ಮುಂಬೈ, ಜು. 8: ಪ್ರಕೃತಿ ಸೌಂದರ್ಯ ಅನುಭವಿಸಲು ಅಪಾಯಕಾರಿ ಸ್ಥಳಕ್ಕೆ ಹೋಗುವ ಮೊದಲು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು ಅಗತ್ಯ. ಅದರಲ್ಲೂ ಪ್ರಕೃತಿಯ ಎದುರು ಚೆಲ್ಲಾಟವಾಡಲು ಹೋಗಲೇ ಬಾರದು. ಇತ್ತೀಚೆಗಷ್ಟೇ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಸಮೀಪದ ಮಾರ್ಕೊನಹಳ್ಳಿ ಅಣೆಕಟ್ಟಿನಲ್ಲಿ ನಡೆದ ದುರಂತದಲ್ಲಿ ಒಂದೇ ಕುಟುಂಬದ ಆರು ಮಂದಿ ನೀರಿನಲ್ಲಿ ಕೊಚ್ಚಿ ಹೋಗಿ ಪ್ರಾಣ ಕಳೆದುಕೊಂಡಿದ್ದರು. ಇದೀಗ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಂದ್ರಿ ಸರೋವರ ಸಮೀಪದ ಜಲಪಾತದಲ್ಲೂ ಅಂತಹದ್ದೇ ಘಟನೆ ನಡೆದಿದೆ. ಜಲಪಾತದಲ್ಲಿ ದಿಢೀರ್ ನೀರಿನ ಪ್ರಮಾಣ ಹೆಚ್ಚಾಗಿ ಪ್ರವಾಸಿಗರು ಪ್ರಾಣ ಉಳಿಸಿಕೊಳ್ಳಲು ಪರದಾಡಿದ ದೃಶ್ಯ ವೈರಲ್ (Viral News) ಆಗಿದೆ.
ಮಳೆಗಾಲದಲ್ಲಿ ಜಲಪಾತ ಹಾಗೂ ಕೊಳ, ಸರೋವರ, ನದಿಯಂತಹ ಜಮಮೂಲಗಳ ಪ್ರದೇಶಕ್ಕೆ ಭೇಟಿ ನೀಡುವಾಗ ಎದುರಾಗುವ ಅಪಾಯಗಳ ಬಗ್ಗೆ ಈ ಘಟನೆ ಮನವರಿಕೆ ಮಾಡಿಸುವಂತಿದೆ. ವಿಡಿಯೊದ ಆರಂಭದಲ್ಲಿ ಮಳೆಯ ಹೊರತಾಗಿಯೂ ಪ್ರವಾಸಿಗರು ಸುಂದರ ಜಲಪಾತದಲ್ಲಿ ಎಂಜಾಯ್ ಮಾಡುತ್ತಿರುವ ದೃಶ್ಯ ಕಂಡು ಬಂದಿದೆ. ಆದಾಗ್ಯೂ, ಕೆಲವೇ ಕ್ಷಣಗಳಲ್ಲಿ, ನೀರಿನ ಮಟ್ಟವು ಹೆಚ್ಚಾಗಿದ್ದು ಅಪಾಯಕಾರಿಯಾಗಿ ಮಾರ್ಪಟ್ಟಿತು. ಇದರಿಂದಾಗಿ ಪ್ರವಾಸಿಗರು ವೇಗವಾಗಿ ಹರಿಯುವ ಪ್ರವಾಹದ ವಿರುದ್ಧ ಪ್ರಾಣ ಉಳಿಸಿಕೊಳ್ಳಲು ಪರದಾಡಿದ್ದಾರೆ.
ವಿಡಿಯೊ ನೋಡಿ:
ಪಾಲ್ಘರ್ ಜಿಲ್ಲೆಯ ವಂದ್ರಿ ಜಲಪಾತದಲ್ಲಿ ಈ ಘಟನೆಯು ನಡೆದಿದೆ. ಹಲವು ಪ್ರವಾಸಿಗರು ನೀರಿನ ಸೆಳತಕ್ಕೆ ಸಿಲುಕಿ ಅಪಾಯದಲ್ಲಿದ್ದರು. ಮೇಲ್ಭಾಗದಿಂದ ಕೆಸರು ಮಿಶ್ರಿತ ನೀರು ಭಾರಿ ವೇಗವಾಗಿ ಹರಿದು ಬರುತ್ತಿದ್ದು ಪ್ರವಾಸಿಗರು ನೀರಿನ ಪ್ರವಾಹದ ವಿರುದ್ಧ ಹೊರಬರಲು ಹೆಣಗಾಡ ಬೇಕಾಯಿತು. ಪುರುಷರು, ಮಹಿಳೆಯರು ಮತ್ತು ಮಕ್ಕಳು ಬೆಂಬಲಕ್ಕಾಗಿ ಪರಸ್ಪರ ಹಿಡಿದುಕೊಂಡು ಕೊನೆಗೂ ಪ್ರಾಣ ಉಳಿಸಿಕೊಂಡರು.
ಭೀಕರ ಅಲೆಗಳಿಂದ ವೃದ್ಧರ ಪ್ರಾಣ ಉಳಿಸಿ ಕಪಾಳಮೋಕ್ಷ ಮಾಡಿದ ಯುವಕ
ಅದೃಷ್ಟವಶಾತ್, ಸ್ಥಳೀಯ ನಿವಾಸಿಗಳು ಕೂಡ ಸಹಾಯ ಮಾಡಲು ತ್ವರಿತವಾಗಿ ಮುಂದಾದರು. ಅಲ್ಲಿದ್ದ ಜನರ ನೆರವಿನಿಂದ ಪ್ರವಾಸಿಗರು ಅಪಾಯಕಾರಿ ಪ್ರವಾಹದಿಂದ ಪ್ರಾಣ ಉಳಿಸಿಕೊಂಡಿದ್ದು ದೊಡ್ಡ ಮಟ್ಟದ ಅನಾಹುತವೊಂದು ತಪ್ಪಿದಂತಾಗಿದೆ. ಈ ವಿಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಪ್ರವಾಸಿಗರೊಬ್ಬರು, "ಕೇವಲ ಎರಡು ನಿಮಿಷದ ಮೋಜು ಭಯಾನಕ ಪರಿಸ್ಥಿತಿಯಾಗಿ ಬದಲಾಯಿತು. ಇದು ಜಾಗೃತಿ ಮೂಡಿಸಲು ಮಾಡಿದ ವಿಡಿಯೊ. ಜೀವ ಪಣಕ್ಕಿಟ್ಟ ಸ್ಥಳೀಯರಿಗೆ ಧನ್ಯವಾದಗಳುʼʼ ಎಂದು ಬರೆದುಕೊಂಡಿದ್ದಾರೆ.