ಗಾಂಧಿನಗರ, ಸೆ. 23: ಇತ್ತೀಚಿನ ದಿನಗಳಲ್ಲಿ ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಆಹಾರ ಸವಿಯುವ ಮುನ್ನ ನಮ್ಮ ಆರೋಗ್ಯದ ಸುರಕ್ಷತೆ ಬಗ್ಗೆ ಯೋಚಿಸುವಂತೆ ಮಾಡಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಗುಜರಾತ್‌ನ ರಾಜ್‌ಕೋಟ್ ರೆಸ್ಟೋರೆಂಟ್ ಒಂದರಲ್ಲಿ ಗ್ರಾಹಕರೊಬ್ಬರು ರೆಕಾರ್ಡ್ ಮಾಡಿದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ (Viral News) ಆಗಿದೆ. ಮೆಕ್‌ಡೊನಾಲ್ಡ್ಸ್ ಔಟ್ ಲೆಟ್ ಮೇಜಿನ ಮೇಲೆ ಇಲಿಗಳು ಓಡಾಡುತ್ತಿರುವುದು ಕಂಡುಬಂದಿದ್ದು, ಈ ಘಟನೆ ಬೆನ್ನಲ್ಲೇ ಪಾಲಿಕೆ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರಾಜ್‌ಕೋಟ್‌ನ ಮೆಕ್‌ಡೊನಾಲ್ಡ್ಸ್ ಔಟ್‌ಲೆಟ್‌ನೊಳಗೆ ಎರಡು ಇಲಿಗಳು ಟೇಬಲ್‌ಗಳು ಮತ್ತು ಕುರ್ಚಿಗಳ ಮೇಲೆ ಓಡುತ್ತಿರುವುದನ್ನು ತೋರಿಸುವ ದೃಶ್ಯ ಗ್ರಾಹಕರಲ್ಲಿ ಕಳವಳವನ್ನು ಹುಟ್ಟುಹಾಕಿದೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಗ್ರಾಹಕರ ಸುರಕ್ಷತೆ ಬಗ್ಗೆ ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ.
ವಿಡಿಯೊ ನೋಡಿ:
ಈ ವಿಚಾರ ತಿಳಿಯುತ್ತಿದ್ದಂತೆ ರಾಜ್‌ಕೋಟ್ ಮಹಾನಗರ ಪಾಲಿಕೆಯ ಆಹಾರ ವಿಭಾಗದ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲಿಸಿದ್ದಾರೆ. ಮೆಕ್‌ಡೊನಾಲ್ಡ್ಸ್‌ನಲ್ಲಿ ಪಾರ್ಟಿಗಾಗಿ ಪ್ರತ್ಯೇಕ ವಿಭಾಗಗಳಿವೆ. ದಿನನಿತ್ಯ ಸಾವಿರಾರು ಗ್ರಾಹಕರು ಇಲ್ಲಿಗೆ ಭೇಟಿ ನೀಡುತ್ತಿದ್ದು ವಿಡಿಯೊವನ್ನು ಪರಿಶೀಲಿಸಿದಾಗ ಇಲಿಗಳು ಪಾರ್ಟಿ ಸೌಲಭ್ಯವಿದ್ದ ಪ್ರದೇಶದಲ್ಲಿ ಓಡಾಡುತ್ತಿರುವುದು ಕಂಡು ಬಂದಿದೆ.
ಮಧ್ಯ ರಸ್ತೆಯಲ್ಲೇ ಭರ್ಜರಿ ಭೋಜನ; ರಾಜಸ್ಥಾನ ಎಕ್ಸ್‌ಪ್ರೆಸ್‌ವೇಯಲ್ಲೇ ಪಾರ್ಟಿ ಮಾಡಿದ ಕುಟುಂಬ
ರೆಸ್ಟೋರೆಂಟ್‌ನಲ್ಲಿ ಯಾವುದೇ ನೈರ್ಮಲ್ಯ ಲೋಪ ಕಂಡುಬಂದಿಲ್ಲವಾದರೂ ಕೀಟ ಹಾಗೂ ಕ್ರಿಮಿನಾಶಕ ನಿಯಂತ್ರಣ ವಿಚಾರವಾಗಿ ಲೋಪವೆಸಗಿದ್ದಕ್ಕಾಗಿ 3,000 ರೂಪಾಯಿ ದಂಡ ವಿಧಿಸಲಾಗಿದೆ. ತಪಾಸಣೆಯ ಭಾಗವಾಗಿ, ಅಧಿಕಾರಿಗಳು ಸಂಸ್ಥೆಯಿಂದ ಟೋನ್ಡ್ ಹಾಲು ಮತ್ತು ಸ್ಟ್ರಾಬೆರಿ ಹಣ್ಣಿನ ಕ್ರಷ್‌ನ ಮಾದರಿಗಳನ್ನು ಸಂಗ್ರಹಿಸಿದ್ದಾರೆ. ಇದೀಗ ನೈರ್ಮಲ್ಯ, ಆಹಾರ ಸಂಗ್ರಹಣೆ ಹಾಗೂ ಪರವಾನಗಿ ಲೋಪಗಳ ಹಿನ್ನೆಲೆಯಲ್ಲಿ 18 ಸಂಸ್ಥೆಗಳಿಗೆ ನೋಟಿಸ್ ನೀಡಲಾಗಿದೆ.