ಬೆಂಗಳೂರು, ಮಾ. 30: ಭಾರತದ ಸಂಸ್ಕೃತಿ, ಇಲ್ಲಿನ ಆಚರಣೆ ಬಗ್ಗೆ ಅನೇಕ ವಿದೇಶಿ ಪ್ರವಾಸಿಗರು ಆಗಾಗ ಮೆಚ್ಚುಗೆ ವ್ಯಕ್ತ ಪಡಿಸುತ್ತಾರೆ. ಇದೀಗ ವಿದೇಶದ ಆರೋಗ್ಯ ಸೇವೆಗಿಂತ ಭಾರತದಲ್ಲಿ ಯಾವ ರೀತಿಯ ಉತ್ತಮ ಸೌಲಭ್ಯಗಳಿದೆ ಎನ್ನುವುದನ್ನು ಸ್ಟಾರ್ಟ್‌ಅಪ್ ಸಂಸ್ಥಾಪಕರೊಬ್ಬರು ಸೋಶಿಯಲ್ ಮೀಡಿಯಾದಲ್ಲಿ(Viral News) ವಿವರಿಸಿದ್ದಾರೆ. ಬೆಂಗಳೂರಿನ ಕೋರಮಂಗಲದಲ್ಲಿ ರೇಬಿಸ್ ನಿರೋಧಕ ಲಸಿಕೆ ಕೆಲವೇ ನಿಮಿಷಕ್ಕೆ ದೊರೆತಿದೆ ಎಂದು ಭಾರತ್ ಅಗ್ರಿ ಸಂಸ್ಥಾಪಕ ಸಿದ್ಧಾರ್ಥ್ ಡಯಾಲಾನಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ʼʼನಾವು ಭಾರತದಲ್ಲಿನ ಕೆಲವು ವಿಷಯಗಳನ್ನು ಲಘುವಾಗಿ ತೆಗೆದುಕೊಳ್ಳುತ್ತೇವೆ! ನಾನು ಸ್ನೇಹಿತನ ಮನೆಯ ಪಾರ್ಟಿಗೆ ಹೋದಾಗ ಅವರ ಸಾಕು ನಾಯಿ ನನ್ನನ್ನು ಕಚ್ಚಿತು. ನಾಯಿಗೆ ಲಸಿಕೆ ಹಾಕಲಾಗಿದೆ ಎಂದು ಅವರು ನನಗೆ ಭರವಸೆ ನೀಡಿದ್ದರೂ, ನಾನು ಯಾವುದೇ ರಿಸ್ಕ್ ತೆಗೆದುಕೊಳ್ಳಲು ಬಯಸಲಿಲ್ಲ. ಕೂಡಲೇ ಮನೆಯಿಂದ ಕೇವಲ 1 ಕಿ.ಮೀ. ದೂರದಲ್ಲಿರುವ ಕ್ಲಿನಿಕ್ ತೆರಳಿದೆ. ಹೋದ ಕೇವಲ 10 ನಿಮಿಷಗಳಲ್ಲಿ ರೇಬಿಸ್ ನಿರೋಧಕ ಲಸಿಕೆ ನೀಡಿದರು. ಇದು ತ್ವರಿತ ಚಿಕಿತ್ಸೆಯ ಉತ್ತಮ ಉದಾಹೆಣೆʼʼ ಎಂದು ಬಣ್ಣಿಸಿದ್ದಾರೆ.
ವೈರಲ್ ಪೋಸ್ಟ್ ಇಲ್ಲಿದೆ:
ನಾಯಿ ಕಚ್ಚಿದ ತಕ್ಷಣ ಅಮೆರಿಕದಲ್ಲಿ ಚಿಕಿತ್ಸೆ ಪಡೆಯುವುದು ಎಷ್ಟು ಕಷ್ಟ ಮತ್ತು ಬೆಂಗಳೂರಿನಲ್ಲಿ ಅದು ಎಷ್ಟು ಸುಲಭ ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ. ʼʼಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನನ್ನ ಸ್ನೇಹಿತರೊಬ್ಬರಿಗೆ ನಾಯಿಯೊಂದು ಕಚ್ಚಿದಾಗ ಅವರು ಸುಮಾರು 10 ಮೈಲಿ ದೂರ ಹೋಗಿ ಹುಡುಕಾಡಿದರೂ ಎಲ್ಲಿಯೂ ರೇಬಿಸ್ ನಿರೋಧಕ ಲಸಿಕೆ ಲಭಿಸಿರಲಿಲ್ಲ. ಅಭಿವೃದ್ಧಿ ಹೊಂದಿದ ದೇಶದಲ್ಲೂ ತುರ್ತು ಲಸಿಕೆಗಾಗಿ ಪರದಾಡಬೇಕಾದ ಸ್ಥಿತಿ ಅಲ್ಲಿದೆʼʼ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.
ಸರ್ಕಾರಿ ಆಸ್ಪತ್ರೆಯ ಬೆಡ್ ಮೇಲೆ ಬೀದಿ ನಾಯಿಗಳಿಗೆ ರಾಯಲ್ ಟ್ರೀಟ್‌ಮೆಂಟ್
ಸಿದ್ಧಾರ್ಥ್ ಅವರ ಈ ಪೋಸ್ಟ್‌ಗೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ನೆಟ್ಟಿಗರೊಬ್ಬರು ಅಮೆರಿಕ ಆರೋಗ್ಯ ರಕ್ಷಣೆ ಭಾರತಕ್ಕಿಂತ ಹೆಚ್ಚು ದುಬಾರಿ ಎಂದಿದ್ದಾರೆ. ಕೆಲವರು ಬೆಂಗಳೂರಿನಂತ ಶ್ರೀಮಂತ ಪ್ರದೇಶದಲ್ಲಿ ಎಲ್ಲವೂ ಸುಲಭವಾಗಿ ಸಿಗುತ್ತದೆ. ಆದರೆ ಹಳ್ಳಿಗಳ ಸಮಸ್ಯೆ ಸುಧಾರಿಸಬೇಕಿದೆ ಎಂದು ಪ್ರತಿಕ್ರಿಯಿಸಿದ್ದಾರೆ.