ಗುವಾಹಟಿ,ಮೇ 18: ಸಫಾರಿ ವೇಳೆ ಪ್ರಾಣಿಗಳು ಮನುಷ್ಯರ ಮೇಲೆ ದಾಳಿ ಮಾಡಿದ ಅನೇಕ ಪ್ರಕರಣಗಳು ವರದಿಯಾಗಿವೆ. ಇತ್ತೀಚೆಗೆ ಸಫಾರಿ ವೇಳೆ ಕಾಡಾನೆಯೊಂದು ಏಕಾಏಕಿ ಸಫಾರಿ ಜೀಪಿನತ್ತ ದಾಳಿ ಮಾಡಲು ಮುಂದಾಗಿದ್ದ ಘಟನೆ ಮುತ್ತೋಡಿ ಅಭಯಾರಣ್ಯದಲ್ಲಿ ನಡೆದಿತ್ತು. ಇದೀಗ ಅಸ್ಸಾಂನ ಮಾನಸ್ ರಾಷ್ಟ್ರೀಯ ಉದ್ಯಾನವನದಲ್ಲಿ ಘೇಂಡಾಮೃಗವು ಸಫಾರಿ ಜೀಪಿನ ಮೇಲೆ ದಾಳಿ ಮಾಡಲು ಮುಂದಾಗಿದ್ದು ಪ್ರವಾಸಿಗರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಈ ಭಯಾನಕ ಘಟನೆಯ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral Video) ಆಗಿದ್ದು ನೆಟ್ಟಿಗರು ಆತಂಕವನ್ನು ವ್ಯಕ್ತಪಡಿಸಿದ್ದಾರೆ.
ಅಸ್ಸಾಂನ ಮಾನಸ್ ರಾಷ್ಟ್ರೀಯ ಜೈವಿಕ ಉದ್ಯಾನವನದ ಬನ್ಸ್‌ಬಾರಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಖಡ್ಗ ಮೃಗ ವೊಂದು ಆಕ್ರಮಣಕಾರಿಯಾಗಿ ವರ್ತಿಸಿದೆ. ಪ್ರವಾಸಿಗರ ಜೀಪ್ ಮೇಲೆ ಏಕಾ ಏಕಿ ಎರಗಲು ಮುಂದಾಗಿದ್ದು ಪ್ರವಾಸಿಗರಲ್ಲಿ ಭಾರೀ ಆತಂಕವನ್ನು ಸೃಷ್ಟಿ ಮಾಡಿದೆ.
ವಿಡಿಯೊ ನೋಡಿ:
ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಓಪನ್ ಜೀಪ್‌ವೊಂದರ ಬಳಿ ಖಡ್ಗಮೃಗ ದಾಳಿ ಮಾಡಲು ಮುಂದಾಗಿದೆ. ಪೊದೆಗಳ ಮಧ್ಯ ದಿಂದ ನುಗ್ಗಿ ಬಂದ ಖಡ್ಗಮೃಗ ಪ್ರವಾಸಿಗರ ಜೀಪ್ ದಾಳಿಗೆ ಸ್ಕೆಚ್ ಹಾಕಿದೆ.. ವೈರಲ್ ಆದ ವಿಡಿಯೊದಲ್ಲಿ ಖಡ್ಗಮೃಗವು ಇದ್ದಕ್ಕಿದ್ದಂತೆ ನಿಂತಿರುವ ಸಫಾರಿ ವಾಹನವನ್ನು ಸಮೀಪಿಸುತ್ತಿದ್ದು ತನ್ನ ಕೊಂಬಿನಿಂದ ವಾಹನದ ಚಕ್ರವನ್ನು ಮೇಲಕ್ಕೆ ಎತ್ತಲು ಪ್ರಯತ್ನಿಸಿದೆ.
ಖಡ್ಗಮೃಗ ಜೀಪನ್ನು ಉರುಳಿಸಲು ಪದೇ ಪದೇ ಪ್ರಯತ್ನಿ ಸುತ್ತಿರುವುದನ್ನು ಕಾಣಬಹುದು, ವಾಹನವು ಅಲುಗಾಡುತ್ತಿದ್ದು ಪ್ರವಾಸಿಗರು ಕಿರುಚಾಡಿದ್ದಾರೆ.ಆದಾಗ್ಯೂ, ಚಾಲಕನು ಸಮಯ ಪ್ರಜ್ಞೆ ಮೆರೆದಿದ್ದು ಜೀಪನ್ನು ಸಮಯಕ್ಕೆ ಸರಿಯಾಗಿ ತಿರುಗಿ ಸುವಲ್ಲಿ ಯಶಸ್ವಿಯಾಗಿದ್ದಾನೆ. ಇದರಿಂದಾಗಿ ಇದೊಂದು ದೊಡ್ಡ ದುರಂತ ಘಟನೆ ತಪ್ಪಿದಂತಾಗಿದ್ದು,ಯಾವುದೇ ಪ್ರಾಣ ಹಾನಿ ಉಂಟಾಗಿಲ್ಲ.
ಮಾನಸ್ ರಾಷ್ಟ್ರೀಯ ಉದ್ಯಾನವನದಲ್ಲಿ ಇಂತಹ ಘಟನೆ ನಡೆದಿರುವುದು ಇದೇ ಮೊದಲಲ್ಲ.. ಕಳೆದ ವರ್ಷವೂ ಈ ರೀತಿಯ ಘಟನೆಗಳು ನಡೆದಿತ್ತು. ಅಸ್ಸಾಂನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಹೆಚ್ಚು ಖ್ಯಾತಿ ಪಡೆದಿದ್ದ ಈ ರಾಷ್ಟ್ರೀಯ ಉದ್ಯಾನವು ವನ್ಯಜೀವಿ ಸಂರಕ್ಷಣಾ ಕಾರ್ಯಗಳಿಗಾಗಿ ಹೆಸರುವಾಸಿಯಾಗಿದೆ. ಘಟನೆಯ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಅರಣ್ಯ ಇಲಾಖೆ ಅಧಿಕಾರಿಗಳು ಸುರಕ್ಷಿತ ನಿಯಮಗಳನ್ನು ಪಾಲಿಸಬೇಕು ಎಂದು ಆದೇಶ ಹೊರಡಿಸಿದ್ದಾರೆ.