ಲಖನೌ: ಉತ್ತರ ಪ್ರದೇಶದ (Uttar Pradesh) ಲಕ್ನೋ-ಕಾನ್ಪುರ್ ಎಲಿವೇಟೆಡ್ ಎಕ್ಸ್‌ಪ್ರೆಸ್‌ವೇ (Lucknow-Kanpur expressway) ಉದ್ಘಾಟನೆಯಾಗಿ ಎರಡು ವಾರ ಕಳೆಯುವ ಮೊದಲೇ ಬಿರುಕು ಬಿಟ್ಟಿದೆ ಎಂದು ತಿಳಿದು ಬಂದಿದೆ. ಮಳೆಯಿಂದಾಗಿ ಎಕ್ಸ್‌ಪ್ರೆಸ್‌ವೇಯ ಒಂದು ಭಾಗದಲ್ಲಿ ಈಗ ಬಿರುಕುಗಳು ಕಾಣಿಸಿಕೊಂಡಿದ್ದು, ನಿರ್ಮಾಣದ ಗುಣಮಟ್ಟದ ಬಗ್ಗೆ ಕಳವಳ ವ್ಯಕ್ತವಾಗಿದೆ. ಲಕ್ನೋ-ಕಾನ್ಪುರ್ ಗ್ರೀನ್‌ಫೀಲ್ಡ್ ರಾಷ್ಟ್ರೀಯ ಎತ್ತರದ ಎಕ್ಸ್‌ಪ್ರೆಸ್‌ವೇ ಅನ್ನು 4,200 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದು , ಜುಲೈ 13 ರಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಉದ್ಘಾಟಿಸಿದ್ದರು.
ಜುಲೈ 25 ರಂದು ಭಾರಿ ಮಳೆಯಿಂದಾಗಿ ಲಕ್ನೋ-ಕಾನ್ಪುರ್ ಎಲಿವೇಟೆಡ್ ಎಕ್ಸ್‌ಪ್ರೆಸ್‌ವೇನ ಒಂದು ಕಡೆ ಬಿರುಕು ಮೂಡಿದೆ. ಸಮಾಜವಾದಿ ಪಕ್ಷದ ನಾಯಕ ಮಧುಸೂದನ್ ಯಾದವ್ ಅವರು ಎಕ್ಸ್‌ಪ್ರೆಸ್‌ವೇಯಿಂದ ವೀಡಿಯೊವನ್ನು ಹಂಚಿಕೊಂಡಿದ್ದು, ಕೊರಾರಿ ಗ್ರಾಮದ ಬಳಿ ಐದರಿಂದ ಏಳು ಮೀಟರ್ ರಸ್ತೆಯ ಭಾಗವು ಕುಸಿದಿದೆ ಎಂದು ಹೇಳಿದ್ದಾರೆ. "ನಾನು ಲಕ್ನೋ-ಕಾನ್ಪುರ್ ಎಲಿವೇಟೆಡ್ ಎಕ್ಸ್‌ಪ್ರೆಸ್‌ವೇಯಲ್ಲಿ ಪ್ರಯಾಣಿಸುತ್ತಿದ್ದೆ ಮತ್ತು ನಾನು ಕೊರಾರಿ ತಲುಪಿದಾಗ, ಮಳೆಯ ನಂತರ ರಸ್ತೆ ಹೇಗೆ ಬಿರುಕು ಬಿಟ್ಟಿದೆ ಎಂದು ನಾನು ನೋಡಿದೆ" ಎಂದು ಯಾದವ್ ಎಕ್ಸ್‌ಪ್ರೆಸ್‌ವೇಯಲ್ಲಿನ ಬಿರುಕುಗಳನ್ನು ತೋರಿಸುತ್ತಾ ಹೇಳಿದ್ದಾರೆ.
ವಿಡಿಯೋ ನೋಡಿ
ಈ ಘಟನೆಯು ಯೋಜನೆಯ ನಿರ್ಮಾಣ ಗುಣಮಟ್ಟ ಮತ್ತು ಮೇಲ್ವಿಚಾರಣಾ ಕಾರ್ಯವಿಧಾನಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ವಿಷಯದ ಕುರಿತು NHAI ಅಧಿಕಾರಿಗಳು ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಇಂತಹ ಬಿರುಕುಗಳು ಅಪಘಾತಕ್ಕೆ ಕಾರಣವಾಗಬಹುದು ಎಂಬ ಕಳವಳ ವ್ಯಕ್ತಪಡಿಸಿದ ಯಾದವ್, ಯೋಜನೆಯಲ್ಲಿ ಸರ್ಕಾರ ಭ್ರಷ್ಟಾಚಾರ ನಡೆಸಿದೆ ಎಂದು ಆರೋಪಿಸಿದ್ದಾರೆ. ಸದ್ಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಅಧಿಕಾರಿಗಳು ದುರಸ್ಥಿ ಕಾರ್ಯ ಕೈಗೊಂಡಿದ್ದಾರೆ.
48 ಲಕ್ಷದ ಸೇತುವೆ ಕುಸಿತ
ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ಬರೋಬ್ಬರಿ 48 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ನೂತನ ಸೇತುವೆಯೊಂದು ಕೇವಲ ಒಂದೇ ಒಂದು ಕಾಲಿನ ಸ್ಪರ್ಶಕ್ಕೆ ಕುಸಿದುಬಿದ್ದಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸ್ಥಳೀಯ ನಿವಾಸಿಯಾದ ದುರ್ಗಾದಾಸ್ ಲಂಬ್ ಎಂಬುವವರು ಈ ಕಳಪೆ ಕಾಮಗಾರಿಯನ್ನು ಕ್ಯಾಮೆರಾ ಮುಂದೆ ಬಯಲಿಗೆಳೆದಿದ್ದಾರೆ. ಅವರು ಸೇತುವೆಯ ಕೈಕಂಬದ (ಹ್ಯಾಂಡ್ ರೈಲ್) ಮೇಲೆ ತನ್ನ ಕಾಲಿನಿಂದ ಜಾಡಿಸಿ ಒದ್ದ ತಕ್ಷಣವೇ ಸಿಮೆಂಟ್ ಪಿಲ್ಲರ್‌ಗಳು ಕೆಳಗೆ ಬಿದ್ದಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ದಾಖಲಾಗಿದೆ.
Viral Video: ಚೀನಾದಲ್ಲಿ ಹೊಸದಾಗಿ ನಿರ್ಮಿಸಿದ ಹಾಂಗ್ಕಿ ಸೇತುವೆ ಕುಸಿತ; ಇಲ್ಲಿದೆ ಎದೆ ನಡುಗಿಸುವ ವಿಡಿಯೊ
ಈ ಆಘಾತಕಾರಿ ವಿಡಿಯೋ ಹೊರಬರುತ್ತಿದ್ದಂತೆ ಸ್ಥಳೀಯ ಜನರ ಆಕ್ರೋಶದ ಕಟ್ಟೆ ಹೊಡೆದಿದೆ. ಇಷ್ಟು ದೊಡ್ಡ ಮೊತ್ತದ ಯೋಜನೆಯನ್ನು ಅನುಮೋದಿಸುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ತಪಾಸಣೆ ನಡೆಸಿಲ್ಲವೇ ಎಂಬ ಗಂಭೀರ ಪ್ರಶ್ನೆಗಳನ್ನು ಜನರು ಎತ್ತಿದ್ದಾರೆ. ಕಾಂಕ್ರೀಟ್ ಬದಲಿಗೆ ಕೇವಲ ಮಣ್ಣು ಮಿಶ್ರಿತ ಸಿಮೆಂಟ್ ಬಳಸಿ ಸಾರ್ವಜನಿಕರ ಜೀವಕ್ಕೆ ಕುತ್ತು ತರುವಂತಹ ಸೇತುವೆ ನಿರ್ಮಿಸಲಾಗಿದೆ ಎಂದು ಸ್ಥಳೀಯರು ಗುತ್ತಿಗೆದಾರರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.