiruajmm 🚨
गिरिडीह जिला के डुमरी प्रखण्ड के एक गाँव में चोरी के आरोप में एक महिला को ग्रामीणों ने ग्रामीणों ने मारपीट करते हुए अर्धनग्न व मुंडन… pic.twitter.com/taPgupire3
ಇದನ್ನೂ ಓದಿ: Viral Video: ವಿಮಾನದ ರನ್‌ವೇ ಬಳಿ ಮೂತ್ರ ವಿಸರ್ಜಿಸಿದ ವೃದ್ಧ; ಕಾಕ್‍ಪಿಟ್‍ನಲ್ಲಿ ಕುಳಿತು ದೃಶ್ಯ ಚಿತ್ರೀಕರಿಸಿದ ಪೈಲಟ್
ಈ ಬಗ್ಗೆ ಮಾಹಿತಿ ತಿಳಿದ ತಕ್ಷಣ, ಪೊಲೀಸ್ ಠಾಣೆಯ ಉಸ್ತುವಾರಿ ಪ್ರಣಿತ್ ಪಟೇಲ್ ಅವರು ತಮ್ಮ ತಂಡದೊಂದಿಗೆ ಸ್ಥಳಕ್ಕೆ ತಲುಪಿ ಸಂತ್ರಸ್ತೆಯನ್ನು ರಕ್ಷಿಸಿದರು. ಕೂಡಲೇ ಚಿಕಿತ್ಸೆಗಾಗಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದರು. ಹಲ್ಲೆಯಲ್ಲಿ ಭಾಗಿಯಾಗಿದ್ದಕ್ಕಾಗಿ ಈಗಾಗಲೇ ಮೂವರು ಮಹಿಳೆಯರನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ. ಇನ್ನು ಕೆಲವರು ಸೆರೆಹಿಡಿದ ಮೊಬೈಲ್ ದೃಶ್ಯಾವಳಿಗಳನ್ನು ಗಮನಿಸಿ, ತಪ್ಪಿತಸ್ಥರನ್ನು ಗುರುತಿಸುವ ಪ್ರಯತ್ನಗಳು ನಡೆಯುತ್ತಿವೆ. ತಪ್ಪಿತಸ್ಥರೆಂದು ಕಂಡುಬಂದ ಎಲ್ಲರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಈ ಘಟನೆಯನ್ನು ಜಿಲ್ಲೆಯ ಅಧಿಕಾರಿಗಳು ಖಂಡಿಸಿದ್ದು, ಇದನ್ನು ಅಮಾನವೀಯ ಮತ್ತು ಕಾನೂನುಬಾಹಿರ ಎಂದು ಬಣ್ಣಿಸಿದ್ದಾರೆ. ಇಡೀ ಪ್ರಕರಣವನ್ನು ಕೂಲಂಕಷವಾಗಿ ತನಿಖೆ ಮಾಡಲಾಗುತ್ತಿದೆ. ತಪ್ಪಿತಸ್ಥರಿಗೆ ಶಿಕ್ಷೆ ಖಂಡಿತ ಎಂದು ಎಂದು ಗಿರಿದಿಹ್ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇನ್ನು ಈ ಸುದ್ದಿಯು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral News) ಆಗುತ್ತಿದ್ದಂತೆ ನೆಟ್ಟಿಗರು ಕೂಡ ಗ್ರಾಮಸ್ಥರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಒಬ್ಬ ಮಹಿಳೆಗೆ ಈ ರೀತಿ ಅವಮಾನ ಮಾಡಿದ್ದು ಸರಿಯಲ್ಲ. ಆಕೆ ಕಳ್ಳತನ ಮಾಡಿದ್ದಲ್ಲಿ, ಪೊಲೀಸರಿಗೆ ದೂರು ನೀಡಬಹುದಿತ್ತು. ಅದು ಬಿಟ್ಟು, ಮಹಿಳೆಗೆ ಥಳಿಸಿ, ಅರೆಬೆತ್ತಲೆ ಮೆರವಣಿಗೆ ಮಾಡಿರುವುದು ಒಪ್ಪತ್ತಕ್ಕದಲ್ಲ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದು ಕೆಲವರು ಆಗ್ರಹಿಸಿದ್ದಾರೆ.