ಗಾಂಧಿನಗರ, ಸೆ. 1: ರೈಲ್ವೆ ನಿಲ್ದಾಣಗಳಲ್ಲಿ ತಯಾರಾಗುವ ಆಹಾರ ಪದಾರ್ಥಗಳ ಸ್ವಚ್ಛತೆ ಬಗ್ಗೆ ಪ್ರಶ್ನಿಸುವಂತಹ ಅನೇಕ ಘಟನೆಗಳು ನಡೆದಿವೆ. ಇದಕ್ಕೆ ಸಾಕ್ಷಿ ಎನ್ನುವಂತೆ ಸೂರತ್ ರೈಲ್ವೆ ನಿಲ್ದಾಣದ ಫುಡ್ ಸ್ಟಾಲ್‌ನಲ್ಲಿ ಇಲಿಯೊಂದು ಪಫ್ ತಿನ್ನುತ್ತಿರುವ ವಿಡಿಯೊ ವೈರಲ್ (Viral News) ಆಗಿದೆ. ಈ ದೃಶ್ಯವು ಆಹಾರ ಮಳಿಗೆಗಳಲ್ಲಿನ ನೈರ್ಮಲ್ಯದ ಬಗ್ಗೆ ಕಳವಳ ಹುಟ್ಟುಹಾಕಿದೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ರೈಲ್ವೆ ಆಡಳಿತ ಮಂಡಳಿ ತಕ್ಷಣವೇ ಕ್ರಮಕ್ಕೆ ಮುಂದಾಗಿದೆ.
ಇತ್ತೀಚೆಗೆ ರೈಲ್ವೆ ನಿಲ್ದಾಣದಲ್ಲಿ ಕಳಪೆ ಆಹಾರ ನೀಡಿರುವ ಬಗ್ಗೆ ಅನೇಕ ದೂರು ಕೇಳಿ ಬರುತ್ತಿವೆ. ನಿಯಮ ಉಲ್ಲಂಘಿಸಿ ಗ್ರಾಹಕರ ಆರೋಗ್ಯದ ಜತೆ ಚೆಲ್ಲಾಟವಾಡುತ್ತಿದ್ದು, ನಿರ್ವಾಹಕರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲು ನೆಟ್ಟಿಗರು ಆಗ್ರಹಿಸಿದ್ದಾರೆ. ಇದೀಗ ಚಹಾ ಮಾರಾಟ ಮಾಡುವ ಅಂಗಡಿಯೊಂದರಲ್ಲಿ ಪ್ರಯಾಣಿಕರಿಗೆ ಮಾರಾಟಕ್ಕಿಟ್ಟಿದ್ದ ಪಫ್ ಅನ್ನು ಇಲಿಯೊಂದು ತಿನ್ನುತ್ತಿರುವುದು ವಿಡಿಯೊದಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ.
ವಿಡಿಯೊ ನೋಡಿ:
ಇತ್ತೀಚೆಗಷ್ಟೇ ಪಶ್ಚಿಮ ರೈಲ್ವೆ ಸೂರತ್ ಮತ್ತು ಉಧ್ನಾ ರೈಲು ನಿಲ್ದಾಣಗಳದ ಆಹಾರ ಮಳಿಗೆಗಳಲ್ಲಿ ವಿಶೇಷ ಕೀಟನಾಶಕ ಸಿಂಪಡಣೆ ಮತ್ತು 'ಡೀಪ್ ಕ್ಲೀನಿಂಗ್' ಅಭಿಯಾನವನ್ನು ನಡೆಸಿರುವುದಾಗಿ ಘೋಷಿಸಿತ್ತು. ಸ್ವಚ್ಛತೆ ನಡೆದ ಕೆಲವೇ ದಿನದಲ್ಲಿ ಈ ಘಟನೆ ನಡೆದಿದೆ. ಆಗಸ್ಟ್ 29ರಂದು ಮುಂಜಾನೆ ರೈಲ್ವೆ ನಿಲ್ದಾಣದಲ್ಲಿದ್ದ ಪ್ರಯಾಣಿಕರೊಬ್ಬರು ಈ ದೃಶ್ಯವನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿದ್ದಾರೆ.
ಸ್ಕೂಟರ್ ಸವಾರರನ್ನು ಉಳಿಸಲು ಹೋಗಿ ಬಸ್ ಪಲ್ಟಿ
ಗಾಜಿನ ಕೌಂಟರ್ ಒಳಗೆ ಇಲಿಯು ಪ್ರಯಾಣಿಕರಿಗಾಗಿ ತಯಾರಿಸಲಾದ ಪಫ್ ತಿನ್ನುವುದನ್ನು ವಿಡಿಯೊ ಬಹಿರಂಗಪಡಿಸಿದೆ. ಕಣ್ಣೆದುರೇ ಇಲಿ ಆಹಾರ ತಿನ್ನುತ್ತಿರುವ ದೃಶ್ಯ ಕಂಡು ಬಂದಿರುವುದರಿಂದ ರೈಲ್ವೆ ಇಲಾಖೆಯ ಸ್ವಚ್ಛತಾ ಜಾಗೃತಿಯ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಪಶ್ಚಿಮ ರೈಲ್ವೆಯ ಅಧಿಕಾರಿಗಳು ಈ ಆಹಾರ ಮಳಿಗೆಯನ್ನು ತಕ್ಷಣದಿಂದಲೇ ಬಂದ್ ಮಾಡಿದ್ದಾರೆ. ಅಲ್ಲದೆ, ಮಳಿಗೆಯ ಪರವಾನಗಿಯನ್ನು ಶಾಶ್ವತವಾಗಿ ರದ್ದುಗೊಳಿಸಲು ಕ್ರಮ ಕೈಗೊಂಡಿದ್ದಾರೆ.