ಬೆಂಗಳೂರು, ಅ. 18: ಇತ್ತೀಚೆಗೆ ಸಣ್ಣಪುಟ್ಟ ವಸ್ತು ಖರೀದಿಗೂ ನಾವು ಯುಪಿಐ ಅನ್ನೇ ಅವಲಂಬಿಸಿದ್ದೇವೆ. ಡಿಜಿಟಲ್ ಪಾವತಿಗಳು ಬಂದ ಮೇಲೆ ಕ್ಯಾಶ್ ಬಳಕೆ ಮಾಡುವುದು ಕಡಿಮೆ ಆಗಿ ಬಿಟ್ಟಿದೆ. ಇದೀಗ ಬೆಂಗಳೂರಿನ ಹೊಟೇಲ್ನಲ್ಲಿ ಗ್ರಾಹಕಿಯೊಬ್ಬರಿಗೆ ಕಹಿ ಅನುಭವ ಆಗಿದೆ. ದೋಸೆ ಮತ್ತು ಕಾಫಿ ಸವಿದು ಬಿಲ್ ಪಾವತಿ ಮಾಡಲು ಹೋದ ಮಹಿಳೆ ನಗದು ನೀಡಲು ಮುಂದಾದಾಗ ದರ್ಶಿನಿಯ ಸಿಬ್ಬಂದಿ ಅದನ್ನು ಪಡೆಯಲು ನಿರಾಕರಿಸಿದ್ದಾನೆ. ಚಿಲ್ಲರೆ ಹಣವಿದ್ದರೂ "ಚಿಲ್ಲರೆ ಇಲ್ಲ" ಎಂದು ವಾದಕ್ಕಿಳಿದಿದ್ದಾನೆ. ತಾವು ದಕ್ಷಿಣ ಭಾರತೀಯರಂತೆ ಕಾಣದ ಕಾರಣ ಅಥವಾ ಸಂಭಾಷಣೆಯ ಸಮಯದಲ್ಲಿ ಕನ್ನಡ ಮಾತನಾಡದ ಕಾರಣ ತಮ್ಮೊಂದಿಗೆ ಭಿನ್ನವಾಗಿ ವರ್ತಿಸಲಾಯಿತೇ ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ (Viral News) ಪ್ರಶ್ನಿಸಿದ್ದಾರೆ.
ಬೆಂಗಳೂರಿನ ಮಹಿಳೆ ತಾವು ಸೇವಿಸಿದ ದೋಸೆ ಮತ್ತು ಕಾಫಿಗೆ ನಗದು ರೂಪದಲ್ಲಿ ಹಣ ಪಾವತಿಸಲು ಮುಂದಾದಾಗ ಹೊಟೇಲ್ನಲ್ಲಿ ಮುಜುಗರದ ಸನ್ನಿವೇಶ ಉಂಟಾಗಿದೆ. ಚಿಲ್ಲರೆ ಹಣ ಲಭ್ಯವಿದ್ದರೂ ನಗದನ್ನು ಸ್ವೀಕರಿಸಲು ನಿರಾಕರಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಈ ಘಟನೆಯು ಭಾಷೆ, ಮತ್ತು ಪಾವತಿ ವಿಧಾನಗಳ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.
ಪ್ರಿಯಾ ಸೆಲಡಿನ್ ಎನ್ನುವವರು ಇತ್ತೀಚೆಗೆ ಬೆಂಗಳೂರಿನ ಜನಪ್ರಿಯ ದರ್ಶಿನಿಯೊಂದಕ್ಕೆ ಭೇಟಿ ನೀಡಿದ್ದರು. ತಿಂಡಿ ಮುಗಿಸಿ ಬಿಲ್ ಕೌಂಟರ್ ಹೋದಾಗ ಆ ಸಮಯದಲ್ಲಿ ಅವರ ಬಳಿ ಯುಪಿಐ ಇರಲಿಲ್ಲ. ಹೀಗಾಗಿ ನಗದು ನೀಡಲು ಮುಂದಾಗಿದ್ದಾರೆ. ಆದರೆ ಹೊಟೇಲ್ನಲ್ಲಿದ್ದ ಸಿಬ್ಬಂದಿ ಚಿಲ್ಲರೆ ಇಲ್ಲವೆಂದು ಹೇಳಿ ಹಣ ಸ್ವೀಕರಿಸಲು ಹಿಂದೇಟು ಹಾಕಿದ್ದಾರೆ.
ವಾಹನ ಸಂಚರಿಸುತ್ತಿದ್ದಂತೆ ಬಿರುಕು ಬಿಟ್ಟು ರಸ್ತೆಯಿಂದ ಜಿನುಗಿತು ನೀರು!
ಕೌಂಟರ್ನಲ್ಲೇ ಚಿಲ್ಲರೆ ಹಣ ರಾಶಿ ಬಿದ್ದಿರುವುದು ಪ್ರಿಯಾ ಕಣ್ಣಿಗೆ ಬಿದ್ದಿದೆ. ಇದನ್ನು ಪ್ರಶ್ನಿಸಿದಾಗ ಸಿಬ್ಬಂದಿ ಇತರ ಗ್ರಾಹಕರಿಗೂ ಬೇಕು ಎಂದು ಉಡಾಫೆಯಾಗಿ ಉತ್ತರಿಸಿದ್ದಾರೆ. ಸಿಬ್ಬಂದಿಯ ಈ ವರ್ತನೆಯಿಂದ ಬೇಸತ್ತ ಮಹಿಳೆ, "ನಾನೇನು ನಿಮ್ಮ ಗ್ರಾಹಕಳಲ್ಲವೇ?" ಎಂದು ನೇರವಾಗಿ ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೆ, ತಾನು ನೋಡಲು ದಕ್ಷಿಣ ಭಾರತೀಯಳಂತೆ ಕಾಣದ ಹಾಗೂ ಸ್ಥಳೀಯ ಭಾಷೆಯಲ್ಲಿ ಮಾತನಾಡದ ಕಾರಣಕ್ಕಾಗಿಯೋ ತನ್ನೊಂದಿಗೆ ಹೀಗೆ ವರ್ತಿಸಲಾಯಿತೇ ಎಂದು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನಿಸಿದ್ದಾರೆ.
ಪೋಸ್ಟ್ನ ಕೊನೆಯಲ್ಲಿ "ನಾನು ದಕ್ಷಿಣ ಭಾರತೀಯಳೇ ಮತ್ತು ನನಗೆ ಕನ್ನಡವೂ ಚೆನ್ನಾಗಿ ಬರುತ್ತದೆ" ಎಂದು ಸ್ಪಷ್ಟನೆ ನೀಡಿದ್ದಾರೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಕೆಲವರು ಮಹಿಳೆಯ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದರೆ, ಇನ್ನು ಕೆಲವರು ಈ ಘಟನೆಗೂ ಭಾಷೆ ಅಥವಾ ಪ್ರಾದೇಶಿಕ ಗುರುತಿಸುವಿಕೆಗೂ ಯಾವುದೇ ಸಂಬಂಧವಿಲ್ಲದಿರಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಬಳಕೆದಾರರೊಬ್ಬರು, ʼʼಇದು ನೀವು ಕನ್ನಡ ಮಾತನಾಡದ ಕಾರಣಕ್ಕೆ ಆಗಿದ್ದಲ್ಲ. ಇತ್ತೀಚಿನ ದಿನಗಳಲ್ಲಿ ಬಹುತೇಕ ಅಂಗಡಿ ಮಾಲಕರ ಮನಸ್ಥಿತಿ ಹೀಗೆಯೇ ಇದೆʼʼ ಎಂದು ಬರೆದುಕೊಂಡಿದ್ದಾರೆ.