ಅಮರಾವತಿ, ಆ. 20: ಆಂಧ್ರ ಪ್ರದೇಶದ ಒಂಗೋಲ್‌ನ ವಸತಿ ಸಮುಚ್ಚಯವೊಂದರಲ್ಲಿ ಲಿಫ್ಟ್ ಬಾಗಿಲು ತೆರೆದಿದ್ದಾಗಲೇ ಏಕಾಏಕಿ ಚಲಿಸಿದ ಪರಿಣಾಮ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಮೃತ ಮಹಿಳೆಯನ್ನು ವನಿತಾ ಎಂದು ಗುರುತಿಸಲಾಗಿದೆ. ಅವರು ತಮ್ಮ ಮಗಳು ಹಾಗೂ ಮೊಮ್ಮಗನೊಂದಿಗೆ ಲಿಫ್ಟ್‌ನಲ್ಲಿ ಪ್ರಯಾಣಿಸುತ್ತಿದ್ದರು. ಸೂರ್ಯ ಟವರ್ಸ್ ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ನಡೆದಿದೆ. ಸದ್ಯ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.
ಲಿಫ್ಟ್ ನಿಗದಿತ ಮಹಡಿಗೆ ತಲುಪಿದ ಬಳಿಕ ವನಿತಾ ಅವರ ಮಗಳು ಹಾಗೂ ಮೊಮ್ಮಗ ಹೊರಬಂದಿದ್ದಾರೆ. ಆದರೆ ವನಿತಾ ಹೊರಬರುವ ಮುನ್ನವೇ ಬಾಗಿಲು ತೆರೆದ ಸ್ಥಿತಿಯಲ್ಲೇ ಲಿಫ್ಟ್ ಏಕಾಏಕಿ ಕೆಳಕ್ಕೆ ಚಲಿಸಲು ಆರಂಭಿಸಿದೆ. ಅನಿರೀಕ್ಷಿತವಾಗಿ ಲಿಫ್ಟ್ ಚಲಿಸಿದ್ದರಿಂದ ಗಾಬರಿಗೊಂಡ ವನಿತಾ ತಕ್ಷಣ ಹೊರಬರಲು ಪ್ರಯತ್ನಿಸಿದ್ದಾರೆ. ಈ ವೇಳೆ ಅವರು ಲಿಫ್ಟ್‌ನಲ್ಲಿ ಸಿಲುಕಿಕೊಂಡು ಗಂಭೀರವಾಗಿ ಗಾಯಗೊಂಡಿದ್ದಾರೆ.
ಲಿಫ್ಟ್‌ನಲ್ಲಿ ಮೃತಪಟ್ಟ ಮಹಿಳೆ:
ವೈರಲ್ ಆದ ವಿಡಿಯೊದಲ್ಲಿ ವನಿತಾ ಅವರ ಮಗಳು ಲಿಫ್ಟ್‌ನ ಬಾಗಿಲನ್ನು ತೆರೆಯಲು ಪ್ರಯತ್ನಿಸುತ್ತಾ ಸಹಾಯಕ್ಕಾಗಿ ಕೂಗುತ್ತಿರುವುದು ಕಂಡುಬಂದಿದೆ. ಬಳಿಕ ಅಪಾರ್ಟ್‌ಮೆಂಟ್‌ನ ನಿವಾಸಿಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿ ವನಿತಾ ಅವರನ್ನು ಲಿಫ್ಟ್‌ನಿಂದ ಹೊರತೆಗೆದಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ವನಿತಾ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಸತಿ ಸಮುಚ್ಚಯಗಳಲ್ಲಿ ಲಿಫ್ಟ್‌ಗಳ ಸುರಕ್ಷತೆ ಹಾಗೂ ನಿರ್ವಹಣೆ ಕುರಿತು ಗಂಭೀರ ಪ್ರಶ್ನೆಗಳು ಎದ್ದಿವೆ. ಲಿಫ್ಟ್ ಬಾಗಿಲು ತೆರೆದಿರುವಾಗ ಅದು ಚಲಿಸಲು ಹೇಗೆ ಸಾಧ್ಯವಾಯಿತು ಎಂಬುದರ ಕುರಿತು ಪರಿಶೀಲನೆ ನಡೆಯಬೇಕಿದೆ.
ಲಿಫ್ಟ್‌ನಲ್ಲಿ ಸಿಲುಕಿದ್ದ ಶಶಿ ತರೂರ್
ಇತ್ತೀಚೆಗೆ ಕಾಂಗ್ರೆಸ್ ಸಂಸದ ಶಶಿ ತರೂರ್ ಕೂಡ ಲಿಫ್ಟ್‌ನಲ್ಲಿ ಸಿಲುಕಿಕೊಂಡ ಘಟನೆ ನಡೆದಿತ್ತು. ಕೇರಳಂನ ತಿರುವನಂತಪುರಂನಲ್ಲಿ ಖಾಸಗಿ ಹೋಟೆಲ್‌ನ ಲಿಫ್ಟ್‌ನಲ್ಲಿ ಸಿಲುಕಿದ್ದ ಅವರನ್ನು ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ ಕೆಲವೇ ನಿಮಿಷಗಳಲ್ಲಿ ಕಾಪಾಡಿದ್ದರು. ಲಿಫ್ಟ್ ಬಾಗಿಲು ತೆರೆಯಲು ಸಿಬ್ಬಂದಿ ಹೈಡ್ರಾಲಿಕ್ ಉಪಕರಣ ಬಳಸಿದ್ದರು. ಬಳಿಕ ತ್ವರಿತವಾಗಿ ಕಾರ್ಯಾಚರಣೆ ನಡೆಸಿದ ಕೇರಳ ಅಗ್ನಿಶಾಮಕ ಮತ್ತು ರಕ್ಷಣಾ ಸೇವಾ ಸಿಬ್ಬಂದಿಗೆ ಶಶಿ ತರೂರ್ ಧನ್ಯವಾದ ಸಲ್ಲಿಸಿದ್ದರು.