ಗಾಂಧಿನಗರ, ಡಿ. 10: ಇತ್ತೀಚಿನ ದಿನದಲ್ಲಿ ಸಣ್ಣ ಪುಟ್ಟ ಕಾರಣಕ್ಕೆಲ್ಲ ದಾಂಪತ್ಯ ಜೀವನದಲ್ಲಿ ವೈಮನಸ್ಸು ಮೂಡಿ ವಿಚ್ಛೇದನ ಪಡೆಯುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ. ಕೆಲವು ಕ್ಷುಲಕ ಕಾರಣಗಳು ವಿಚ್ಛೇದನಕ್ಕೆ ಕಾರಣವಾಗುತ್ತಿವೆ. ಕೌಟುಂಬಿಕ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿದಾಗ ದಂಪತಿಯ ವಿಚ್ಛೇದನಕ್ಕೆ ಇರುವ ಕಾರಣ ಕೇಳಿ ನ್ಯಾಯಾಧೀಶರು ಕೂಡ ಅಚ್ಚರಿಗೊಂಡಿದ್ದೂ ಇದೆ. ಇದೀಗ ದಂಪತಿನಡುವೆ ಈರುಳ್ಳಿ ಮತ್ತು ಬೆಳ್ಳುಳ್ಳಿ ಸೇವನೆಯ ವಿಚಾರಕ್ಕೆ ವೈಮನಸ್ಸು ಮೂಡಿ 23 ವರ್ಷದ ದಾಂಪತ್ಯ ಜೀವನವು ಅಂತ್ಯಗೊಂಡಿರುವ ಘಟನೆ ನಡೆದಿದೆ.
ಈರುಳ್ಳಿ ಮತ್ತು ಬೆಳ್ಳುಳ್ಳಿ ತಿನ್ನುವ ವಿಚಾರದಲ್ಲಿ ಗುಜರಾತ್ ಮೂಲದ ದಂಪತಿ ನಡುವೆ ದೀರ್ಘಕಾಲದಿಂದಲೂ ಜಗಳ ನಡೆಯುತ್ತಿದ್ದು ಇದೀಗ ವಿಚ್ಛೇದನ ಪಡೆಯುವ ಮೂಲಕ ಸಂಬಂಧ ಅಂತ್ಯ ಕಂಡಿದೆ. ಸದ್ಯ ಈ ಸುದ್ದಿ ಸೋಶಿಯಲ್ ಮಿಡಿಯಾದಲ್ಲಿ ವೈರಲ್ (Viral News) ಆಗುತ್ತಿದೆ.
ಗುಜರಾತ್ ಮೂಲದ ಈ ಜೋಡಿ 2002ರಲ್ಲಿ ಮದುವೆಯಾಗಿತ್ತು. ಆರಂಭಿಕ ವರ್ಷದಲ್ಲಿ ಈ ಜೋಡಿ ಬಹಳ ಅನ್ಯೋನ್ಯವಾಗಿತ್ತು. ಆಗ ಅವರ ನಡುವೆ ಎಲ್ಲ ವಿಚಾರದಲ್ಲೂ ಹೊಂದಾಣಿಕೆ ಇತ್ತು. ಆದರೆ ಇದೀಗ ಇವರ ನಡುವೆ ಈರುಳ್ಳಿ ಬೆಳ್ಳುಳ್ಳಿ ಸೇವಿಸುವ ವಿಚಾರಕ್ಕೆ ಭಿನ್ನಾಭಿಪ್ರಾಯ ಮೂಡಿದೆ. ಪತ್ನಿ ವಿಷ್ಣುವಿನ ಭಕ್ತೆಯಾಗಿದ್ದು ದೇವರ ಆರಾಧನೆಯ ಸಲುವಾಗಿ ಈರುಳ್ಳಿ ಹಾಗೂ ಬೆಳ್ಳುಳ್ಳಿ ಸೇವನೆ ನಿಲ್ಲಿಸಿದ್ದರು. ಹೀಗಾಗಿ ಪತಿ ಮತ್ತು ಅತ್ತೆಗೆ ಈರುಳ್ಳಿ, ಬೆಳ್ಳುಳ್ಳಿ ಹಾಕದ ಅಡುಗೆಯನ್ನೇ ತಯಾರಿಸಿ ನೀಡುತ್ತಿದ್ದಳು.
ಮೊದ ಮೊದಲು ಮೂವರು ಇದೇ ಆಹಾರ ಸೇವಿಸುತ್ತಿದ್ದರು. ಆಕೆಯ ಗಂಡ ಮತ್ತು ಅತ್ತೆ ಆಗಾಗ ಈರುಳ್ಳಿ-ಬೆಳ್ಳುಳ್ಳಿ ಹಾಕಿದ ಆಹಾರವನ್ನು ಸೇವಿಸುತ್ತಿದ್ದರು. ಆಕೆಯ ಅತ್ತೆ ಕೆಲವು ಬಾರಿ ಈರುಳ್ಳಿ, ಬೆಳ್ಳುಳ್ಳಿ ಹಾಕಿ ಆಹಾರ ಖಾದ್ಯಗಳನ್ನು ಮಾಡುತ್ತಿದ್ದರು. ಹೀಗಾಗಿ ಒಂದೇ ಮನೆಯಲ್ಲಿ ಪ್ರತ್ಯೇಕ ಅಡುಗೆಯನ್ನು ಮಾಡಿಕೊಳ್ಳತೊಡಗಿದ್ದರು. ಇದರ ಜತೆಗೆ ಸಣ್ಣ ಪುಣ್ಣ ವಿಚಾರಕ್ಕೂ ಜಗಳವಾಗಿದೆ. ಪತಿ ಮತ್ತು ಅತ್ತೆಯ ಜತೆಗೆ ಜಗಳ, ಭಿನ್ನಾಭಿಪ್ರಾಯವಿದ್ದ ಕಾರಣಕ್ಕೆ ಮಹಿಳೆ ತನ್ನ ಮಗುವಿನ ಜತೆಗೆ ಮನೆ ಬಿಟ್ಟು ತವರು ಮನೆಗೆ ತೆರಳಿದ್ದಾಳೆ.
ಬಳಿಕ ಈ ದಂಪತಿಯನ್ನು ಒಂದುಗೂಡಿಸಲು ರಾಜಿ ಪಂಚಾಯಿತಿ ಕೂಡ ಮಾಡಲಾಗಿದೆ. ಆದರೆ ಯಾವುದೆ ಪ್ರಯೋಜನ ಆಗಿಲ್ಲ. ಹೀಗಾಗಿ ಪತಿಯೂ ಅಹಮದಾಬಾದ್ ಕೌಟುಂಬಿಕ ಕೋರ್ಟ್‌ಗೆ ವಿಚ್ಚೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಸುದೀರ್ಘ ವಿಚಾರಣೆ ನಡೆದ ಬಳಿಕ 2024ರಲ್ಲಿ ಕೌಟುಂಬಿಕ ನ್ಯಾಯಾಲಯ ಇಬ್ಬರಿಗೂ ವಿಚ್ಛೇದನಕ್ಕೆ ಸಮ್ಮತಿ ನೀಡಿದೆ. 11 ವರ್ಷ ಒಟ್ಟಿಗೆ ಬಾಳ್ವೆ ನಡೆಸಿದ್ದ ಈ ಜೋಡಿ 12 ವರ್ಷದ ಸುಧೀರ್ಘ ವಿಚಾರಣೆ ಬಳಿಕ ಇದೀಗ ಕಾನೂನು ಪ್ರಕಾರ ಬೇರ್ಪಟ್ಟಿದ್ದಾರೆ. ವಿಚ್ಛೇದನ ಬಳಿಕ ಪತ್ನಿಗೆ ಜೀವನಾಂಶ ನೀಡಲು ಕೋರ್ಟ್ ಸೂಚನೆ ನೀಡಿದೆ.
ಅಹಮದಾಬಾದ್ ಕೌಟುಂಬಿಕ ನ್ಯಾಯಾಲಯದ ಆದೇಶದ ವಿರುದ್ಧ ಪತ್ನಿ ವಿಚ್ಛೇದನವನ್ನೇ ರದ್ದುಗೊಳಿಸುವಂತೆ ಮೇಲ್ಮನವಿ ಮಾಡಿದ್ದಾರೆ. ಪತಿ ಕೂಡ ಜೀವನಾಂಶದ ಮೊತ್ತವನ್ನು ಕಡಿಮೆ ಮಾಡುವಂತೆಯೂ ಗುಜರಾತ್ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಹೀಗಾಗಿ ಡಿಸೆಂಬರ್ 8ರಂದು ಈ ಬಗ್ಗೆ ಗುಜರಾತ್ ಹೈ ಕೋರ್ಟ್ ನಲ್ಲಿ ವಿಚಾರಣೆ ನಡೆಸಲಾಗಿದೆ.
ಫ್ಲೈಓವರ್‌ನಲ್ಲಿ ಹುಟ್ಟುಹಬ್ಬ ಆಚರಣೆ; FIR ಆಗುತ್ತಲೇ ಕ್ಷಮಿಸಿ ಎಂದು ಬೇಡಿಕೊಂಡ ಯುವಕ
ನ್ಯಾಯಮೂರ್ತಿಗಳಾದ ಸುನೀತಾ ಅಗರ್ವಾಲ್ ಮತ್ತು ಪ್ರಚಾಕ್ ತಾಚಾರ್ ಇದ್ದ ದ್ವಿಸದಸ್ಯ ಪೀಠದ ಮುಂದೆ ಪತಿಯ ಮೇಲ್ಮನವಿ ವಿಚಾರಣೆ ನಡೆದಿದ್ದು, ಗುಜರಾತ್ ಹೈಕೋರ್ಟ್ ಅಹಮದಾಬಾದ್ ಕೌಟುಂಬಿಕ ನ್ಯಾಯಾಲಯದ ವಿಚ್ಛೇದನ ತೀರ್ಪನ್ನು ಎತ್ತಿ ಹಿಡಿದಿದೆ. ಹೈಕೋರ್ಟ್ ವಿಚಾರಣೆಯ ಸಂದರ್ಭದಲ್ಲಿ, ಕುಟುಂಬ ನ್ಯಾಯಾಲಯದ ನಿರ್ದೇಶನದ ಹೊರತಾಗಿಯೂ, 18 ತಿಂಗಳಿನಿಂದ ಪತಿಯು ತನ್ನ ಪತ್ನಿಗೆ ಜೀವನಾಂಶವನ್ನು ನೀಡಿಲ್ಲ ಎಂದು ಮಹಿಳೆಯ ಪರ ವಕೀಲರು ವಾದಿಸಿ ದರು. ಈ ಬಗ್ಗೆ ಮಾಹಿತಿ ನೀಡಿದ್ದ ಮಹಿಳೆಯ ಪರ ವಕೀಲರು ಒಟ್ಟು ಜೀವನಾಂಶ 13,02,000 ರೂ.ಗಳಾಗಿದ್ದು ಅದರಲ್ಲಿ ಮಧ್ಯಂತರ ಜೀವನಾಂಶವಾಗಿ 2,72,000 ರೂ.ಗಳನ್ನು ಪಾವತಿಸಿದ್ದಾರೆ ಉಳಿದ ಮೊತ್ತ ಪಾವತಿಯಾಗಿಲ್ಲ, ಮೊಕದ್ದಮೆಯ ಸಮಯದಲ್ಲಿ ಆ ವ್ಯಕ್ತಿ 4,27,000 ರೂ. ಠೇವಣಿ ಇಟ್ಟಿದ್ದಾರೆ ಎಂದು ಹೇಳಿದ್ದಾರೆ.
ಈ ಮೂಲಕ ಪತ್ನಿಗೆ ಉಳಿದ ಮೊತ್ತವನ್ನು ವರ್ಗಾಯಿಸಲು ಹೈಕೋರ್ಟ್ ನಿರ್ದೇಶಿಸಿದೆ. ಉಳಿದ ಮೊತ್ತವನ್ನು ಕುಟುಂಬ ನ್ಯಾಯಾಲಯದಲ್ಲಿ ಠೇವಣಿ ಇಡುವಂತೆ ಪತಿಗೆ ಸೂಚಿಸಿದೆ. ಆ ಹಣವನ್ನು ಮಹಿಳೆಯ ಬ್ಯಾಂಕ್ ಖಾತೆಗೆ ವರ್ಗಾಯಿಸಲು ಆದೇಶಿಸಿದೆ.