ಪ್ರಯಾಗ್‌ರಾಜ್: ಪೋಷಕರು ತಮ್ಮ ಪುಟ್ಟ ಮಗುವನ್ನು ತಲೆಯ ಮೇಲೆ ಹೊತ್ತುಕೊಂಡು ನೀರು ತುಂಬಿದ ರಸ್ತೆ ದಾಟುತ್ತಿರುವ ಘಟನೆ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದಿದೆ. ಇದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral Video) ಆಗಿದೆ. ಬಾಹುಬಲಿ ಸಿನಿಮಾದಲ್ಲಿ ಶಿವಗಾಮಿ (ರಮ್ಯಾ ಕೃಷ್ಣಾ) ಮಗುವನ್ನು ಹೊತ್ತೊಯ್ದ ರೀತಿಯಲ್ಲೇ ಇಲ್ಲೂ ಮಗುವನ್ನು ಹೊತ್ತು ಸಾಗಲಾಗಿದೆ.
ಉತ್ತರ ಪ್ರದೇಶದ ಹಲವು ಭಾಗಗಳಲ್ಲಿ ಮಳೆ ಹೇಗೆ ಅನಾಹುತವನ್ನುಂಟುಮಾಡಿದೆ ಎಂಬುದನ್ನು ಈ ಘಟನೆ ತೋರಿಸುತ್ತದೆ. ರಾಜ್ಯದಲ್ಲಿ ಭಾರಿ ಮಳೆಯಿಂದಾಗಿ ಹಲವಾರು ಜಿಲ್ಲೆಗಳಲ್ಲಿ ತೀವ್ರ ಪ್ರವಾಹ ಉಂಟಾಗಿದೆ. ಗಂಗಾ ಮತ್ತು ಯಮುನಾ ನದಿಗಳ ನೀರಿನ ಮಟ್ಟ ತೀವ್ರವಾಗಿ ಏರಿರುವುದರಿಂದ ಪ್ರವಾಹ ಉಂಟಾಗಿದೆ. ಪರಿಣಾಮ ಜನರು ಜಲಾವೃತವಾದ ಪ್ರದೇಶಗಳನ್ನು ಬಿಟ್ಟು ಸುರಕ್ಷಿತ ಸ್ಥಳಕ್ಕೆ ತೆರಳಬೇಕಾಯಿತು.
ಶನಿವಾರ (ಆಗಸ್ಟ್ 2) ರಾತ್ರಿ, ಪ್ರಯಾಗ್‌ರಾಜ್‌ನ ಛೋಟಾ ಬಘರ ಪ್ರದೇಶದಲ್ಲಿ ಭಾರಿ ಮಳೆಯಿಂದ ಹಠಾತ್ ನೀರಿನ ಮಟ್ಟ ಏರಿಕೆಯಾಗಿದೆ. ಇದರಿಂದಾಗಿ ಮನೆಯೊಳಗೆ ನೀರು ನುಗ್ಗಿದ್ದು, ರಸ್ತೆಗಳಂತೂ ಸಂಪೂರ್ಣ ಜಲಾವೃತಗೊಂಡಿತ್ತು. ಸುರಕ್ಷತೆಗಾಗಿ ಅನೇಕ ಜನರು ತಮ್ಮ ವಸ್ತುಗಳನ್ನು ತ್ಯಜಿಸಿ ಎತ್ತರದ ಪ್ರದೇಶಕ್ಕೆ ಧಾವಿಸಿದರು.
ಇದೀಗ ಛೋಟಾ ಬಘರಾದಲ್ಲಿ ನಡೆದ ಹೃದಯಸ್ಪರ್ಶಿ ಘಟನೆಯೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಪ್ರವಾಹಕ್ಕೆ ಸಿಲುಕಿದ್ದ ನವಜಾತ ಶಿಶು ಮತ್ತು ಅದರ ತಾಯಿಯನ್ನು ರಕ್ಷಿಸಲು ಕುಟುಂಬವೊಂದು ಪ್ರಯತ್ನಿಸುತ್ತಿರುವುದನ್ನು ತೋರಿಸುವ ವಿಡಿಯೊ ಇದಾಗಿದೆ. ಆ ಸಮಯದಲ್ಲಿ ಯಾವುದೇ ಸಹಾಯ ಲಭ್ಯವಿಲ್ಲದ ಕಾರಣ, ತಂದೆಯು ಮಗುವನ್ನು ತನ್ನ ಕೈಗಳಲ್ಲಿ ಹಿಡಿದುಕೊಂಡು ಹೆಗಲ ಮೇಲೆ ಹೊತ್ತುಕೊಂಡು ಹೋಗುವುದನ್ನು ಕಾಣಬಹುದು. ಕುಟುಂಬದ ಇನ್ನೊಬ್ಬ ಸದಸ್ಯರು ತಾಯಿಯನ್ನು ಬೆನ್ನ ಮೇಲೆ ಹೊತ್ತುಕೊಂಡು ಹೋಗುವುದನ್ನು ನೋಡಬಹುದು. ಸೊಂಟದ ಆಳದವರೆಗಿದ್ದ ನೀರಿನಲ್ಲಿ ಅವರು ನಿಧಾನವಾಗಿ ಮತ್ತು ಎಚ್ಚರಿಕೆಯಿಂದ ಸಾಗಿದರು.
ವಿಡಿಯೊ ವೀಕ್ಷಿಸಿ:
Its very shameful to see this...#prayagraj pic.twitter.com/s6rwOX5iJW
— Priya Saroj (@PriyaSarojMP) August 3, 2025
ಪ್ರಯಾಗ್‌ರಾಜ್‌ನಲ್ಲಿ ಪ್ರವಾಹ ಪರಿಸ್ಥಿತಿ
ಪ್ರಯಾಗ್‌ರಾಜ್‌ನಲ್ಲಿ ಪ್ರವಾಹ ಪರಿಸ್ಥಿತಿ ತೀವ್ರವಾಗಿ ಮುಂದುವರೆದಿದೆ. ಶನಿವಾರ ಸಂಜೆಯ ಹೊತ್ತಿಗೆ, ನದಿಗಳ ನೀರಿನ ಮಟ್ಟವು 84.734 ಮೀಟರ್‌ಗಳನ್ನು ದಾಟಿ, ಅಪಾಯದ ಮಟ್ಟಕ್ಕಿಂತ ಹೆಚ್ಚಾಗಿದೆ. ಸಾವಿರಾರು ಮನೆಗಳು ನೀರಿನಲ್ಲಿ ಮುಳುಗಿವೆ. ಸುಮಾರು 3,000 ಜನರು ಸ್ಥಳಾಂತರಗೊಂಡಿದ್ದು, ಜಿಲ್ಲಾಡಳಿತ ಸ್ಥಾಪಿಸಿರುವ ಪರಿಹಾರ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ.
ಈ ಸುದ್ದಿಯನ್ನೂ ಓದಿ: Pahalgam Terror Attack: ಪಹಲ್ಗಾಮ್ ಉಗ್ರ ದಾಳಿಯ ಮತ್ತೊಂದು ವಿಡಿಯೊ ವೈರಲ್-ಏನಿದೆ ಅದ್ರಲ್ಲಿ?
ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳು ಮುಂದುವರೆದಿವೆ. ನಿವಾಸಿಗಳನ್ನು ಸ್ಥಳಾಂತರಿಸಲು ಮತ್ತು ತುರ್ತು ಸಹಾಯವನ್ನು ಒದಗಿಸಲು ಆಡಳಿತವು 12 ದೋಣಿಗಳು ಮತ್ತು ಹಲವಾರು NDRF (ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ) ತಂಡಗಳನ್ನು ನಿಯೋಜಿಸಿದೆ.
ವಿಡಿಯೊ ಇಲ್ಲಿದೆ:
Flooding in Prayagraj, Uttar Pradesh pic.twitter.com/CzjEHP3mFm
— Piyush Rai (@Benarasiyaa) August 3, 2025