ಗಾಂಧಿನಗರ: ಇತ್ತೀಚಿನ ದಿನಗಳಲ್ಲಿ ಶಾಲಾ ಕಾಲೇಜುಗಳು ಶಿಕ್ಷಣ ನೀಡುವ ದೇಗುಲವಾಗುವ ಬದಲು ಜಗಳ ಗಲಾಟೆಯ ಬೀಡಾಗಿ ಬದಲಾಗಿವೆ. ಪ್ರತಿದಿನ ಸೋಶಿಯಲ್ ಮೀಡಿಯಾದಲ್ಲಿ ಒಂದಲ್ಲ ಒಂದು ಶಾಲೆಯ ಕರ್ಮಕಾಂಡಗಳು ಬಯಲಾಗುತ್ತಿರುತ್ತದೆ. ಇದೀಗ ಗುಜರಾತ್‍ನ ಶಾಲೆಯೊಂದರಲ್ಲಿ ಪ್ರಾಂಶುಪಾಲ, ಗಣಿತ ಮತ್ತು ವಿಜ್ಞಾನ ಶಿಕ್ಷಕರ ನಡುವಿನ ಜಗಳದ ವಿಡಿಯೊ ಹರಿದಾಡಿ ವೈರಲ್ (Viral Video) ಆಗಿದೆ. ಗುಜರಾತ್‌ನ ಭರೂಚ್‍ನ ಶಾಲೆಯೊಂದರ ಪ್ರಾಂಶುಪಾಲ ಶಿಕ್ಷಕನನ್ನು ಪದೇ ಪದೆ ಥಳಿಸುವುದು ವಿಡಿಯೊದಲ್ಲಿ ಸೆರೆಯಾಗಿದೆ. ಶಿಕ್ಷಣ ಅಧಿಕಾರಿಗಳು ಈ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ ಎನ್ನಲಾಗಿದೆ.
ಗುಜರಾತ್‍ನ ಭರೂಚ್ ಜಿಲ್ಲೆಯ ನವಯುಗ್ ಶಾಲೆಯಲ್ಲಿ ಈ ಘಟನೆ ನಡೆದಿದೆ. ಪ್ರಾಂಶುಪಾಲನ ಮೇಜಿನ ಮೇಲೆ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದಲ್ಲಿ ಈ ಹಲ್ಲೆಯ ದೃಶ್ಯ ಸೆರೆಯಾಗಿದೆ. ಇದರಲ್ಲಿ ಪ್ರಾಂಶುಪಾಲನು 25 ಸೆಕೆಂಡುಗಳಲ್ಲಿ ಶಿಕ್ಷಕನಿಗೆ 18 ಬಾರಿ ಕಪಾಳಮೋಕ್ಷ ಮಾಡಿರುವುದು ದಾಖಲಾಗಿದೆ.
ಗಣಿತ ಮತ್ತು ವಿಜ್ಞಾನ ಶಿಕ್ಷಕ ರಾಜೇಂದ್ರ ಪಾರ್ಮರ್ ಮೇಲೆ ಪ್ರಾಂಶುಪಾಲ ಹಿತೇಂದ್ರ ಠಾಕೂರ್ ಹಲ್ಲೆ ನಡೆಸಿದ್ದಾನೆ ಎಂದು ವರದಿಯಾಗಿದೆ. ವಿಡಿಯೊದಲ್ಲಿ ಪಾರ್ಮರ್ ಇತರ ಕೆಲವು ಶಿಕ್ಷಕರೊಂದಿಗೆ ಸ್ಟಾಫ್‍ರೂಂನಲ್ಲಿ ಕುಳಿತಿದಿದ್ದಾಗ, ಠಾಕೂರ್ ತನ್ನ ಆಸನದಿಂದ ಎದ್ದು ಬಂದು ಹೊಡೆದಿದ್ದಾನೆ. ಕೊನೆಗೆ ಆವರಣದಲ್ಲಿದ್ದ ಇತರ ಶಿಕ್ಷಕರು ಮಧ್ಯಪ್ರವೇಶಿಸಿ ವಾಗ್ವಾದವನ್ನು ಬಗೆಹರಿಸಿದರು. ಪಾರ್ಮರ್‌ನನ್ನು ಥಳಿಸಿದ ನಂತರ ಠಾಕೂರ್ ತನ್ನ ಆಸನಕ್ಕೆ ಹಿಂತಿರುಗಿದ್ದಾನೆ.
ವರದಿಯ ಪ್ರಕಾರ, ಪಾರ್ಮರ್ ತರಗತಿಯಲ್ಲಿ ಮೌಖಿಕ ನಿಂದನೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಈ ಘಟನೆ ಜಿಲ್ಲಾ ಶಿಕ್ಷಣಾಧಿಕಾರಿಗಳ ಗಮನಕ್ಕೆ ಬಂದಿದ್ದು, ಈ ಬಗ್ಗೆ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಂಡಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎನ್ನಲಾಗಿದೆ.
ಈ ಸುದ್ದಿಯನ್ನೂ ಓದಿ: Viral Video: ಶಾಲೆಯಲ್ಲಿ ಮೊಟ್ಟೆ ಕದ್ದು ಸಿಕ್ಕಿಬಿದ್ದ ಪ್ರಾಂಶುಪಾಲರು; ವಿಡಿಯೊ ವೈರಲ್
ಇತ್ತೀಚೆಗೆ ಬಿಹಾರದ ವೈಶಾಲಿ ಜಿಲ್ಲೆಯ ಸರ್ಕಾರಿ ಶಾಲೆಯ ಪ್ರಾಂಶುಪಾಲ ಮಕ್ಕಳ ಮಧ್ಯಾಹ್ನದ ಊಟಕ್ಕೆ ಮೀಸಲಾದ ಮೊಟ್ಟೆಗಳನ್ನು ಕದಿಯುವಾಗ ಕ್ಯಾಮೆರಾದಲ್ಲಿ ಸೆರೆಯಾಗಿದ್ದಾನೆ. ಪ್ರಾಂಶುಪಾಲ ಮೊಟ್ಟೆ ಕದಿಯುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ನಂತರ, ರಾಜ್ಯ ಶಿಕ್ಷಣ ಇಲಾಖೆ ಈ ಬಗ್ಗೆ ತನಿಖೆ ನಡೆಸಿದೆ. ಈ ಘಟನೆಯು ವೈಶಾಲಿಯ ಲಾಲ್‌ಗಂಜ್ ಬ್ಲಾಕ್‍ನ ರಿಖರ್ ಗ್ರಾಮದ ಮಾಧ್ಯಮಿಕ ಶಾಲೆಯಲ್ಲಿ ನಡೆದಿರುವುದಾಗಿ ತಿಳಿದುಬಂದಿದೆ.
ನಂತರ ಶಿಕ್ಷಣ ಇಲಾಖೆಯು ಶಾಲೆಯ ಆರೋಪಿ ಪ್ರಾಂಶುಪಾಲ ಸುರೇಶ್ ಸಹಾನಿ ಅವರಿಗೆ ನೋಟಿಸ್ ನೀಡಿ, ಸಹಾನಿ ಶಿಕ್ಷಣ ಇಲಾಖೆಯ ಇಮೇಜ್ ಅನ್ನು ಹಾಳು ಮಾಡಿದ್ದಾರೆ ಎಂದು ಆರೋಪಿಸಿ ಕಳ್ಳತನಕ್ಕಾಗಿ ಎಫ್ಐಆರ್ ದಾಖಲಿಸಲು ನಿರ್ಧರಿಸಲಾಗಿದೆ..