ರಿಯಾದ್: ಬಲೂಚಿಸ್ತಾನದ (Baluchistan) ಬಗ್ಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ಇತ್ತೀಚೆಗೆ ನೀಡಿದ್ದ ಹೇಳಿಕೆಗೆ ಪಾಕಿಸ್ತಾನ ಸರ್ಕಾರದಿಂದ ತೀವ್ರ ಟೀಕೆ ವ್ಯಕ್ತವಾಗಿದೆ. ನಟನಿಗೆ ಭಯೋತ್ಪಾದಕ ಎಂದು ಹಣೆಪಟ್ಟಿ ಕಟ್ಟಲಾಗಿದ್ದು, ಪಾಕಿಸ್ತಾನದ (Pakistan) 1997 ರ ಭಯೋತ್ಪಾದನಾ ವಿರೋಧಿ ಕಾಯ್ದೆಯ 4ನೇ ಪಟ್ಟಿಯ ಅಡಿಯಲ್ಲಿ ಇರಿಸಲಾಗಿದೆ ಎಂದು ತಿಳಿದುಬಂದಿದೆ. ಭಯೋತ್ಪಾದನಾ ಸಂಬಂಧಗಳ ಶಂಕಿತ ವ್ಯಕ್ತಿಗಳ ಕಪ್ಪುಪಟ್ಟಿಯಲ್ಲಿ ಸಲ್ಮಾನ್ ಖಾನ್ (Salman Khan) ಅವರನ್ನು ಸೇರಿಸಲಾಗಿದೆ. ಸಲ್ಮಾನ್ ಖಾನ್ ಮಾತನಾಡಿರುವ ವಿಡಿಯೊ ವೈರಲ್ (Viral Video) ಆಗಿದೆ.
ರಿಯಾದ್‌ನಲ್ಲಿ ನಡೆದ ಜಾಯ್ ಫೋರಮ್ 2025 ರಲ್ಲಿ ಸಲ್ಮಾನ್ ಖಾನ್, ಶಾರುಖ್ ಖಾನ್, ಅಮೀರ್ ಖಾನ್ ಅವರೊಂದಿಗೆ ಮಧ್ಯಪ್ರಾಚ್ಯದಲ್ಲಿ ಭಾರತೀಯ ಸಿನಿಮಾದ ಹೆಚ್ಚುತ್ತಿರುವ ಆಕರ್ಷಣೆಯ ಬಗ್ಗೆ ಮಾತನಾಡಿದ ನಂತರ ಈ ಬೆಳವಣಿಗೆ ನಡೆದಿದೆ. ಚರ್ಚೆಯ ಸಮಯದಲ್ಲಿ, ಸಲ್ಮಾನ್ ಖಾನ್ ಬಲೂಚಿಸ್ತಾನ್ ಮತ್ತು ಪಾಕಿಸ್ತಾನವನ್ನು ಪ್ರತ್ಯೇಕವಾಗಿ ಪ್ರಸ್ತಾಪಿಸಿದರು. ಇದು ಪಾಕಿಸ್ತಾನವನ್ನು ಕೆರಳಿಸಿದೆ.
ಈಗ, ನೀವು ಹಿಂದಿ ಸಿನಿಮಾ ಮಾಡಿ ಇಲ್ಲಿ (ಸೌದಿ ಅರೇಬಿಯಾದಲ್ಲಿ) ಬಿಡುಗಡೆ ಮಾಡಿದರೆ, ಅದು ಸೂಪರ್ ಹಿಟ್ ಆಗುತ್ತದೆ. ನೀವು ತಮಿಳು, ತೆಲುಗು ಅಥವಾ ಮಲಯಾಳಿ ಸಿನಿಮಾ ಮಾಡಿದರೆ, ನೂರಾರು ಕೋಟಿ ವ್ಯವಹಾರ ಮಾಡುತ್ತದೆ. ಏಕೆಂದರೆ ಇತರ ದೇಶಗಳಿಂದ ಇಲ್ಲಿಗೆ ಅನೇಕ ಜನರು ಬಂದಿದ್ದಾರೆ. ಬಲೂಚಿಸ್ತಾನದ ಜನರಿದ್ದಾರೆ, ಅಫ್ಘಾನಿಸ್ತಾನದ ಜನರಿದ್ದಾರೆ, ಪಾಕಿಸ್ತಾನದ ಜನರಿದ್ದಾರೆ. ಎಲ್ಲರೂ ಇಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಸಲ್ಮಾನ್ ಖಾನ್ ಹೇಳಿದ್ದರು.
ಇಲ್ಲಿದೆ ವಿಡಿಯೊ:
ಇದನ್ನೂ ಓದಿ: Twinkle Khanna: ಮದ್ವೆ ನಂತರ ಬೇರೊಬ್ಬರ ಜೊತೆ ಅಫೇರ್; ಅಕ್ಷಯ್ ಕುಮಾರ್ ಪತ್ನಿ ಟ್ವಿಂಕಲ್ ಖನ್ನಾ ಖುಲ್ಲಾಂ ಖುಲ್ಲಾ ಮಾತು!
ಸಲ್ಮಾನ್ ಖಾನ್ ಅವರ ಈ ಹೇಳಿಕೆಯು ಪಾಕಿಸ್ತಾನ ಸರ್ಕಾರವನ್ನು ಕೆರಳಿಸಿದೆ. ಆದರೆ, ಬಲೂಚ್ ಪ್ರತ್ಯೇಕತಾವಾದಿ ನಾಯಕರು ಸಲ್ಮಾನ್ ಹೇಳಿಕೆಯನ್ನು ಸ್ವಾಗತಿಸಿದ್ದಾರೆ. ಸಲ್ಮಾನ್ ಅವರ ಈ ಹೇಳಿಕೆಯು ಬಲೂಚ್ ಜನರಿಗೆ ಸಂತೋಷ ತಂದಿದೆ ಎಂದು ಬಲೂಚ್ ಸ್ವಾತಂತ್ರ್ಯದ ಪ್ರಮುಖ ಹೋರಾಟಗಾರರಾದ ಮೀರ್ ಯಾರ್ ಬಲೂಚ್ ಕೃತಜ್ಞತೆ ಸಲ್ಲಿಸಿದರು. ಅನೇಕ ರಾಷ್ಟ್ರಗಳು ಹೇಳಲು ಹಿಂಜರಿಯುವ ಕೆಲಸವನ್ನು ನಟ ಸಲ್ಮಾನ್ ಮಾಡಿದ್ದಕ್ಕಾಗಿ ಅವರು ಶ್ಲಾಘಿಸಿದರು. ಇದು ಬಲೂಚಿಸ್ತಾನವನ್ನು ಪ್ರತ್ಯೇಕ ರಾಷ್ಟ್ರವಾಗಿ ಜಾಗತಿಕವಾಗಿ ಗುರುತಿಸುವುದನ್ನು ಎತ್ತಿ ತೋರಿಸುವ ಮತ್ತು ರಾಜತಾಂತ್ರಿಕತೆಯ ಪ್ರಬಲ ಕಾರ್ಯವಾಗಿದೆ ಎಂದು ಹೇಳಿದರು.
ಪಾಕಿಸ್ತಾನದ ಅತಿದೊಡ್ಡ ಪ್ರಾಂತ್ಯ (ದೇಶದ ಶೇ. 46 ಇರುವ ಪ್ರದೇಶ) ಆದರೆ ಅದರ ಜನಸಂಖ್ಯೆಯ ಕೇವಲ ಶೇ. 6 (ಸುಮಾರು 1.5 ಕೋಟಿ) ಯಷ್ಟು ಜನರಿಗೆ ನೆಲೆಯಾಗಿರುವ ಬಲೂಚಿಸ್ತಾನದಲ್ಲಿನ ಅಶಾಂತಿಯು, ತಾರತಮ್ಯ ಮತ್ತು ಆರ್ಥಿಕ ನಿರ್ಲಕ್ಷ್ಯದಿಂದ ಕಂಗೆಟ್ಟಿದೆ. ಖನಿಜ ಸಂಪನ್ಮೂಲಗಳಿಂದ ಸಮೃದ್ಧವಾಗಿದ್ದರೂ, ಬಲೂಚಿಸ್ತಾನವು ಪಾಕಿಸ್ತಾನದ ಅತ್ಯಂತ ಹಿಂದುಳಿದ ಪ್ರದೇಶವಾಗಿ ಉಳಿದಿದೆ. ಸುಮಾರು ಶೇಕಡಾ 70 ರಷ್ಟು ಜನರು ಬಡತನ ರೇಖೆಗಿಂತ ಕೆಳಗೆ ವಾಸಿಸುತ್ತಿದ್ದಾರೆ.