ಬೆಂಗಳೂರು,ಜು.5: ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗುವ ಕೆಲವೊಂದು ಘಟನೆಗಳು ಮನಸ್ಸಿಗೆ ಹತ್ತಿರವಾಗುತ್ತವೆ. ಇದಕ್ಕೆ ಸಾಕ್ಷಿ ಎಂಬಂತೆ ಹೋಟೆಲ್ ಮಾಲೀಕರೊಬ್ಬರು ಮಹಿಳೆಯೊಬ್ಬರಿಗೆ ತೋರಿದ ಔದರ್ಯ ಎಲ್ಲರ ಮನ ಗೆಲ್ಲುವಂತೆ ಮಾಡಿದೆ. ಮಹಿಳೆಯೊಬ್ಬರಿಗೆ ಆನ್ ಲೈನ್ ಫುಡ್ ಡೆಲಿವರಿ ಆ್ಯಪ್ ಕೈ ಕೊಟ್ಟಾಗ ಹೊಟೇಲ್ ಮಾಲೀಕ ರೊಬ್ಬರು ತನ್ನ ಮನೆಯವರಂತೆ ಕಾಳಜಿ ವಹಿಸಿ ಆಹಾರ ಕಳುಹಿಸಿಕೊಟ್ಟಿದ್ದಾರೆ. ಈ ಅತಿಥ್ಯದ ಬಗ್ಗೆ ಮಹಿಳೆ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಈ ಘಟನೆ ನಡೆದಿದ್ದು ರೆಸ್ಟೋರೆಂಟ್ ಮಾಲೀಕರು ತೋರಿಸಿದ ಕರುಣೆ ಮತ್ತು ಆತಿಥ್ಯಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. ಇತ್ತೀಚೆಗೆ ಆನ್ ಲೈನ್ ಮೂಲಕ ಆಹಾರ ಆರ್ಡರ್ ಮಾಡುವುದು ಸಾಮಾನ್ಯವಾಗಿದೆ. ಅದೇ ರೀತಿ ನಿಶಾ ಆನಂದಾನಿ ಎಂಬ ಮಹಿಳೆಯೂ ಉಪವಾಸ ವೃತ ಇದ್ದು ಈ ಸಮಯದಲ್ಲಿ ತಿನ್ನಲು 'ಸಾಬುದಾನ ಖಿಚಡಿ' ಆರ್ಡರ್ ಮಾಡಿದ್ದರು. ಆದರೆ ಆಕೆಯ ಮನೆಗೆ ಈ ಸಮಯದಲ್ಲಿ ಡೆಲಿವರಿ ಮಾಡಲು ಸಾಧ್ಯವಿಲ್ಲ ಎಂದು ಈ ಆರ್ಡರ್ ಕ್ಯಾನ್ಸಲ್ ಆಗಿತ್ತು.
ಈ ಸಮಯದಲ್ಲಿ ಗೂಗಲ್‌ನಲ್ಲಿ ಲಭ್ಯವಿರುವ ಹೋಟೆಲ್ ಸಂಖ್ಯೆಯನ್ನೆಲ್ಲಾ ಬಳಸಿಕೊಂಡು ಹತ್ತಿರ ಇದ್ದ ಹೋಟೆಲ್ ಗೆ ಕರೆ ಮಾಡಿದ್ದಾರೆ. ಆಗ ಫೋನ್ ಕರೆ ಸ್ವೀಕರಿಸಿದ ಹೋಟೆಲ್ ಮಾಲೀಕರು ನಿಶಾ ಅವರ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ತಕ್ಷಣವೇ ಆಹಾರವನ್ನು ತಲುಪಿಸಲು ಒಪ್ಪಿದ್ದಾರೆ.
ಆ ಹೋಟೆಲ್ ಮಾಲೀಕರು ಕೇವಲ ನಿಶಾ ಕೇಳಿದ ಒಂದು ಖಿಚಡಿಯನ್ನಷ್ಟೇ ಕಳುಹಿಸಿಲ್ಲ. ರೆಸ್ಟೋರೆಂಟ್ ಮಾಲೀಕರು ಆಕೆಗೆ ಎರಡು ಬಾಕ್ಸ್ ಸಬುದಾನಾ ಖಿಚಡಿ, ಮೊಸರು ಮತ್ತು ಕತ್ತರಿಸಿದ ಹಣ್ಣುಗಳನ್ನು ಕಳುಹಿಸಿದ್ದಾರೆ. ಹೋಟೆಲ್ ಮಾಲೀಕರ ಈ ಅದ್ಭುತ ಗುಣಕ್ಕೆ ಮನಸೋತ ನಿಶಾ ಆನಂದಾನಿ, ತಮ್ಮ ಎಕ್ಸ್ ನಲ್ಲಿ ಈ ಸ್ಟೋರಿ ಹಂಚಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ವಾಸಿಸುವ ಜನರಿಂದ ನನ್ನ ಹೃದಯ ತುಂಬಿದೆ. ಇಂತಹ ಸಣ್ಣ ಸಣ್ಣ ಒಳ್ಳೆಯ ಕೆಲಸಗಳೇ ಜನರು ಈ ನಗರವನ್ನು ಹೆಚ್ಚು ಇಷ್ಟಪಡುವಂತೆ ಮಾಡುತ್ತವೆ ಎಂದು ಬರೆದಿದ್ದಾರೆ.
ಅನೇಕರು ರೆಸ್ಟೋರೆಂಟ್ ಮಾಲೀಕರ ಔದಾರ್ಯವನ್ನು ಶ್ಲಾಘಿಸಿದ್ದು ಇಂತಹ ಸಣ್ಣ ದಯೆಯ ಕೆಲಸ ಶಾಶ್ವತವಾಗಿ ನೆನಪು ಇಳಿಯುವಂತೆ ಮಾಡಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಮಾತ್ತೊ ಬ್ಬರು ಮಾನವೀಯತೆ ಅಂದ್ರೆ ಇದು ಎಂದು ಪ್ರತಿಕ್ರಿಯೆ ನೀಡಿದ್ದಾರೆ.