ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ನಾರ್ವೆ ಪತ್ರಕರ್ತೆಯ ಪ್ರಶ್ನೆಗೆ ಉತ್ತರಿಸದೆ ತೆರಳಿದ ಪ್ರಧಾನಿ ಮೋದಿ; ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಚರ್ಚೆ

ನಾರ್ವೆ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಪತ್ರಕರ್ತೆಯೊಬ್ಬರ ಪ್ರಶ್ನೆಗೆ ಉತ್ತರಿಸದೆ ತೆರಳಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಐದು ರಾಷ್ಟ್ರಗಳ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರನ್ನು ನಾರ್ವೆಯಲ್ಲಿ ಪತ್ರಕರ್ತರೊಬ್ಬರು ಪ್ರಶ್ನೆ ಕೇಳಲು ಮುಂದಾದರು. ಆದರೆ ಪ್ರಧಾನಿ ಮೋದಿ ಇದಕ್ಕೆ ಉತ್ತರಿಸದೇ ಹೋಗಿದ್ದರಿಂದ ಅವರು ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಬರೆದು ಹಂಚಿಕೊಂಡಿದ್ದು, ತೀವ್ರ ವಾಗ್ವಾದಕ್ಕೆ ಕಾರಣವಾಯಿತು.

ಸಂಗ್ರಹ ಚಿತ್ರ

ನಾರ್ವೆ: ಐದು ರಾಷ್ಟ್ರಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಸೋಮವಾರ ನಾರ್ವೆಯಲ್ಲಿ ಪತ್ರಕರ್ತರೊಬ್ಬರ ( Norwegian journalist) ಪ್ರಶ್ನೆಗೆ ಉತ್ತರಿಸದೇ ಇರುವುದು ಸಾಮಾಜಿಕ ಮಾಧ್ಯಮಗಳಲ್ಲಿ (viral news) ತೀವ್ರ ಚರ್ಚೆಗೆ ಕಾರಣವಾಗಿದೆ. ನಾರ್ವೆಯ ಓಸ್ಲೊದಲ್ಲಿ ಆಯೋಜಿಸಿದ್ದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಿ ಮೋದಿಯವರು ಯಾವುದೇ ಪ್ರಶ್ನೆಗಳನ್ನು ಸ್ವೀಕರಿಸದೆ ತೆರಳಿದರು. ಇದನ್ನು ಖಂಡಿಸಿದ ನಾರ್ವೆಯ 'ಡಾಗ್ಸ್ ವಿಸೆನ್ ಪತ್ರಿಕೆಯ ಪತ್ರಕರ್ತೆ ಹೆಲ್ಲೆ ಲಿಂಗ್ ಅವರು ಈ ಕುರಿತಾಗಿ ಸಾಮಾಜಿಕ ಮಾಧ್ಯಮದಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ. ವಿಶ್ವದ ಅತ್ಯಂತ ಮುಕ್ತ ಪತ್ರಿಕಾ ಮಾಧ್ಯಮದ ಪ್ರಶ್ನೆಗಳನ್ನು ಪ್ರಧಾನಿ ಮೋದಿಯವರು ಏಕೆ ತೆಗೆದುಕೊಳ್ಳುವುದಿಲ್ಲ? ಎಂದು ಪ್ರಶ್ನಿಸಿದ್ದಾರೆ. ಇದು ಬಳಿಕ ತೀವ್ರವಾದ ಉದ್ವಿಗ್ನತೆಯನ್ನು ಉಂಟು ಮಾಡಿದೆ.

ನಾರ್ವೆಯ ರಾಜಧಾನಿ ಓಸ್ಲೋದಲ್ಲಿ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತೀಯ ರಾಯಭಾರಿ ಜೋನಾಸ್ ಗಹರ್ ಸ್ಟೋರ್ ಅವರ ಜಂಟಿ ಪತ್ರಿಕಾ ಹೇಳಿಕೆಯನ್ನು ಆಯೋಜಿಸಲಾಗಿತ್ತು. ಅವರಿಬ್ಬರ ಹೇಳಿಕೆ ಮುಗಿದ ಮೇಲೆ ಪ್ರಧಾನಿ ಮೋದಿ ಮತ್ತು ಜೋನಾಸ್ ಗಹರ್ ಸ್ಟೋರ್ ಅಲ್ಲಿಂದ ಎದ್ದು ಹೊರನಡೆಯಲು ಸಿದ್ದರಾದರು. ಆಗ ಪತ್ರಕರ್ತೆ ಹೆಲ್ಲೆ ಲಿಂಗ್ ಅವರು ಜೋರಾಗಿ ಪ್ರಧಾನಿ ಮೋದಿ, ನೀವು ವಿಶ್ವದ ಅತ್ಯಂತ ಮುಕ್ತ ಪತ್ರಿಕಾ ಮಾಧ್ಯಮದಿಂದ ಕೆಲವು ಪ್ರಶ್ನೆಗಳನ್ನು ಏಕೆ ಎದುರಿಸಬಾರದು ಎಂದು ಪ್ರಶ್ನಿಸಿದರು. ಆದರೆ ಅವರಿಬ್ಬರೂ ಕೇಳದಂತೆ ಅಲ್ಲಿಂದ ಹೊರಟರು. ಆಗ ಹೆಲ್ಲೆ ಲಿಂಗ್ ಅವರು ಲಿಫ್ಟ್ ವರೆಗೆ ಹಿಂಬಾಲಿಸಿದರು. ಆದರೂ ಅವರು ನಿಲ್ಲಲಿಲ್ಲ.

ಹೊರ್ಮುಜ್‌ ಜಲಸಂಧಿ ಮೇಲಿನ ಹಿಡಿತ ಮತ್ತಷ್ಟು ಬಿಗಿಗೊಳಿಸಿದ ಇರಾನ್‌; ಹೊಸ ಪ್ರಾಧಿಕಾರ ರಚನೆ: ಹಡಗುಗಳ ಸಂಚಾರಕ್ಕೆ ಇನ್ನು ಪೂರ್ವಾನುಮತಿ ಕಡ್ಡಾಯ

ಬಳಿಕ ಇದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಹೆಲ್ಲೆ ಲಿಂಗ್, ಭಾರತದ ಪ್ರಧಾನಿ ನರೇಂದ್ರ ಮೋದಿಯವರು ನನ್ನ ಪ್ರಶ್ನೆಯನ್ನು ಸ್ವೀಕರಿಸುವುದಿಲ್ಲ ಎಂದು ನಾನು ನಿರೀಕ್ಷಿಸಿರಲಿಲ್ಲ. ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ನಾರ್ವೆ ನಂಬರ್ ಒನ್ ಸ್ಥಾನವನ್ನು ಹೊಂದಿದೆ. ಭಾರತ 157ನೇ ಸ್ಥಾನದಲ್ಲಿದೆ. ನಾವು ಒಬ್ಬರಿಗೊಬ್ಬರು ಸಹಕರಿಸುವ ಶಕ್ತಿಗಳು. ಹೀಗಾಗಿ ಪ್ರಶ್ನಿಸುವುದು ನಮ್ಮ ಕೆಲಸ ಎಂದು ಹೇಳಿದ್ದಾರೆ.

ಇವರ ಈ ಪೋಸ್ಟ್ ಗೆ ಪ್ರತಿಕ್ರಿಯಿಸಿರುವ ನಾರ್ವೆಯಲ್ಲಿರುವ ಭಾರತೀಯ ರಾಯಭಾರ ಕಚೇರಿಯು, ಸಂಜೆ ಪತ್ರಿಕಾಗೋಷ್ಠಿ ಕರೆದು ಅವರನ್ನು ಭಾಗವಹಿಸಲು ಆಹ್ವಾನಿಸಿತ್ತು. ನಿಮ್ಮ ಪ್ರಶ್ನೆಗಳನ್ನು ಕೇಳಿ ಎಂದು ಹೇಳಿತ್ತು.

ಓಸ್ಲೋದಲ್ಲಿ ಸೋಮವಾರ ತಡರಾತ್ರಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಲಿಂಗ್ ಅವರು ನೇರವಾಗಿ ಭಾರತೀಯ ಅಧಿಕಾರಿಗಳಿಗೆ, ನಾವು ನಿಮ್ಮನ್ನು ಏಕೆ ನಂಬಬೇಕು? ಮತ್ತು ನಿಮ್ಮ ದೇಶದಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯನ್ನು ನಿಲ್ಲಿಸುವುದಾಗಿ ನೀವು ಭರವಸೆ ನೀಡಬಹುದೇ? ಪ್ರಧಾನಿ ಮೋದಿಯವರು ಭಾರತೀಯ ಪತ್ರಕರ್ತರಿಂದ ಪ್ರಶ್ನೆಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸುತ್ತಾರೆಯೇ ಎಂದು ಕೇಳಿದರು.

ಇದಕ್ಕೆ ದೀರ್ಘವಾಗಿ ಪ್ರತಿಕ್ರಿಯಿಸಿದ ವಿದೇಶಾಂಗ ವ್ಯವಹಾರಗಳ ಪಶ್ಚಿಮ ಕಾರ್ಯದರ್ಶಿ ಸಿಬಿ ಜಾರ್ಜ್, ದೇಶದ ಇತಿಹಾಸ, ಜಾಗತಿಕ ವಿಶ್ವಾಸಾರ್ಹತೆ, ಭಾರತದ ಕೊಡುಗೆಗಳ ಕುರಿತು ಹಲವು ಅಂಶಗಳನ್ನು ಉಲ್ಲೇಖಿಸಿದರು.

ನೆದರ್ಲ್ಯಾಂಡ್ಸ್ ಪ್ರವಾಸದ ಸಮಯದಲ್ಲಿ ಪ್ರಧಾನಿ ಮೋದಿ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆಗಳನ್ನು ಸ್ವೀಕರಿಸದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಜಾರ್ಜ್, ಅದಕ್ಕೆ ಇರುವ ಭಾರತದ ಸಾಂವಿಧಾನಿಕ ಚೌಕಟ್ಟನ್ನು ಉಲ್ಲೇಖಿಸಿದರು. ಅಲ್ಲದೇ ಹಕ್ಕುಗಳು ಉಲ್ಲಂಘನೆಯಾಗಿದ್ದರೆ ಅವರು ನ್ಯಾಯಾಲಯಕ್ಕೆ ಹೋಗುವ ಹಕ್ಕನ್ನು ಹೊಂದಿದ್ದಾರೆ ಎಂದು ತಿಳಿಸಿದರು.

ಭಾರತದ ಮಾಧ್ಯಮಗಳ ಕುರಿತಾಗಿ ಮಾತನಾಡಿದ ಅವರು ದೂರದರ್ಶನ ಪರಿಸರ ವ್ಯವಸ್ಥೆ, ದೆಹಲಿಯಲ್ಲಿ ಮಾತ್ರ ಇರುವ ವಿವಿಧ ಭಾಷೆಗಳ ಸುಮಾರು 200 ಟಿವಿ ಚಾನೆಲ್‌ಗಳ ಕುರಿತು ಮಾಹಿತಿ ನೀಡಿದರು. ಈ ನಡುವೆ ಲಿಂಗ್ ಅವರು ಮಧ್ಯಪ್ರವೇಶಿಸಿ ನಿರ್ದಿಷ್ಟ ಉತ್ತರಗಳಿಗಾಗಿ ಒತ್ತಡ ಹೇರಲು ಪ್ರಯತ್ನಿಸಿದರು. ಇದಕ್ಕೆ ಸಿಟ್ಟಾದ ಜಾರ್ಜ್, ನೀವು ಪ್ರಶ್ನೆಯನ್ನು ಕೇಳಿ. ಆದರೆ ನೀವು ಬಯಸುವ ಉತ್ತರವನ್ನು ನಿರೀಕ್ಷಿಸಬೇಡಿ ಎಂದರು.



ಈ ಬಗ್ಗೆಯೂ ಬಳಿಕ ಲಿಂಗ್ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಬರೆದು ನಾನು ಹೆಚ್ಚು ನಿರ್ದಿಷ್ಟವಾಗಿರಲು ಹಲವಾರು ಬಾರಿ ಪ್ರಶ್ನೆಗಳನ್ನು ಕೇಳಿದೆ ಎಂದು ಹೇಳಿದ್ದಾರೆ.

ಇದು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದ್ದು, ಲಿಂಗ್ ವಿರುದ್ಧ ಆನ್‌ಲೈನ್ ನಿಂದನೆ ಮತ್ತು ಆರೋಪಗಳು ಹೆಚ್ಚಾಗಿವೆ. ಇದಕ್ಕೆ ಪ್ರತಿಕ್ರಿಯಿಸಿರುವ ಲಿಂಗ್, ನಾನು ಯಾವುದೇ ರೀತಿಯ ವಿದೇಶಿ ಗೂಢಚಾರನಲ್ಲ. ಯಾವುದೇ ವಿದೇಶಿ ಸರ್ಕಾರದಿಂದ ಕಳುಹಿಸಲ್ಪಟ್ಟಿಲ್ಲ. ನನ್ನ ಕೆಲಸ ಪತ್ರಿಕೋದ್ಯಮ, ಮುಖ್ಯವಾಗಿ ಈಗ ನಾರ್ವೆಯಲ್ಲಿ ಎಂದು ಹೇಳಿದ್ದಾರೆ.

ಈ ವಿಚಾರವಾಗಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೂಡ ಬಿಜೆಪಿಯನ್ನು ಕೆಣಕಿದ್ದಾರೆ. ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಮರೆಮಾಡಲು ಏನೂ ಇಲ್ಲದಿದ್ದಾಗ, ಭಯಪಡಲು ಏನೂ ಇಲ್ಲ. ರಾಜಿ ಮಾಡಿಕೊಂಡ ಪ್ರಧಾನಿ ಭಯಭೀತರಾಗಿ ಕೆಲವು ಪ್ರಶ್ನೆಗಳಿಂದ ಓಡಿಹೋಗುವುದನ್ನು ನೋಡಿದಾಗ ಭಾರತದ ಇಮೇಜ್‌ಗೆ ಧಕ್ಕೆಯಾಗುವುದಿಲ್ಲವೇ ಎಂದು ಹೇಳಿದ್ದಾರೆ.

ಇಂಧನ ಬಳಕೆ ಕಡಿತಗೊಳಿಸುವ ಪ್ರಧಾನಿ ಕರೆಗೆ ಓಗೊಟ್ಟ ಶಾಸಕ; ಸೈಕಲ್‍ನಲ್ಲೇ ಕ್ಷೇತ್ರ ಸಂಚಾರ

ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು ಪ್ರಧಾನಿ ಮೋದಿಯವರನ್ನು ಸಮರ್ಥಿಸಿಕೊಂಡರು. ಆದರೆ ಕಾಂಗ್ರೆಸ್ ಪ್ರಧಾನಿ ಮೋದಿ ಅವರು ಪ್ರಧಾನಿಯಾಗಿ 12 ವರ್ಷಗಳ ಅವಧಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಒಮ್ಮೆಯೂ ಮಾತನಾಡಿಲ್ಲ ಎಂದು ಹೇಳಿದೆ.

ವಿದ್ಯಾ ಇರ್ವತ್ತೂರು

View all posts by this author