ಲಖನೌ, ಅ. 2: ಖಾಸಗಿ ಶಾಲಾ ನಿರ್ವಾಹಕನೊಬ್ಬ ಮಹಿಳಾ ಸಿಬ್ಬಂದಿಯೊಬ್ಬರ ಬಳಿ ಆಕ್ಷೇಪಾರ್ಹ ಹೇಳಿಕೆ ನೀಡಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಆತನನ್ನು ಬಂಧಿಸಲಾಗಿದೆ. ಉತ್ತರ ಪ್ರದೇಶದ (Uttar Pradesh) ಕುಶಿನಗರದಲ್ಲಿ ಈ ಘಟನೆ ನಡೆದಿದೆ (Crime news). ಮಹಿಳೆಗೆ ಲೈಂಗಿಕ ಕಿರುಕುಳ ಮತ್ತು ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಪೋಸ್ಟ್ ಪೊಲೀಸರ ಗಮನಕ್ಕೆ ಬಂದ ನಂತರ ಅವರು ಕ್ರಮ ಕೈಗೊಂಡಿದ್ದಾರೆ. ಆರೋಪಿಯನ್ನು ದಿನೇಶ್ ರಾಯ್ ಎಂದು ಗುರುತಿಸಲಾಗಿದೆ.
ಸಂಭಾಷಣೆಯ ಸಮಯದಲ್ಲಿ, ದಿನೇಶ್ ಆ ಮಹಿಳೆಯೊಂದಿಗೆ ದೈಹಿಕ ಸಂಬಂಧ ಹೊಂದುವ ಬಗ್ಗೆ ಅನುಚಿತವಾಗಿ ಮಾತನಾಡಿದ್ದಾನೆ. “ಪತ್ನಿ ಅನಾರೋಗ್ಯದಿಂದ ಬಳಲುತ್ತಿದ್ದಾಳೆ. ಅದಕ್ಕಾಗಿ ನಾನು ನಿನ್ನೊಂದಿಗೆ ಮಲಗಲು ಬಯಸುತ್ತೇನೆ” ಎಂದು ಆತ ಹೇಳಿದ್ದಾನೆ. ಆತನ ಹೇಳಿಕೆಗೆ ಆ ಮಹಿಳೆ ಆಕ್ಷೇಪ ವ್ಯಕ್ತಪಡಿಸಿದ್ದು, “ನೀವು ನನ್ನೊಂದಿಗೆ ಈ ರೀತಿಯಾಗಿ ಹೇಗೆ ಮಾತನಾಡಬಹುದು? ನಾನೂ ಯಾರದ್ದೋ ಒಬ್ಬರ ಮಗಳು” ಎಂದು ಹೇಳಿದ್ದಾರೆ.
ವಿಡಿಯೊ ವೈರಲ್ ಆದ ನಂತರ, ರವೀಂದ್ರನಗರ ಧೂಸ್ ಪೊಲೀಸರು ದಿನೇಶ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ವರದಿಯ ಪ್ರಕಾರ, ಲೈಂಗಿಕ ಕಿರುಕುಳ, ಸ್ವಯಂಪ್ರೇರಣೆಯಿಂದ ನೋವುಂಟು ಮಾಡುವುದು ಮತ್ತು ಕ್ರಿಮಿನಲ್ ಬೆದರಿಕೆಗೆ ಸಂಬಂಧಿಸಿದಂತೆ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 75, 115(2) ಮತ್ತು 351(3) ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇಲ್ಲಿದೆ ವಿಡಿಯೊ:
ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ವೈರಲ್ ಆಗುತ್ತಲೇ ದಿನೇಶ್‌ನನ್ನು ಪೊಲೀಸರು ಬಂಧಿಸಿದರು. ಎಸ್‌ಎಚ್‌ಒ ಅನಿಲ್ ಕುಮಾರ್ ಸಿಂಗ್ ನೇತೃತ್ವದಲ್ಲಿ, ಸಬ್ ಇನ್ಸ್‌ಪೆಕ್ಟರ್ ವಿನಾಯಕ್ ಯಾದವ್ ಮತ್ತು ಕಾನ್ಸ್‌ಟೇಬಲ್ ಪಂಕಜ್ ಸಿಂಗ್ ತಂಡವು ಆರೋಪಿಯನ್ನು ಬಂಧಿಸಿತು. ತನಿಖೆ ಮತ್ತು ಪ್ರಕರಣದಲ್ಲಿ ಸಂಗ್ರಹವಾದ ಸಾಕ್ಷ್ಯಗಳ ಮೇಲೆ ಮುಂದಿನ ಕಾನೂನು ಕ್ರಮಗಳು ಅವಲಂಬಿತವಾಗಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಆತನ ವರ್ತನೆಗೆ ಆಕ್ರೋಶ ವ್ಯಕ್ತವಾಗುತ್ತಿದ್ದು, ಕಠಿಣ ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಆಗರಹಿಸಿದ್ದಾರೆ.
ಮನೆಗೆ ನುಗ್ಗಿ ಬಂದೂಕು ತೋರಿಸಿ ಯುವತಿ ಮೇಲೆ ಅತ್ಯಾಚಾರ ಎಸಗಿದ ಮುಸುಕುಧಾರಿ
ಮಹಿಳಾ ಪೊಲೀಸ್ ಸಿಬ್ಬಂದಿ ಮೇಲೆಯೇ ಹಲ್ಲೆ ನಡೆಸಿದ ಯುವಕ
ಇತ್ತೀಚೆಗಷ್ಟೇ ಬಿಹಾರದ ಪಟ್ನಾದಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿಯೊಂದಿಗೆ ಯುವಕನೊಬ್ಬ ಅನುಚಿತವಾಗಿ ವರ್ತಿಸಿ ಹಲ್ಲೆ ನಡೆಸಿದ್ದ. ಈ ಆರೋಪದ ಮೇಲೆ ಪಟ್ನಾದಲ್ಲಿ 22 ವರ್ಷದ ಪ್ರದೀಪ್ ಕುಮಾರ್ ಎಂಬ ಯುವಕನನ್ನು ಬಂಧಿಸಲಾಗಿದೆ. ಸದ್ಯ ಯುವಕನ ವರ್ತನೆ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.