ನವದೆಹಲಿ, ಮಾ. 9: ಇತ್ತೀಚೆಗೆ ಪ್ರತಿಯೊಬ್ಬ ತಂದೆ- ತಾಯಿಯೂ ಮಕ್ಕಳ ಶಿಕ್ಷಣದತ್ತ ಗಮನಹರಿಸುತ್ತಾರೆ. ಹೆಚ್ಚಿನ ಅಂಕ ಗಳಿಸಬೇಕೆಂಬ ಉದ್ದೇಶದಿಂದ ಕೂಡ ಪ್ರೋತ್ಸಾಹ ನೀಡುತ್ತಾರೆ. ಅದರಲ್ಲೂ 10ನೇ ತರಗತಿ ಪರೀಕ್ಷೆ ಎಂದಾಗ ಮಕ್ಕಳಿಗೆ ನಾನಾ ಭರವಸೆ ನೀಡಿ ಓದಲು ಹುರುಪು ತುಂಬುತ್ತಾರೆ. ಹಾಗೆಯೇ ಇಲ್ಲೊಂದು ಪೋಷಕರು ತಮ್ಮ ಮಗ ಪರೀಕ್ಷೆ ಮುಗಿಸಿ ಶಾಲೆಯಿಂದ ಬರುತ್ತಿದ್ದಂತೆ ದುಬಾರಿ ಬೆಲೆಯ ಎಸ್‌ಯುವಿಯೊಂದನ್ನು ಗಿಫ್ಟ್ ನೀಡಿದ್ದಾರೆ. ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ. ಜತೆಗೆ ಅಪ್ರಾಪ್ತನಿಗೆ ಜೀಪ್ ಗಿಫ್ಟ್ ಮಾಡಿದ್ದಕ್ಕೆ ಅನೇಕರು ಪೋಷಕರನ್ನು ಟೀಕಿಸಿದ್ದಾರೆ.
ಹೆಚ್ಚಿನ ಅಂಕವನ್ನು ಪಡೆದಾಗ ಪೋಷಕರು ಮಕ್ಕಳಿಗೆ ಗಿಫ್ಟ್ ನೀಡುವುದು ಟ್ರೆಂಡ್ ಎನಿಸಿಕೊಂಡಿದೆ. ಆದರೆ ಇಲ್ಲಿ ಮಗ ಪರೀಕ್ಷೆ ಮುಗಿಸಿ ಬಂದಾಗಲೇ ಲಕ್ಷಾಂತರ ರೂಪಾಯಿ 'ಮಹೀಂದ್ರಾ ಥಾರ್ ರಾಕ್ಸ್' ಎಸ್‌ಯುವಿ ಉಡುಗೊರೆಯಾಗಿ ನೀಡಿ ಮಗನನ್ನು ಅಚ್ಚರಿಗೊಳಿಸಿದ್ದಾರೆ.
ವೈರಲ್ ಪೋಸ್ಟ್ ಇಲ್ಲಿದೆ:
ಅರ್ನವ್ ಎಂಬ ಬಾಲಕ 10ನೇ ತರಗತಿಯ ಕೊನೆಯ ಬೋರ್ಡ್ ಪರೀಕ್ಷೆ ಬರೆದು ಶಾಲೆಯಿಂದ ಹೊರ ಬಂದಿದ್ದಾನೆ. ಮಗನನ್ನು ಬರಮಾಡಿಕೊಳ್ಳಲು ಪೋಷಕರು ಶಾಲೆಯ ಗೇಟ್ ಬಳಿ ನಿಂತಿದ್ದರು. ಬಳಿಕ ಮಗನನ್ನು ನೋಡಿ ಪರೀಕ್ಷೆಯ ಬಗ್ಗೆ ವಿಚಾರಿಸಿ ಪೋಷಕರು ತಬ್ಬಿಕೊಳ್ಳುತ್ತಾರೆ. ನಂತರ ತಾಯಿ ಬೀದಿಯ ಕಡೆಗೆ ಬೆರಳು ತೋರಿಸಿ "ಅದು ನಿನ್ನ ಕಾರು" ಎಂದು ಹೇಳಿದ್ದಾರೆ. ʼʼನಿನಗೆ ಸರ್‌ಪ್ರೈಸ್ ಗಿಫ್ಟ್ʼʼ ಎಂದು ಕಾರಿನ ಕೀ ಹಸ್ತಾಂತರಿಸಿದ್ದಾರೆ. ಇದನ್ನು ಕಂಡು ಆ ವಿದ್ಯಾರ್ಥಿ ಶಾಕ್‌ಗೆ ಒಳಗಾಗಿದ್ದಾನೆ.
ಬೆಳಗ್ಗೆ 6:30ಕ್ಕೆ ಆಫೀಸ್‌ಗೆ ಹಾಜರಾಗಬೇಕು ಎಂಬ ಆದೇಶಕ್ಕೆ ಜೆನ್ ಝೀ ಉದ್ಯೋಗಿಯ ಖಡಕ್ ರೆಸ್ಪಾನ್ಸ್
ವಿಡಿಯೊದಲ್ಲಿ ಬಾಲಕ ಎಸ್‌ಯುವಿ ಕಡೆಗೆ ನಡೆದುಕೊಂಡು ಹೋಗುವುದನ್ನು ಕಾಣಬಹುದು. ಕ್ಯಾಮರಾ ಅಲ್ಲಿಯೇ ನಿಂತ ಹೊಳೆಯುವ ಮಹೀಂದ್ರಾ ಥಾರ್ ರಾಕ್ಸ್‌ನ ನೋಟವನ್ನು ಸೆರೆ ಹಿಡಿದಿದೆ. ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಪೋಷಕರ ಈ ನಿರ್ಧಾರವನ್ನು ಟೀಕಿಸುತ್ತಿದ್ದಾರೆ. ಹಲವರು ಅಪ್ರಾಪ್ತ ವಯಸ್ಕನಿಗೆ ಇಂತಹ ವಾಹನವನ್ನು ಉಡುಗೊರೆಯಾಗಿ ನೀಡುವುದು ಸೂಕ್ತವೇ ಎಂದು ಪ್ರಶ್ನಿಸಿದ್ದಾರೆ. ನೆಟ್ಟಿಗರೊಬ್ಬರು ಇಂದು ಮಕ್ಕಳನ್ನು ಪೋಷಕರೇ ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.