ಲಖನೌ, ಆ. 29: ಇತ್ತೀಚೆಗೆ ಪ್ರಚಾರದ ಗೀಳು ಹೆಚ್ಚಾಗಿದೆ. ವೈರಲ್ ಆಗುವ ಉದ್ದೇಶದಿಂದ ಕೆಲವರು ನಾನಾ ಸಾಹಸಕ್ಕೆ ಕೈ ಹಾಕುತ್ತಾರೆ. ಈ ಗೀಳು ಪೊಲೀಸ್ ಅಧಿಕಾರಿಗಳನ್ನೂ ಬಿಟ್ಟಿಲ್ಲ ಎನ್ನುವುದು ಅಚ್ಚರಿಯ ಸಂಗತಿ. ಪ್ರಚಾರದ ಉದ್ದೇಶದಿಂದ ವಾಹನ ಇದ್ದರೂ ಪೊಲೀಸ್ ಅಧಿಕಾರಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಹೊತ್ತುಕೊಂಡೇ ಆಸ್ಪತ್ರೆಯತ್ತ ಸಾಗಿದ್ದಾರೆ. ಹಿಂದೆ ಪೊಲೀಸ್ ವಾಹನ ಸಾಲಾಗಿ ಬರುತ್ತಿದ್ದರೂ ಅದನ್ನು ಬಳಸದೆ ಓಡಿಕೊಂಡೇ ಹೋಗಿದ್ದಾರೆ. ಈ ಘಟನೆ ಸೋಷಿಯಲ್ ಮೀಡಿಯಾದಲ್ಲಿ (Viral News) ಚರ್ಚೆಗೆ ಕಾರಣವಾಗಿದೆ.
ಥಾಲಿಯಾ ಗ್ರಾಮದ ಬಳಿಯ ಖೈರಿಘಾಟ್ ಪೊಲೀಸ್ ಠಾಣೆ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಪ್ರಜ್ಞೆ ತಪ್ಪಿ 55 ವರ್ಷದ ಗಾಯತ್ರಿ ದೇವಿ ಎಂಬ ಮಹಿಳೆ ಬಿದ್ದಿದ್ದರು. ಇದನ್ನು ದಿನನಿತ್ಯದ ಸಂಚಾರದಲ್ಲಿದ್ದ ಉಸ್ತುವಾರಿ ಇನ್ಸ್‌ಪೆಕ್ಟರ್ ಪ್ರದೀಪ್ ಕುಮಾರ್ ಸಿಂಗ್ ಗಮನಿಸಿದ್ದಾರೆ. ಬಳಿಕ ಕೈಯಲ್ಲಿ ಹೊತ್ತು ಆಸ್ಪತ್ರೆಗೆ ದಾಖಲಿಸಿದ್ದಾರೆ.
ವಿಡಿಯೊ ನೋಡಿ:
ಖೈರಿಘಾಟ್ ಠಾಣಾ ವ್ಯಾಪ್ತಿಯ ತಾಲಿಯಾ ಬಳಿ ಪೊಲೀಸ್ ಸಿಬ್ಬಂದಿ ಮಹಿಳೆಯನ್ನು ತೋಳಿನಲ್ಲೇ ಎತ್ತಿಕೊಂಡು ಸಮೀಪದ ವೈದ್ಯ ಶಿವಶರಣ್ ಸಿಂಗ್ ಅವರ ಬಳಿಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಅವರ ಹಿಂದೆಯೇ ಪೊಲೀಸ್ ವಾಹನ ಸಾಲಾಗಿ ಬರುತ್ತಿದ್ದರೂ ಅದನ್ನು ಬಳಸದೆ ನಡೆದುಕೊಂಡು ಹೋಗುತ್ತಿರುವುದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಪ್ರಚಾರ ಉದ್ದೇಶದಿಂದ ಇಂತಹ ಕೆಲಸ ಮಾಡುವುದು ತಪ್ಪು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಗದ್ದೆಯಲ್ಲಿದ್ದ ಆನೆಗೆ ಟಾರ್ಚ್ ತೋರಿಸಿ ಕೆರಳಿಸಿದ ಜನ; ನುಗ್ಗಿ ದಾಳಿ ಮಾಡಿದ ಒಂಟಿ ಸಲಗ
ಅಧಿಕಾರಿಗಳ ಈ ತುರ್ತು ಸ್ಪಂದನೆಯಿಂದ ಮಹಿಳೆಗೆ ಸೂಕ್ತ ಚಿಕಿತ್ಸೆ ದೊರೆತಿದೆ. ಆದರೆ ಇನ್ಸ್‌ಪೆಕ್ಟರ್ ತನ್ನ ಹಿಂದೆ ಪೊಲೀಸ್ ವ್ಯಾನ್ ಅನ್ನು ಏಕೆ ಬಳಸಲಿಲ್ಲ ಎಂದು ಅನೇಕರು ಪ್ರಶ್ನಿಸಿದ್ದಾರೆ. ಮಹಿಳೆಗೆ ತ್ವರಿತ ಸಹಾಯವನ್ನು ಪಡೆಯಲು ಸಹಾಯ ಮಾಡಬಹುದಿತ್ತು, ಆದರೆ ಪ್ರಚಾರದ ಉದ್ದೇಶದಿಂದ ಈ ಗಿಮಿಕ್ ಎಂದು ಕೆಲವರು ಟೀಕಿಸಿದ್ದಾರೆ.
ಅಪಘಾತದ ಕಾರಣವನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಮಹಿಳೆ ಹೇಗೆ ಗಾಯಗೊಂಡಿದ್ದಾರೆ ಹಾಗೂ ಈ ಘಟನೆಯಲ್ಲಿ ಯಾರು ಭಾಗಿಯಾಗಿದ್ದಾರೆಂದು ವಾಹನವನ್ನು ಗುರುತಿಸಲು ಪ್ರಯತ್ನಗಳು ನಡೆಯುತ್ತಿವೆ.