ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Fake Doctor: ಮಧ್ಯ ಪ್ರದೇಶದಲ್ಲಿ ಬೆಚ್ಚಿ ಬೀಳಿಸುವ ಘಟನೆ; ನಕಲಿ ವೈದ್ಯನಿಂದ ಹೃದಯ ಶಸ್ತ್ರ ಚಿಕಿತ್ಸೆ: 7 ಮಂದಿ ಸಾವು

ಬ್ರಿಟಿಷ್ ವೈದ್ಯ ಎನ್. ಜಾನ್ ಕೆಮ್ ಎಂದು ಹೇಳಿಕೊಂಡು ಕ್ರಿಶ್ಚಿಯನ್ ಮಿಷನರಿ ಆಸ್ಪತ್ರೆಯಲ್ಲಿ ಹೃದ್ರೋಗ ತಜ್ಞನಾಗಿ ಕಾರ್ಯ ನಿರ್ವಹಿಸುತ್ತಿದ್ದ ನರೇಂದ್ರ ವಿಕ್ರಮಾದಿತ್ಯ ಯಾದವ್ ನಕಲಿ ವೈದ್ಯ ಎನ್ನುವುದು ತಿಳಿದು ಬಂದಿದೆ. ಆತನಿಂದಾಗಿ ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾದ 7 ಮಂದಿ ಸಾವನ್ನಪ್ಪಿದ್ದಾರೆ.

ನಕಲಿ ವೈದ್ಯನಿಂದ ಹೃದಯ  ಶಸ್ತ್ರ ಚಿಕಿತ್ಸೆ; 7 ಮಂದಿ ಸಾವು

ಸಾಂದರ್ಭಿಕ ಚಿತ್ರ.

ಭೋಪಾಲ್‌: ನಕಲಿ ವೈದ್ಯನೊಬ್ಬ (Fake doctor) ರೋಗಿಗಳಿಗೆ ಹೃದಯ ಶಸ್ತ್ರಚಿಕಿತ್ಸೆ (Heart surgery) ನಡೆಸಿ ಕನಿಷ್ಠ 7 ಮಂದಿಯ ಸಾವಿಗೆ ಕಾರಣವಾಗಿರುವ ಘಟನೆ ಮಧ್ಯ ಪ್ರದೇಶದ ದಾಮೋಹ್ ನಗರದ ಖಾಸಗಿ ಮಿಷನರಿ ಆಸ್ಪತ್ರೆಯಲ್ಲಿ (Christian missionary hospital) ನಡೆದಿದೆ. ಆರೋಪಿಯನ್ನು ನರೇಂದ್ರ ವಿಕ್ರಮಾದಿತ್ಯ ಯಾದವ್ ಎಂದು ಗುರುತಿಸಲಾಗಿದೆ. ಬ್ರಿಟಿಷ್ ವೈದ್ಯ ಎನ್. ಜಾನ್ ಕೆಮ್ ಎಂದು ಹೇಳಿಕೊಂಡು ಕ್ರಿಶ್ಚಿಯನ್ ಮಿಷನರಿ ಆಸ್ಪತ್ರೆಯಲ್ಲಿ ಹೃದ್ರೋಗ ತಜ್ಞನಾಗಿ ನರೇಂದ್ರ ವಿಕ್ರಮಾದಿತ್ಯ ಯಾದವ್ ಕೆಲಸ ಪಡೆದಿದ್ದ ಎನ್ನಲಾಗಿದೆ. ಅನೇಕ ರೋಗಿಗಳಿಗೆ ಹೃದಯ ಶಸ್ತ್ರಚಿಕಿತ್ಸೆ ನಡೆಸಿದ್ದ, ಆತನಿಂದಾಗಿ ಏಳು ಮಂದಿ ಸಾವನ್ನಪ್ಪಿದ್ದಾರೆ. ಘಟನೆ ಕುರಿತು ತನಿಖೆ ನಡೆಸಲಾಗುತ್ತಿದೆ.

ಈ ಕುರಿತು ಮಾಹಿತಿ ನೀಡಿರುವ ಮಕ್ಕಳ ಕಲ್ಯಾಣ ಸಮಿತಿಯ ಜಿಲ್ಲಾಧ್ಯಕ್ಷ ಮತ್ತು ವಕೀಲ ದೀಪಕ್ ತಿವಾರಿ, ಅಧಿಕೃತ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಈ ಕುರಿತು ದಾಮೋಹ್ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ದೂರು ನೀಡಲಾಗಿದೆ ಎಂದರು.



ತಂದೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ ಒಬ್ಬ ವ್ಯಕ್ತಿ ಈ ಕುರಿತು ಮಾಹಿತಿ ನೀಡಿದ್ದರು. ಅವರ ತಂದೆಗೂ ಹೃದಯ ಶಸ್ತ್ರಚಿಕಿತ್ಸೆ ನಡೆಯಬೇಕಾಗಿತ್ತು. ಆದರೆ ಅವರು ಭಯಭೀತರಾಗಿದ್ದರು. ಹೀಗಾಗಿ ಅವರು ತಮ್ಮ ತಂದೆಯನ್ನು ಜಬಲ್‌ಪುರಕ್ಕೆ ಕರೆದೊಯ್ದರು. ಬಳಿಕ ತನಿಖೆ ನಡೆಸಿದಾಗ ನಕಲಿ ವೈದ್ಯರು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವುದು ತಿಳಿದು ಬಂದಿದೆ. ನಿಜವಾದ ಎನ್. ಜಾನ್ ಕೆಮ್ ಬ್ರಿಟನ್‌ನಲ್ಲಿದ್ದಾರೆ ಮತ್ತು ಇಲ್ಲಿರುವ ನಕಲಿ ವೈದ್ಯನನ್ನು ನರೇಂದ್ರ ಯಾದವ್ ಎಂದು ಗುರುತಿಸಲಾಗಿದೆ.

ಯಾದವ್ ವಿರುದ್ಧ ಹೈದರಾಬಾದ್‌ನಲ್ಲಿ ಪ್ರಕರಣ ದಾಖಲಿಸಲಾಗಿದೆ. ಆತನ ಬಳಿ ಯಾವುದೇ ನಿಜವಾದ ಗುರುತಿನ ದಾಖಲೆಗಳಿಲ್ಲ ಎಂದು ವಕೀಲರು ತಿಳಿಸಿದ್ದಾರೆ. ನಕಲಿ ವೈದ್ಯ ಕೆಲಸ ಮಾಡುತ್ತಿದ್ದ ಖಾಸಗಿ ಮಿಷನರಿ ಆಸ್ಪತ್ರೆಯು ಆಯುಷ್ಮಾನ್ ಭಾರತ್ ಯೋಜನೆಯಡಿ ಸರ್ಕಾರದಿಂದ ಹಣವನ್ನು ಪಡೆದಿದೆ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸದಸ್ಯೆ ಪ್ರಿಯಾಂಕಾ ಕನೂಂಗೊ ತಿಳಿಸಿದ್ದಾರೆ.

ಮಿಷನರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ನಕಲಿ ವೈದ್ಯ ಶಸ್ತ್ರಚಿಕಿತ್ಸೆ ಮಾಡಿದ್ದಾನೆ ಎಂಬ ದೂರು ಬಂದಿದೆ. ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಭಾಗಿಯಾಗಿರುವ ಮಿಷನರಿ ಆಸ್ಪತ್ರೆ ಅದಕ್ಕಾಗಿ ಸರ್ಕಾರದಿಂದ ಹಣವನ್ನು ಪಡೆಯುತ್ತಿದೆ ಎಂದು ದೂರಿನಲ್ಲಿ ಹೇಳಲಾಗಿದೆ. ಇದು ಗಂಭೀರ ವಿಷಯವಾಗಿರುವುದರಿಂದ ಈ ಬಗ್ಗೆ ಪ್ರಸ್ತುತ ತನಿಖೆ ನಡೆಯುತ್ತಿದೆ ಎಂದರು.

ಇದನ್ನೂ ಓದಿ: Canada Murder Case: ಕೆನಡಾದಲ್ಲಿ ಭಾರತೀಯ ಪ್ರಜೆಗೆ ಇರಿದು ಕೊಲೆ- ಶಂಕಿತ ಅರೆಸ್ಟ್‌

2023ರಲ್ಲಿ ಈ ನಕಲಿ ವೈದ್ಯ ತಾನು ಬ್ರಿಟಿಷ್ ವೈದ್ಯ ಎನ್. ಜಾನ್ ಕೆಮ್ ಎಂದು ಹೇಳಿ ದೇಶದಲ್ಲಿ ನಡೆಯುತ್ತಿರುವ ಗಲಭೆಗಳನ್ನು ತಡೆಯಲು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಫ್ರಾನ್ಸ್‌ಗೆ ಕಳುಹಿಸಬೇಕೆಂದು ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದ ಎನ್ನಲಾಗಿದೆ.