ನವದೆಹಲಿ: ಎರಡು ಮಹಡಿ ಮೆಟ್ಟಿಲುಗಳನ್ನು ಹತ್ತಿ ಬಂದ ವಿಶೇಷ ಚೇತನ ಜೊಮಾಟೊ (Zomato) ಡೆಲಿವರಿ ಏಜೆಂಟರೊಬ್ಬರ ಆರ್ಡರ್ ಅನ್ನು ಗ್ರಾಹಕರೊಬ್ಬರು ಮನೆ ಬಾಗಿಲಲ್ಲೇ ರದ್ದುಗೊಳಿಸಿದ (Cancel) ಅಮಾನವೀಯ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 50 ರೂಪಾಯಿ ಮೌಲ್ಯದ ಆರ್ಡರ್ ನ್ನು ಸ್ವೀಕರಿಸಲು ಕೆಳಗೆ ಬರಲು (Viral Video) ಗ್ರಾಹಕರು ನಿರಾಕರಿಸಿದ್ದಲ್ಲದೆ, ಡೆಲಿವರಿ ಏಜೆಂಟ್ ಮೆಟ್ಟಿಲು ಹತ್ತಲು ಕಷ್ಟಪಡುತ್ತಿದ್ದಾರೆ ಎಂದು ಹೇಳಿದರೂ, ಅವರನ್ನೇ ಮೇಲಕ್ಕೆ ಬರುವಂತೆ ಒತ್ತಾಯಿಸಿದ್ದಾರೆ.
ಗ್ರಾಹಕರೊಬ್ಬರು ಜೊಮಾಟೊ ಆಪ್ ಮೂಲಕ ಕೇವಲ 50 ರೂಪಾಯಿ ಮೌಲ್ಯದ ಮ್ಯಾಗಿ ಆರ್ಡರ್ ಮಾಡಿದ್ದರು. ಆರ್ಡರ್ ಡೆಲಿವರಿ ಮಾಡಲು ಬಂದ ನಿಹಾರ್ ಅವರು, ತಂಗಿದ್ದ ಅಪಾರ್ಟ್ಮೆಂಟ್ನಲ್ಲಿ ಲಿಫ್ಟ್ ಇಲ್ಲದ ಕಾರಣ ತಮಗೆ ಮೆಟ್ಟಿಲು ಹತ್ತಲು ಸಾಧ್ಯವಾಗುತ್ತಿಲ್ಲ ಎಂದು ಗ್ರಾಹಕರಿಗೆ ಕರೆ ಮಾಡಿ ತಿಳಿಸಿದ್ದರು. ಅಲ್ಲದೆ ಕೆಳಗೆ ಬಂದು ಆರ್ಡರ್ ಪಡೆದುಕೊಳ್ಳುವಂತೆ ವಿನಂತಿಸಿದ್ದರು. ಆದರೆ ಇದಕ್ಕೆ ಒಪ್ಪದ ಗ್ರಾಹಕರು, "ಕೇವಲ 50 ರೂಪಾಯಿ ಪ್ಯಾಕೆಟ್ಗಾಗಿ ನಾವು ಕೆಳಗೆ ಬರಬೇಕಾ?" ಎಂದು ಉಡಾಫೆಯಿಂದ ಮಾತನಾಡಿದ್ದಾರೆ ಎನ್ನಲಾಗಿದೆ.
ಡೆಲಿವರಿ ಏಜೆಂಟ್ ತಮ್ಮ ಊರುಗೋಲುಗಳ ಸಹಾಯದಿಂದ ಕಷ್ಟಪಟ್ಟು ಎರಡನೇ ಮಹಡಿಯವರೆಗೆ ಮೆಟ್ಟಿಲುಗಳನ್ನು ಹತ್ತಿ ಹೋಗಿದ್ದಾರೆ. ಆದರೆ, ಅವರು ಗ್ರಾಹಕರ ಮನೆ ಬಾಗಿಲಿಗೆ ತಲುಪುವಷ್ಟರಲ್ಲಿ ಗ್ರಾಹಕರು ಆಪ್ನಲ್ಲಿ ಆರ್ಡರ್ ಅನ್ನು ರದ್ದುಗೊಳಿಸಿದ್ದರು. "ನಾನು ಕಷ್ಟಪಟ್ಟು ಮನೆವರೆಗೂ ಪಾರ್ಸೆಲ್ ತಗೊಂಡು ಹೋದೆ, ಆದರೆ ಅವರು ಆರ್ಡರ್ ಕ್ಯಾನ್ಸಲ್ ಮಾಡಿದರು" ಎಂದು ತಮ್ಮ ಮೊಬೈಲ್ ಸ್ಕ್ರೀನ್ ತೋರಿಸುತ್ತಾ ಕಣ್ಣೀರಿಟ್ಟಿದ್ದಾರೆ.
ವಿಡಿಯೋ ನೋಡಿ
ಈ ಘಟನೆ ಬಳಿಕ ನಿಹಿರ್ ಅವರಿಗೆ ವ್ಯಾಪಕ ಬೆಂಬಲ ಸಿಕ್ಕಿದೆ. ಅನೇಕ ಸಾಮಾಜಿಕ ಜಾಲತಾಣ ಬಳಕೆದಾರರು, ಡೆಲಿವರಿ ಏಜೆಂಟ್ ಅವರ ಅಂಗವೈಕಲ್ಯವನ್ನು ಪರಿಗಣಿಸದ ಗ್ರಾಹಕರ ವರ್ತನೆಯನ್ನು ತೀವ್ರವಾಗಿ ಟೀಕಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಮಿಲಿಯನ್ಗಿಂತಲೂ ಹೆಚ್ಚು ವೀಕ್ಷಣೆ ಪಡೆದಿದ್ದು, ಗ್ರಾಹಕನ ಅಹಂಕಾರದ ವರ್ತನೆಗೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. "ಹಣದ ಅಹಂಕಾರಕ್ಕಿಂತ ಕನಿಷ್ಠ ಮಾನವೀಯತೆ ಮುಖ್ಯ" ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ಮತ್ತೊಂದೆಡೆ, ಡೆಲಿವರಿ ಏಜೆಂಟ್ ಕಷ್ಟಪಡುತ್ತಾ ಮೆಟ್ಟಿಲು ಹತ್ತುತ್ತಿದ್ದರೂ ಅವರಿಗೆ ಸಹಾಯ ಮಾಡದೆ, ಕೇವಲ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ವ್ಯಕ್ತಿಯ ವಿರುದ್ಧವೂ ಕೆಲವರು ಅಸಮಾಧಾನ ಹೊರಹಾಕಿದ್ದಾರೆ.