ಮುಂಬೈ, ಜು. 8: ಮಹಾರಾಷ್ಟ್ರದಲ್ಲಿ ಭಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿರುವ ನಡುವೆಯೇ ಭಿವಂಡಿ ನಗರದ ಯುವಕನೊಬ್ಬ ಸ್ಪೈಡರ್‌ಮ್ಯಾನ್ (Spider-Man) ವೇಷ ಧರಿಸಿ ರಸ್ತೆಗೆ ಇಳಿದು ಜನರಿಗೆ ನೆರವಾದ ಘಟನೆ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ಮಳೆಯಿಂದ ರಸ್ತೆ ಸಂಪೂರ್ಣ ಜಲಾವೃತವಾಗಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದ್ದ ಸಂದರ್ಭದಲ್ಲಿ, ಯಾವುದೇ ಅಧಿಕಾರಿಗಳ ನಿರೀಕ್ಷೆಯಲ್ಲಿರದೆ ಆತ ಸ್ವತಃ ಟ್ರಾಫಿಕ್ ನಿಯಂತ್ರಿಸಿ, ರಸ್ತೆಯಲ್ಲಿದ್ದ ನೀರನ್ನು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿಕೊಂಡಿರುವುದು ವಿಡಿಯೊದಲ್ಲಿ ಕಂಡು ಬಂದಿದೆ.
ಶಾದಾಬ್ ಎಂಬ ಸ್ಥಳೀಯ ಯುವಕ, ನಗರ ಪಾಲಿಕೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸದಿರುವುದನ್ನು ಗಮನಿಸಿ, ಸೂಪರ್ ಹೀರೋ ಸ್ಪೈಡರ್‌ಮ್ಯಾನ್‌ನ ವೇಷ ಧರಿಸಿ ಜನರ ನೆರವಿಗೆ ಧಾವಿಸಿದ್ದಾನೆ. ರಸ್ತೆ ಮಧ್ಯೆ ನಿಂತು ವಾಹನಗಳನ್ನು ಸುರಕ್ಷಿತವಾಗಿ ಸಾಗುವಂತೆ ಮಾರ್ಗದರ್ಶನ ನೀಡುವುದರ ಜತೆಗೆ, ನೀರು ಸರಾಗವಾಗಿ ಹರಿದುಹೋಗುವಂತೆ ಕಾಲುವೆಗಳ ಬಳಿ ನಿಂತಿದ್ದ ಕಸ ಹಾಗೂ ತಡೆಗಳನ್ನು ತೆರವುಗೊಳಿಸಲು ಪ್ರಯತ್ನಿಸಿದ್ದಾನೆ.
ವೈರಲ್ ವಿಡಿಯೊ ಇಲ್ಲಿದೆ:
ಶಾದಾಬ್‌ನ ಈ ಕಾರ್ಯವನ್ನು ಸುದ್ದಿ ಸಂಸ್ಥೆ ಎಎನ್‌ಐ (ANI) ವಿಡಿಯೊ ಮೂಲಕ ಹಂಚಿಕೊಂಡಿದ್ದು, ಕ್ಷಣಾರ್ಧದಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೊದಲ್ಲಿ ಆತ ವಾಹನ ಸವಾರರಿಗೆ ದಾರಿ ತೋರಿಸುವುದು, ಟ್ರಾಫಿಕ್ ಸುಗಮಗೊಳಿಸುವುದು, ಸಾರ್ವಜನಿಕರಿಗೆ ಧೈರ್ಯ ತುಂಬುವುದು, ಕೆಲವರೊಂದಿಗೆ ಕೈಕುಲುಕುವುದು ಹಾಗೂ ಮಕ್ಕಳಿಗೆ ಹೈ-ಫೈವ್ ನೀಡುವ ದೃಶ್ಯಗಳು ಗಮನ ಸೆಳೆದಿವೆ.
'ಸ್ಪೈಡರ್‌ಮ್ಯಾನ್‌ನಿಂದಲೇ ಸ್ಫೂರ್ತಿ'
ಎಎನ್‌ಐಗೆ ಪ್ರತಿಕ್ರಿಯಿಸಿದ ಶಾದಾಬ್, "ರಸ್ತೆಯಲ್ಲಿ ನೀರು ನಿಂತಿದ್ದರೂ ಅದನ್ನು ತೆರವುಗೊಳಿಸಲು ನಗರಪಾಲಿಕೆ ಸಿಬ್ಬಂದಿ ಬಂದಿರಲಿಲ್ಲ. ಸಿನಿಮಾಗಳಲ್ಲಿ ಸ್ಪೈಡರ್‌ಮ್ಯಾನ್ ಜನರನ್ನು ರಕ್ಷಿಸುವುದನ್ನು ನೋಡಿ ನನಗೆ ಸ್ಫೂರ್ತಿ ಸಿಕ್ಕಿತು. ಅದೇ ರೀತಿ ನಿಜ ಜೀವನದಲ್ಲೂ ಜನರಿಗೆ ಸಹಾಯ ಮಾಡಬೇಕೆಂದು ಈ ವೇಷ ಧರಿಸಿ ರಸ್ತೆಗೆ ಇಳಿದೆ" ಎಂದು ಹೇಳಿದ್ದಾರೆ.
ನೆರೆಮನೆಯ ಯುವಕನಿಂದನೇ ಕಿರುಕುಳ; ವಿಡಿಯೊ ಮಾಡಿ ಕಣ್ಣೀರು ಹಾಕಿದ ಅಪ್ರಾಪ್ತ ಬಾಲಕಿ
ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ
ಶಾದಾಬ್‌ನ ವಿಡಿಯೊ ವೈರಲ್ ಆಗುತ್ತಿದ್ದಂತೆ ಸಾವಿರಾರು ಮಂದಿ ಆತನ ಕಾರ್ಯವನ್ನು ಶ್ಲಾಘಿಸಿದ್ದಾರೆ. "ಇವರೇ ನಿಜವಾದ ಸೂಪರ್ ಹೀರೋ", "ಇದು ಭಾರತದ ಸ್ಪೈಡರ್‌ಮ್ಯಾನ್", "ಸ್ವಾರ್ಥದ ಜಗತ್ತಿನಲ್ಲಿ ಇಂತಹ ನಿಸ್ವಾರ್ಥ ಸೇವೆ ಅಪರೂಪ" ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಕೆಲವರು ಮುಂಬರುವ 'Spider-Man: Brand New Day' ಸಿನಿಮಾವನ್ನೂ ಉಲ್ಲೇಖಿಸಿ ಹಾಸ್ಯ ಪ್ರತಿಕ್ರಿಯೆಗಳನ್ನು ಹಂಚಿಕೊಂಡಿದ್ದಾರೆ.
ಮಹಾರಾಷ್ಟ್ರದಲ್ಲಿ ಮುಂದುವರಿದ ಮಳೆ ಅಬ್ಬರ
ಜುಲೈ 1ರಿಂದ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ವಿವಿಧ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಇದುವರೆಗೆ 10ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಪರಿಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಮುಂಬೈಯ ಎಲ್ಲ ಶಾಲೆಗಳಿಗೆ ಜುಲೈ 8ರಂದು ರಜೆ ಘೋಷಿಸಲಾಗಿದ್ದು, ಖಾಸಗಿ ಸಂಸ್ಥೆಗಳಿಗೆ ಸಾಧ್ಯವಾದಷ್ಟು ವರ್ಕ್ ಫ್ರಮ್ ಹೋಮ್ ವ್ಯವಸ್ಥೆ ಅನುಸರಿಸಲು ಆಡಳಿತ ಸೂಚಿಸಿದೆ.