ಪುಣೆ,ಜು.9: "ವರ್ಕ್ ಫ್ರಮ್ ಹೋಮ್" ಅವಕಾಶ ಕೇಳಿದ ಉದ್ಯೋಗಿಯೊಬ್ಬರಿಗೆ ಕಂಪನಿಯ ಮ್ಯಾನೇಜರ್‌ವೊಬ್ಬರು ನಿರಾಕರಣೆ ಮಾಡಿದ ಘಟನೆ ನಡೆದಿದೆ. ಭಾರೀ ಮಳೆಯ ಕಾರಣದಿಂದ ಪುಣಿಯ ಹಲವು ಸ್ಥಳಗಳಲ್ಲಿ ಜಲವೃತಗೊಂಡು ರೋಡ್ ಬ್ಲಾಕ್ ಆಗಿತ್ತು. ಹೀಗಾಗಿ ಕಂಪನಿಯೂ ಸುರಕ್ಷತೆಗೆ ಆಧ್ಯತೆ ನೀಡಿ ಮನೆಯಲ್ಲಿಯೇ ಕೆಲಸ ಮಾಡಲು ಅವಕಾಶ ನೀಡಬಹುದು ಎಂದು ಉದ್ಯೋಗಿಯೊಬ್ಬರು ಕೇಳಿದ್ದರು. ಆದರೆ ಮ್ಯಾನೇಜರ್ ಈ ವಿನಂತಿಯನ್ನು ತಿರಸ್ಕರಿಸಿ ಆಫೀಸಿಗೆ ಬರುವಂತೆ ಒತ್ತಾಯಿಸಿರುವ ಘಟನೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗುತ್ತಿದೆ.
ಭಾರೀ ಮಳೆಯಿಂದಾಗಿ ಪುಣೆಯಲ್ಲಿ ರಸ್ತೆಗಳು ಜಲವೃತಗೊಂಡಿತ್ತು. ಹೀಗಾಗಿ ಪ್ರಯಾಣ ಅಪಾಯಕಾರಿಯೆಂದು ಉದ್ಯೋಗಿ ಮನೆಯಿಂದಲೇ ಕೆಲಸ ಮಾಡುವ ಅವಕಾಶ ಕೇಳಿದ್ದರು. ಆದರೆ ರಸ್ತೆ ಮುಚ್ಚಿದ್ದರೂ ಸಹ, ಮನೆಯಿಂದ ಕೆಲಸ ಮಾಡಲು ಮ್ಯಾನೇಜರ್ ನಿರಾಕರಿಸಿದ್ದಾರೆ. ಈ ಘಟನೆಯನ್ನು ನೌಕರನ ಸ್ನೇಹಿತ ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾರೆ.
ಭಾರೀ ಮಳೆ ಮತ್ತು ರಸ್ತೆ ಬ್ಲಾಕ್ ಇರುವುದರಿಂದ ಕೆಲಸಕ್ಕೆ ಬರಲು ಸಾಧ್ಯವಾಗುವುದಿಲ್ಲ ಎಂದು ಉದ್ಯೋಗಿ ತನ್ನ ವ್ಯವಸ್ಥಾಪಕರಿಗೆ ತಿಳಿಸಿದ್ದಾರೆ. ಇದಕ್ಕೆ ಉತ್ತರಿಸಿದ ಮ್ಯಾನೇಜರ್ ಸಾರ್ವಜನಿಕ ಸಾರಿಗೆಯನ್ನು ಬಳಸಿ ಬನ್ನಿ ಎಂದಿದ್ದಾರೆ. ಇದಕ್ಕೆ ಉದ್ಯೋಗಿ ತನಗೆ ಮನೆಯಿಂದಲೇ ಕೆಲಸ ಮಾಡಲು ಅನುಮತಿ ನೀಡುವಂತೆ ಕೇಳಿಕೊಂಡಾಗ, ಮ್ಯಾನೇಜರ್ ಇದಕ್ಕೆ ಸಾಧ್ಯವೆ ಇಲ್ಲ ಎಂದು ನಿರಾಕರಿಸಿದ್ದಾರೆ.
ನಾನು ಇದನ್ನು ಅನುಮೋದಿಸಲು ಸಾಧ್ಯವಿಲ್ಲ, ನಾವೆಲ್ಲರೂ ಕೆಲಸಕ್ಕೆ ಬಂದಿದ್ದೇವೆ. ಕೆಲವರು ಕೆಲಸಕ್ಕೆ ಸ್ಥಳೀಯ ರೈಲಿನಲ್ಲಿ ಪ್ರಯಾಣಿಸಿದ್ದಾರೆ. ನೀವು ರಿಕ್ಷಾ ಅಥವಾ ಉಬರ್ ಮಾಡಿ ಕೊಂಡಾದರೂ ಆಫೀಸಿಗೆ ತಲುಪಿ ಎಂದು ಸಂದೇಶ ಕಳುಹಿಸಿದ್ದಾರೆ. ಈ ಸ್ಕ್ರೀನ್‌ಶಾಟ್‌ಗಳು ಶೀಘ್ರದಲ್ಲೇ ರೆಡ್ಡಿಟ್‌ನಲ್ಲಿ ಚರ್ಚೆಯನ್ನು ಹುಟ್ಟುಹಾಕಿದವು, ಅನೇಕ ಬಳಕೆದಾರರು ವ್ಯವಸ್ಥಾಪಕರ ಪ್ರತಿಕ್ರಿಯೆಯನ್ನು ಟೀಕಿಸಿದ್ದಾರೆ. ಬಳಕೆದಾರರೊಬ್ಬರು WFH ಆಯ್ಕೆ ನೀಡಲು ಏನು ತೊಂದರೆ? ಕೆಲವು ಮ್ಯಾನೇಜ್‌ಮೆಂಟ್‌ಗಳಿಗೆ ಉದ್ಯೋಗಿಗಳನ್ನು ಕಣ್ಣೇದುರೆ ದುಡಿಸಿಕೊಳ್ಳುವ ಹಠ ಏಕೆ ಇರುತ್ತದೆಯೋ ಅರ್ಥವಾಗಲ್ಲ ಎಂದು ಟೀಕಿಸಿದ್ದಾರೆ.