ಬಾರ್ಸಿಲಿಯಾ: ಡಿಜಿಟಲ್ ಯುಗದಲ್ಲಿ ಸಾಮಾಜಿಕ ಮಾಧ್ಯಮಗಳು ಮನೋರಂಜನೆಯ ಕ್ಷೇತ್ರವಾಗಿ ಬೆಳೆಯುವ ಜತೆಗೆ ಅನೇಕರಿಗೆ ಆದಾಯ ಮೂಲವಾಗುತ್ತಿವೆ. ಹಲವು ವಿಚಾರದ ಬಗ್ಗೆ ವಿಡಿಯೊ ಅಪ್‌ಲೋಡ್ ಮಾಡುವ ಕಂಟೆಂಟ್ ಕ್ರಿಯೇಟರ್‌ಗಳು ಇದನ್ನೇ ಉದ್ಯೋಗವಾಗಿ ಪರಿಗಣಿ ಸಿದ್ದಾರೆ ಕೂಡ. 32 ವರ್ಷದ ಬ್ರೆಜಿಲಿಯನ್ ಇನ್‌ಫ್ಲ್ಯುಯೆನ್ಸರ್ ಮಹಿಳೆಯೊಬ್ಬರು ನಿದ್ರಿಸುವ ಮೂಲಕ ಸೋಶಿಯಲ್ ಮಿಡಿಯಾದಲ್ಲಿ ಲಕ್ಷಾಂತರ ರೂ. ಸಂಪಾದಿಸುತ್ತಿದ್ದಾರೆ ಎಂಬ ಸುದ್ದಿ ಸದ್ಯ ವೈರಲ್ (Viral News) ಆಗಿದೆ. ಕಂಟೆಂಟ್ ಕ್ರಿಯೇಟರ್ ಡೆಬೊರಾ ಪೀಕ್ಸೊಟೊ (Deborah Pixote) ರಾತ್ರಿಯಿಡೀ ತಾವು ನಿದ್ರಿಸುವ ವಿಡಿಯೊವನ್ನು ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದು ಅದಕ್ಕೆ ಸಾವಿರಾರು ಮಂದಿ ವೀಕ್ಷಕರು ಕೂಡ ಇದ್ದಾರೆ. ಈ ಮೂಲಕ ನಿದ್ರಿಸುವುದರಿಂದಲೂ ಹಣ ಸಂಪಾದನೆ ಮಾಡಲು ಸಾಧ್ಯ ಎಂಬುದನ್ನು ಈ ಮಹಿಳೆ ತೋರಿಸಿ ಕೊಟ್ಟಿದ್ದಾರೆ.
32 ವರ್ಷದ ಬ್ರೆಜಿಲಿಯನ್ ಕಂಟೆಂಟ್ ಕ್ರಿಯೇಟರ್ ಡೆಬೊರಾ ಪೀಕ್ಸೊಟೊ ತಮ್ಮ ವಿಶಿಷ್ಟ ಸ್ಟ್ರೀಮಿಂಗ್ ಮೂಲಕ ಸದ್ಯ ಹೆಚ್ಚು ಪ್ರಚಲಿತದಲ್ಲಿದ್ದಾರೆ. ಡೆಬೊರಾ ತಾನು ಮಲಗುವ ವಿಡಿಯೊವನ್ನು ಲೈವ್ ಆಗಿ ಅಪ್‌ಲೋಡ್ ಮಾಡಲಾಗುತ್ತಿದ್ದು, ಇದನ್ನು ನೋಡಲು ತಮ್ಮ ಅಭಿಮಾನಿಗಳು ಹಣ ಪಾವತಿಸುತ್ತಾರೆ ಎಂದು ಇತ್ತೀಚೆಗಷ್ಟೇ ಸೋಶಿಯಲ್ ಮಿಡಿಯಾದಲ್ಲಿ ಹೇಳಿಕೊಂಡಿದ್ದಾರೆ. ರಾತ್ರಿಯಿಡೀ ಡೆಬೊರಾ ನಿದ್ರಿಸುವುದರ ನೇರಪ್ರಸಾರ ವೀಕ್ಷಿಸಲು ಅವರ ಅಭಿಮಾನಿಗಳು 84 ಪೌಂಡ್‌ಗಳವರೆಗೆ (ಸುಮಾರು 9,500 ರೂ.) ಖರ್ಚು ಮಾಡಲು ಸಿದ್ಧರಿದ್ದಾರೆ ಎಂದು ಅವರು ಹೇಳಿದ್ದಾರೆ.
ಆರಂಭದಲ್ಲಿ ಇದೆಲ್ಲವೂ ಅವರಿಗೆ ವಿಚಿತ್ರವೆನಿಸಿತ್ತಂತೆ. ಆದರೆ ಕಾಲ ಕ್ರಮೇಣ ಪ್ರೇಕ್ಷಕರಿಗೆ ತಾನು ನಿದ್ರಿಸುವ ಕ್ರಮ ಇಷ್ಟವಾಗುತ್ತಿದೆ ಎಂದು ಅವರು ಅರಿತುಕೊಂಡರಂತೆ. ಇದನ್ನು ಮೊದಲು ಯಾವುದೇ ಹಣ ಪಾವತಿ ಇಲ್ಲದೆ ಅಪ್‌ಲೋಡ್ ಮಾಡಿದಾಗ ಅನೇಕ ಪುರುಷರು ಇದನ್ನು ಬಹಳ ಎಂಜಾಯ್ ಮಾಡಿದ್ದರಂತೆ. ಏನೂ ಮಾಡುವ ಅಗತ್ಯವಿಲ್ಲ, ಮೌನವಾಗಿ ನಿಮ್ಮ ನಿದ್ರೆ ನೋಡುವುದು ಮನಸ್ಸಿಗೆ ಖುಷಿ ಕೊಡುತ್ತದೆ ಎಂದು ಕಮೆಂಟ್ ಹಾಕಿದ್ದರು. ಹೀಗಾಗಿ ಅದನ್ನು ಬಿಸಿನೆಸ್ ಆಗಿ ಮಾಡುವ ನಿರ್ಧಾರಕ್ಕೆ ಡೊಬೊರಾ ಬಂದದು. ಹೀಗಾಗಿ ಇಂದು ಈ ಶೋ ಬಹಳ ಜನಪ್ರಿಯವಾಗಿದೆ. ಇದರಲ್ಲಿ ಸುಮಾರು 40 ಜನರು ಪ್ರತಿ ರಾತ್ರಿ ತಮ್ಮ ನಿದ್ರೆಯನ್ನು ನೇರಪ್ರಸಾರ ಮೂಲಕ ವೀಕ್ಷಿಸುತ್ತಾರೆ ಎಂದು ಅವರು ತಿಳಿಸಿದ್ದಾರೆ.
ಡೆಬೊರಾ ತನ್ನ ಕೋಣೆಯನ್ನು ಸಿಸಿ ಕ್ಯಾಮೆರಾ ಅಳವಡಿಸಿದ್ದು ಮಂದ ದೀಪಗಳು ಮಾತ್ರವೇ ಈ ಕೋಣೆಯಲ್ಲಿವೆ. ಯಾವುದೇ ಕ್ಯಾಮೆರಾ ಎಫೆಕ್ಟ್ ಇಲ್ಲ, ಯಾವುದೇ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಕೂಡ ಇಲ್ಲ. ಹಾಗಿದ್ದರೂ ಈ ವಿಡಿಯೋ ಜನರಿಗೆ ಇಷ್ಟವಾಗುತ್ತಿದೆಯಂತೆ. ಈಗ 40 ಚಂದಾದಾರರಿದ್ದು ಒಬ್ಬೊಬ್ಬರು 9,500 ಯನ್ನು ಪಾವತಿಸುತ್ತಿದ್ದಾರೆ. ಅಲ್ಲದೆ ಅವರ ಈ ವಿಡಿಯೊಕ್ಕೆ ವೀಕ್ಷಕರ ಸಂಖ್ಯೆ ಕೂಡ ನಿರಂತರವಾಗಿ ಹೆಚ್ಚುತ್ತಿದೆ ಎಂದು ಸ್ವತಃ ಡೆಬೊರಾ ಅವರೇ ತಿಳಿಸಿದ್ದಾರೆ.
ಗೌಪ್ಯತೆಗೆ ಸಮಸ್ಯೆಯಾಗುತ್ತಾ?
ಸ್ಟ್ರೀಮಿಂಗ್ ವ್ಯವಸ್ಥೆಯು ಡೆಬೊರಾ ಅವರ ನಿಯಂತ್ರಣದಲ್ಲಿದೆ. ಹೀಗಾಗಿ ಅವರ ಗೌಪ್ಯತೆಗೆ ಧಕ್ಕೆ ಯಾಗದ ರೀತಿಯಲ್ಲಿ ಇದನ್ನು ಪ್ರಸಾರ ಮಾಡಲಾಗುತ್ತಿದೆಯಂತೆ. ವೀಕ್ಷಕರು ತುಂಬಾ ನಿಷ್ಠಾವಂತರಾಗಿದ್ದು ಈ ವಿಡಿಯೋ ಇಷ್ಟ ಪಡುತ್ತಿದ್ದಾರೆ. ಬಹುತೇಕರಿಗೆ ವಿಭಿನ್ನ ವಿಷಯಗಳು ಬಹಳ ಬೇಗ ಇಷ್ಟವಾಗಲಿದೆ ಎಂದು ಅವರು ಹೇಳಿದ್ದಾರೆ.