ಡೆಹ್ರಾಡೂನ್, ಜೂ. 8: ಉತ್ತರಾಖಂಡದ ರಾಜಧಾನಿ ಡೆಹ್ರಾಡೂನ್‌ನಲ್ಲಿ ಅಘಾತಕಾರಿ ಘಟನೆಯೊಂದು ನಡೆದಿದೆ. ಪರೀಕ್ಷೆಯಲ್ಲಿ ನಕಲು ಮಾಡುವಾಗ ಸಿಕ್ಕಿಬಿದ್ದ ಮಗನ ಪರವಾಗಿ ಬಂದ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಕಾಲೇಜು ಸಿಬ್ಬಂದಿ ಮೇಲೆಯೇ ಹಲ್ಲೆ ನಡೆಸುವ ಕೀಳು ಮಟ್ಟಕ್ಕೆ ಇಳಿದಿದ್ದಾರೆ. ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗಿದ್ದು, ಆಕ್ರೋಶಕ್ಕೆ ಕಾರಣವಾಗಿದೆ. ಸದ್ಯ ಆರೋಪಿ ಪೊಲೀಸ್ ಅಧಿಕಾರಿಯ ವಿರುದ್ಧವೇ ತನಿಖೆ ಆದೇಶ ಹೊರಡಿಸಲಾಗಿದೆ.
ಜೂನ್ 4ರಂದು ಪಿತ್ತುವಾಲಾದ ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ ಈ ಘಟನೆ ನಡೆದಿದೆ. ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸಿವಿಲ್ ಎಂಜಿನಿಯರಿಂಗ್ ಅಂತಿಮ ವರ್ಷದ ಪರೀಕ್ಷೆ ನಡೆಯುತ್ತಿತ್ತು. ಈ ವೇಳೆ ಕಬೀರ್ ಕಂದ್ವಾಲ್ ಎಂಬ ವಿದ್ಯಾರ್ಥಿ ಇತರ ವಿದ್ಯಾರ್ಥಿಗಳೊಂದಿಗೆ ಮಾತನಾಡುತ್ತ ನಕಲು ಮಾಡಲು ಯತ್ನಿಸಿದ್ದಾನೆ. ಸಿಕ್ಕಿ ಬಿದ್ದಾಗ ತನ್ನ ತಂದೆ ಪೊಲೀಸ್ ಅಧಿಕಾರಿ ಎಂದು ಹೇಳಿ ಶಿಕ್ಷಕರ ಮೇಲೆಯೇ ಒತ್ತಡ ಹೇರಲು ಪ್ರಯತ್ನಿಸಿದ್ದಾನೆ ಎಂಬ ದೂರು ಕೇಳಿ ಬಂದಿದೆ.
ವಿಡಿಯೊ ನೋಡಿ:
ವಿದ್ಯಾರ್ಥಿ ನಕಲು ಮಾಡುತ್ತಿದ್ದಾಗ ಇದನ್ನು ಗಮನಿಸಿದ ಮೇಲ್ವಿಚಾರಕರು ಆತನನ್ನು ತಡೆದು, ಲಿಖಿತ ವಿವರಣೆ ನೀಡುವಂತೆ ಕೇಳಿದ್ದಾರೆ. ಆದರೆ ಆತ ತಪ್ಪು ಒಪ್ಪಿಕೊಳ್ಳುವ ಬದಲು "ನಮ್ಮ ತಂದೆ ಪೊಲೀಸ್ ಅಧಿಕಾರಿ" ಎಂದು ಬೆದರಿಕೆ ಹಾಕಿದ್ದಾನೆ. ಮಗನಿಗೆ ಶಿಕ್ಷಕರು ಪ್ರಶ್ನೆ ಮಾಡಿದ್ದಕ್ಕೆ ಆತನ ತಂದೆ ಸಬ್‌ಇನ್ಸ್‌ಪೆಕ್ಟರ್ ಮಹೇಶ್ ಕಂದ್ವಾಲ್, ತನ್ನ ಕೆಲವು ಸಹಚರರೊಂದಿಗೆ ಕಾಲೇಜು ಕ್ಯಾಂಪಸ್‌ಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ.
ಶ್ರೀಮಂತ ಹುಡುಗರು ಬಿಸಿ ಸಮೋಸ ಇದ್ದಂತೆ! ಸಂಗಾತಿ ಆಯ್ಕೆ ಬಗ್ಗೆ ಸಲಹೆ ನೀಡಿದ ಯುವತಿ!
ಅವರೆಲ್ಲರೂ ಪರೀಕ್ಷಾ ನಿಯಂತ್ರಣ ಕೊಠಡಿಗೆ ಬಲವಂತವಾಗಿ ನುಗ್ಗಿ, ಅಲ್ಲಿದ್ದ ಶಿಕ್ಷಕರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಷ್ಟೇ ಅಲ್ಲದೆ, ಕಾಲೇಜಿನ ವಸ್ತುಗಳನ್ನು ಧ್ವಂಸಗೊಳಿಸಿ, ಶಿಕ್ಷಕರ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ಈ ಇಡೀ ಘಟನೆ ಅಲ್ಲಿನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕೆಲಸದ ಸ್ಥಾನವನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಮಹೇಶ್ ಕಂದ್ವಾಲ್ ಅವರನ್ನು ಅಮಾನತುಗೊಳಿಸಲಾಗಿದೆ.
ಈ ನಡುವೆ ವಿದ್ಯಾರ್ಥಿ ಕಬೀರ್ ಕಂದ್ವಾಲ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊವೊಂದನ್ನು ಬಿಡುಗಡೆ ಮಾಡಿದ್ದಾನೆ. ʼʼನಾನು ಪರೀಕ್ಷೆಯಲ್ಲಿ ನಕಲು ಮಾಡಿಲ್ಲ. ಕಾಲೇಜಿನ ಕೆಲವು ಶಿಕ್ಷಕರು ನಕಲು ಮಾಡಲು ಹೇಳಿ ಹಣಕ್ಕೆ ಒತ್ತಾಯಿಸಿದ್ದಾರೆ. ನಾನು ಹಣ ಕೊಡಲು ನಿರಾಕರಿಸಿದ್ದಕ್ಕೆ ನನ್ನ ಮೇಲೆಯೇ ಹಲ್ಲೆ ನಡೆಸಿದ್ದಾರೆʼʼ ಎಂದು ಆರೋಪಿಸಿದ್ದಾನೆ. ಸದ್ಯಕ್ಕೆ ಸಿಸಿಟಿವಿ ದೃಶ್ಯಾವಳಿಗಳು ಮತ್ತು ಪ್ರತ್ಯಕ್ಷದರ್ಶಿಗಳ ಹೇಳಿಕೆಗಳ ಆಧಾರದ ಮೇಲೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ