ನವದೆಹಲಿ,ಜು.14: ಭಾರತದ ರಾಷ್ಟ್ರ ಧ್ವಜ, ರಾಷ್ಟ್ರ ಪ್ರಾಣಿ- ಪಕ್ಷಿಯನ್ನು ಗೌರವಿಸುವುದು ಎಲ್ಲರ ಕರ್ತವ್ಯವಾಗಿದೆ. ಇದೀಗ ಉತ್ತರ ದೆಹಲಿಯ ನರೇಲಾದ ಉದ್ಯಾನವನದಲ್ಲಿ ನವಿಲೊಂದು ಮೃತ ಪಟ್ಟಿದ್ದು ದೆಹಲಿ ಪೊಲೀಸ್ ಸಿಬ್ಬಂದಿಗಳು ಭಾರತದ ರಾಷ್ಟ್ರೀಯ ಪಕ್ಷಿ ನವಿಲಿಗೆ ಗೌರವಯುತ ವಿದಾಯ ಸಲ್ಲಿಸಿದ ದೃಶ್ಯವೊಂದು (Viral News) ಕಂಡು ಬಂದಿದೆ. ಈ ಘಟನೆಯು ನರೇಲಾದ ಶಿವಾಜಿ ಮಾರ್ಕೆಟ್ ನಲ್ಲಿರುವ ಎಂಸಿಡಿಯ ಅಗ್ರಸೇನ್ ಪಾರ್ಕ್‌ನಲ್ಲಿ ನಡೆದಿದ್ದು ನವಿಲು ಸತ್ತು ಬಿದ್ದಿದ್ದು ಬೀದಿ ನಾಯಿಗಳು ಅದರ ಮೃತದೇಹವನ್ನು ಕಚ್ಚಿ ಗಾಯಗೊಳಿಸುತ್ತಿದ್ದವು. ಬಳಿಕ ಪೊಲೀಸರು ಹಾಗೂ ಗ್ರಾಮಸ್ಥರು ಸೇರಿ ಗೌರವಯುತವಾಗಿ ಅಂತ್ಯಕ್ರಿಯೆ ನಡೆಸಿದ್ದಾರೆ.
ಸ್ಥಳೀಯ ನಿವಾಸಿಗಳು ಇಬ್ಬರು ಪಾರ್ಕ್ ನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ರಾತ್ರಿ 10:30 ರ ಸುಮಾರಿಗೆ ಉದ್ಯಾನವನದಲ್ಲಿ ನಡೆದಾಡುತ್ತಿದ್ದಾಗ ಪೊದೆಗಳಲ್ಲಿ ಬೀದಿ ನಾಯಿಗಳು ಸುತ್ತು ವರಿದ್ದನ್ನು ಗಮನಿಸಿದ್ದಾರೆ. ಹತ್ತಿರ ಹೋಗಿ ನೋಡಿದಾಗ, ಪೊದೆಯಲ್ಲಿ ಕಾಲುಗಳು ಸಿಲುಕಿಕೊಂಡು ನವಿಲು ಸತ್ತು ಬಿದ್ದಿರುವುದು ಕಂಡುಬಂದಿದೆ. ನವಿಲು ಪೊದೆಯಲ್ಲಿ ಸಿಲುಕಿ ನಾಯಿಗಳ ದಾಳಿಗೆ ಬಲಿಯಾಗಿರಬಹುದು ಎಂದು ಶಂಕಿಸಲಾಗಿದೆ.
ವಿಡಿಯೋ ನೋಡಿ:
ಬಳಿಕ ನವಿಲನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ನರೇಲಾ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸುರೇಂದ್ರ ಮಲಿಕ್ ನೇತೃತ್ವದ ಪಿಸಿಆರ್ (PCR) ತಂಡ ಸ್ಥಳಕ್ಕೆ ಆಗಮಿಸಿದ್ದು ನವಿಲಿನ ಮೃತದೇಹವನ್ನು ನಾಯಿಗಳಿಂದ ರಕ್ಷಿಸಿ, ಅತ್ಯಂತ ಗೌರವಯುತ ವಾಗಿ ಭಾರತದ ತ್ರಿವರ್ಣ ಧ್ವಜವನ್ನು ಹೊದಿಸಿ ಅಂತ್ಯಕ್ರಿಯೆ ನಡೆಸಿದ್ದಾರೆ.
ಸ್ಥಳೀಯ ನಿವಾಸಿಗಳು ಮತ್ತು ಕಲ್ಯಾಣ ಸಂಘ ಸದಸ್ಯರ ಸಹಾಯದಿಂದ, ಉದ್ಯಾನವನದೊಳಗೆ ಒಂದು ಗುಂಡಿಯನ್ನು ಅಗೆದು, ಅಲ್ಲಿ ನವಿಲನ್ನು ಗೌರವಯುತವಾಗಿ ಸಮಾಧಿ ಮಾಡಲಾಯಿತು. ಇದೀಗ ನವಿಲಿಗೆ ಪೊಲೀಸರು ಮತ್ತು ಸ್ಥಳೀಯರು ಒಟ್ಟಾಗಿ ಅಂತಿಮ ಸಂಸ್ಕಾರ ನೆರವೇರಿಸಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಹೃದಯಸ್ಪರ್ಶಿ ದೃಶ್ಯ ಪ್ರಶಂಸೆಗೆ ಪಾತ್ರವಾಗಿದ್ದು, ವನ್ಯಜೀವಿಗಳ ಬಗ್ಗೆ ಕಾಳಜಿ ತೋರಿಸಿದ್ದಕ್ಕಾಗಿ ಮತ್ತು ಭಾರತದ ರಾಷ್ಟ್ರೀಯ ಪಕ್ಷಿಯಾದ ವನ್ಯಜೀವಿಗಳಿಗೆ ಗೌರವಯುತ ವಿದಾಯ ನೀಡಿದ್ದಕ್ಕಾಗಿ ದೆಹಲಿ ಪೊಲೀಸರನ್ನು ಅನೇಕರು ಶ್ಲಾಘಿಸಿದ್ದಾರೆ.