ಚಂಡೀಗಢ, ಆ. 26: ಭಾರಿ ಮಳೆಯಿಂದಾಗಿ ಹರಿಯಾಣದ ಗುರುಗ್ರಾಮವು ಜಲಾವೃತಗೊಂಡಿದೆ. ದೆಹಲಿ-ಗುರುಗ್ರಾಮ ಹೆದ್ದಾರಿಯಲ್ಲಿ ನೀರು ನಿಂತ ಪರಿಣಾಮ ಹೆಚ್ಚಿನ ವಾಹನಗಳು ಕೆಟ್ಟು ನಿಂತಿವೆ. ಕಚೇರಿಯಿಂದ ಮನೆಗೆ ಹೊರಟ ಉದ್ಯೋಗಿಗಳು, ಮಕ್ಕಳು ಹೆದ್ದಾರಿಯಲ್ಲೇ ಸಿಲುಕಿಕೊಂಡು ಪರದಾಡುವಂತಾಯಿತು. ರಸ್ತೆ ಮೇಲೆ ಗಂಟೆಗಟ್ಟಲೆ ಸಿಲುಕಿ ಜನ ಹೈರಾಣರಾಗಿದ್ದಾರೆ. ಇದೀಗ ಪ್ರಸಿದ್ಧ ಇಫ್ಕೋ ಚೌಕ್ ರಸ್ತೆಯ ಬಳಿ ಭಾರಿ ಮಳೆಯ ನಂತರ ಬೃಹತ್ ಗಾತ್ರದ ಗುಂಡಿಯೊಂದು ಕಾಣಿಸಿಕೊಂಡಿದೆ. ಈ ವಿಡಿಯೊ ವೈರಲ್ ಆಗಿದ್ದು (Viral Video), ಜನಪ್ರತಿನಿಧಿಗಳು ಎಲ್ಲಿದ್ದಾರೆ? ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರಿ ಮಳೆಯ ನಂತರ ಗುರುಗ್ರಾಮದ IFFCO ಚೌಕ್ ಬಳಿಯ ಸರ್ವಿಸ್ ರಸ್ತೆಯಲ್ಲಿ ಆಳವಾದ ಸಿಂಕ್‌ಹೋಲ್ ಸೃಷ್ಟಿಯಾಗಿದೆ. ಈ ದೃಶ್ಯವು ಪ್ರಯಾಣಿಕರ ಸುರಕ್ಷತೆ ಬಗ್ಗೆ ಕಳವಳ ಹುಟ್ಟುಹಾಕಿದೆ. ರಸ್ತೆಯ ಮಣ್ಣು ಸವೆದು ಹೋದ ನಂತರ ರಸ್ತೆಯ ಎಡಭಾಗದಲ್ಲಿರುವ ಒಂದು ಭಾಗವು ಕುಸಿದಿದ್ದು ದೊಡ್ಡದಾದ ಗುಂಡಿ ಕಂಡು ಬಂದಿದೆ. ಈ ಘಟನೆಯ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.
ವಿಡಿಯೊ ನೋಡಿ:
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಪ್ರಕಾರ, ಗುರುಗ್ರಾಮ ಮಹಾನಗರ ಅಭಿವೃದ್ಧಿ ಪ್ರಾಧಿಕಾರ ನಿರ್ವಹಿಸುವ ಒಳಚರಂಡಿ ಮಾರ್ಗ ಸೋರಿಕೆಯಾಗುತ್ತಿರುವುದು ಪರಿಶೀಲನೆ ವೇಳೆ ಕಂಡುಬಂದಿದೆ. ಸೋರಿಕೆಯಾಗುವ ನೀರು ರಸ್ತೆಯ ಕೆಳಗಿರುವ ಮಣ್ಣನ್ನು ಕೊಚ್ಚಿಕೊಂಡು ಹೋಗಿದ್ದು ಗುಂಡಿಗೆ ಕಾರಣವಾಗಿದೆ. ಹೆಚ್ಚಿನ ಅನಾಹುತ ತಪ್ಪಿಸಲು ಕುಸಿದ ಭಾಗಕ್ಕೆ ತಕ್ಷಣವೇ ಬ್ಯಾರಿಕೇಡ್ ಅಳವಡಿಸಿ ಪ್ರದೇಶವನ್ನು ನಿರ್ಬಂಧಿಸಲಾಗಿದೆ.
ರೈಲು ಹಳಿಗೆ ಬಿದ್ದ ಮಕ್ಕಳನ್ನು ರಕ್ಷಿಸಲು ದೇಹವನ್ನೇ ರಕ್ಷಾ ಕವಚವಾಗಿಸಿದ ತಾಯಿ
ಪಂಪ್‌ಗಳನ್ನು ಬಳಸಿ ನೀರನ್ನು ತೆಗೆದುಹಾಕುವ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ. ಸಾರ್ವಜನಿಕರ ಸುರಕ್ಷತೆಗಾಗಿ ಈ ಮಾರ್ಗದ ವಾಹನ ಸಂಚಾರವನ್ನು ಪರ್ಯಾಯ ರಸ್ತೆಗಳಿಗೆ ಬದಲಾಯಿಸಲಾಗಿದೆ. ಮಳೆ ಬಂದಾಗಲೆಲ್ಲ ಗುರುಗ್ರಾಮದಲ್ಲಿ ಮೂಲಸೌಕರ್ಯಗಳ ಕೊರತೆ ಕಾಡುತ್ತಿದ್ದು, ನೆಟ್ಟಿಗರು ಆಡಳಿತದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ.