ಬ್ಯಾಂಕಾಕ್: ಇಂದು ಆಹಾರ ಉದ್ಯಮವು ತೀವ್ರ ಪೈಪೋಟಿ, ಸ್ಪರ್ಧೆಯಿಂದ ಕೂಡಿದೆ. ವಿಶೇಷವಾಗಿ ರೆಸ್ಟೋರೆಂಟ್‌ಗಳು, ಭೋಜನ ಪ್ರಿಯರನ್ನು ಆಕರ್ಷಿಸಲು ಸೃಜನಶೀಲ ತಂತ್ರಗಳನ್ನು ಪ್ರಯೋಗಿಸುತ್ತಿವೆ. ವಿಭಿನ್ನ-ರುಚಿಕರ ಆಹಾರ (food) ಮತ್ತು ಪಾನೀಯಗಳನ್ನು ತಯಾರಿಸುವುದು ಮಾತ್ರವಲ್ಲ, ಗ್ರಾಹಕರಿಗೆ ಆಕರ್ಷಿಸಲು ರೆಸ್ಟೋರೆಂಟ್ (Restaurant) ಅನ್ನು ವಿಭಿನ್ನವಾಗಿ ನಿರ್ಮಿಸಲಾಗುತ್ತದೆ. ಗ್ರಾಹಕರ ಗಮನ ಸೆಳೆಯಲು ವಿಭಿನ್ನ ಥೀಮ್ ಅಳವಡಿಸುವ ಮೂಲಕ ಉದ್ಯಮದ ಸ್ಪರ್ಧೆ ಹೆಚ್ಚಾಗುತ್ತಿದೆ ಎಂಬುದಕ್ಕೆ ಪುಷ್ಠಿ ನೀಡಿದೆ. ಇದೀಗ ಬ್ಯಾಂಕಾಕ್‌ನಲ್ಲಿರುವ ಒಂದು ರೆಸ್ಟೋರೆಂಟ್ ಒಂದು ಹೆಜ್ಜೆ ಮುಂದೆ ಹೋಗಿ, ಇತರರಿಗಿಂತ ಭಿನ್ನವಾದ ಥೀಮ್ ಹೊಂದಿದೆ. ಈ ಕಾನ್ಸೆಪ್ಟ್ ಈಗ ಭಾರೀ ಸದ್ದು(Viral Video) ಮಾಡುತ್ತಿದೆ.
ಜಿಪ್‌ಲೈನ್ ಬಳಸುತ್ತದೆ ಬ್ಯಾಂಕಾಕ್ ರೆಸ್ಟೋರೆಂಟ್
ಬ್ಯಾಂಕಾಕ್‌ನಲ್ಲಿರುವ ಒಂದು ರೆಸ್ಟೋರೆಂಟ್, ಗ್ರಾಹಕರ ಟೇಬಲ್‌ಗೆ ಕಡಿಮೆ ಸಮಯದಲ್ಲಿ ಆಹಾರವನ್ನು ತಲುಪಿಸಲು ಜಿಪ್ ಲೈನ್ ಬಳಸುತ್ತಿದೆ. ಹೌದು, ನೀವು ಸಾಮಾನ್ಯವಾಗಿ ಟ್ರೈನ್ ಥೀಮ್ ರೆಸ್ಟೋರೆಂಟ್ ಬಗ್ಗೆ ಕೇಳಿರಬಹುದು ಅಥವಾ ನೋಡಿರಬಹುದು. ಪುಟ್ಟ ರೈಲಿನಲ್ಲಿ ಆಹಾರವನ್ನು ಗ್ರಾಹಕರ ಟೇಬಲ್‌ಗೆ ಕಳುಹಿಸಲಾಗುತ್ತದೆ. ಅದೇ ರೀತಿ ಈ ರೆಸ್ಟೋರೆಂಟ್‍ನಲ್ಲಿ ಕೊಂಚ ವಿಭಿನ್ನವಾಗಿ ಜಿಪ್‍ಲೈನ್ ಬಳಸಲಾಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ, ಸಾಂಪ್ರದಾಯಿಕ ಕೆಂಪು ಥಾಯ್ ಉಡುಪನ್ನು ಧರಿಸಿ ಟ್ರೇ ಹಿಡಿದಿರುವ ವೇಟರ್, ಜಿಪ್‍ಲೈನ್ ಮೂಲಕ ಝುಯ್ಯನೆ ಹೋಗಿ ಆಹಾರ ಕೊಟ್ಟು ಬರುತ್ತಾರೆ.
ವಿಡಿಯೊ ವೀಕ್ಷಿಸಿ:
ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದ್ದು, ನೆಟ್ಟಿಗರ ಗಮನಸೆಳೆದಿದೆ. ಗ್ರಾಹಕರಿಗೆ ವೇಗವಾಗಿ ಆಹಾರವನ್ನು ತಲುಪಿಸುವ ಈ ಹೊಸ ಪರಿಕಲ್ಪನೆಯನ್ನು ಕೆಲವರು ಇಷ್ಟಪಟ್ಟರೆ, ಇನ್ನು ಕೆಲವರು ಅದರ ಬಗ್ಗೆ ತಮಾಷೆ ಮಾಡಿದ್ದಾರೆ. ಆಹಾರದೊಂದಿಗೆ ಆಟವಾಡುವುದನ್ನು ನಿಲ್ಲಿಸಿ ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಗಾಳಿಯ ಪರಿಣಾಮವಾಗಿ ಆಹಾರ ತಣ್ಣಗಾಗುತ್ತದೆ ಎಂದು ಮತ್ತೊಬ್ಬರು ಟೀಕಿಸಿದ್ದಾರೆ. ತಾನು ಶೌಚಾಲಯಕ್ಕೆ ಹೋಗಿ ಹಿಂತಿರುಗಲು ಜಿಪ್‌ಲೈನ್ ಬಳಸಿದರೆ ಅದು ಹೆಚ್ಚು ರೋಮಾಂಚನಕಾರಿಯಾಗುತ್ತಿತ್ತು ಬಳಕೆದಾರರಲ್ಲೊಬ್ಬರು ತಮಾಷೆ ಮಾಡಿದ್ದಾರೆ.
ಅಂದಹಾಗೆ, ಈ ರೆಸ್ಟೋರೆಂಟ್ ರಾಯಲ್ ಡ್ರ್ಯಾಗನ್ ಆಗಿದ್ದು, ಒಂದು ಕಾಲದಲ್ಲಿ ವಿಶ್ವದ ಅತಿದೊಡ್ಡ ರೆಸ್ಟೋರೆಂಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. 5,000 ಕ್ಕೂ ಹೆಚ್ಚು ಗ್ರಾಹಕರು ಕುಳಿತುಕೊಳ್ಳುವ ಸಾಮರ್ಥ್ಯ ಮತ್ತು 1,000 ಕ್ಕೂ ಹೆಚ್ಚು ಸಿಬ್ಬಂದಿ ಬಲದೊಂದಿಗೆ, ಇದು ಗಿನ್ನಿಸ್ ವಿಶ್ವದಾಖಲೆಗಳಲ್ಲಿ ಸ್ಥಾನ ಗಳಿಸಿತ್ತು.
ಈ ಸುದ್ದಿಯನ್ನೂ ಓದಿ: Viral News: ಮಗನ ಮದುವೆಯಲ್ಲಿ ಹೊರಬಿತ್ತು ಕರ್ಣ ಕಠೋರ ಸತ್ಯ; ವಧುವಿನ ಜನ್ಮ ರಹಸ್ಯ ತಿಳಿದು ವರನ ತಾಯಿ ಫುಲ್ ಶಾಕ್!