ಲಖನೌ, ಫೆ.18: ಮಹಿಳೆಯೊಬ್ಬಳು ತನ್ನ ಪತಿಗೆ ಅಕ್ರಮ ಸಂಬಂಧವಿದೆ ಎಂದು ಶಂಕಿಸಿ ಸಾರ್ವಜನಿಕವಾಗಿ ಥಳಿಸಿದ ಘಟನೆ ಉತ್ತರ ಪ್ರದೇಶದ (Uttar Pradesh) ಸೀತಾಪುರದಲ್ಲಿ ನಡೆದಿದೆ. ಪತಿ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದಾನೆ. ಈ ಘಟನೆ ಜನನಿಬಿಡ ರಸ್ತೆಯೊಂದರಲ್ಲಿ ನಡೆದಿದ್ದು, ಸ್ಥಳದಲ್ಲಿದ್ದವರು ಈ ಘಟನೆಯನ್ನು ರೆಕಾರ್ಡ್ ಮಾಡಿದ್ದಾರೆ. ಸದ್ಯ ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (viral video) ಆಗಿದೆ.
ಬುರ್ಖಾ ಧರಿಸಿದ್ದ ಮಹಿಳೆಯು ಮೊದಲು ತನ್ನ ಪತಿಗೆ ಆತನ ಕೃತ್ಯಗಳನ್ನು ಪ್ರಶ್ನಿಸುತ್ತಾ ಪದೇ ಪದೆ ಕಪಾಳಮೋಕ್ಷ ಮಾಡಿದ್ದಾಳೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಈ ಘರ್ಷಣೆ ಬೇರೆ ಸ್ವರೂಪ ಪಡೆದುಕೊಳ್ಳುವುದನ್ನು ನೋಡಿದ ಜನಸಮೂಹ ದಿಗ್ಭ್ರಮೆಗೊಂಡಿತು.
ಶಿಕ್ಷಕನಾಗಿರುವ ತನ್ನ ಪತಿಗೆ ಬೇರೆ ಮಹಿಳೆಯೊಂದಿಗೆ ಸಂಬಂಧವಿದೆ ಎಂದು ಮಹಿಳೆ ಅನುಮಾನಿಸಿದ್ದಳು. ನಂತರ ಸಾರ್ವಜನಿಕವಾಗಿ ಆತನೊಂದಿಗೆ ವಾಗ್ವಾದ ನಡೆಸಿದ್ದಲ್ಲದೆ, ಕಪಾಳಮೋಕ್ಷ ಮಾಡಿದ್ದಾಳೆ. ಈ ಗದ್ದಲ ನೋಡಲು ಜನಸಮೂಹ ಸೇರಿತು. ಸ್ಥಳದಲ್ಲಿದ್ದ ಕೆಲವರು ತಮ್ಮ ಮೊಬೈಲ್ ತೆಗೆದು ಚಿತ್ರೀಕರಿಸಿದರು. ಕೆಲವರು ಮಧ್ಯಪ್ರವೇಶಿಸಲು ಪ್ರಯತ್ನಿಸಿದರು. ಆದರೆ ಜಗಳ ಹೆಚ್ಚಾಗುತ್ತಿದ್ದಂತೆ ಎಲ್ಲರೂ ಹಿಂದೆ ಸರಿದರು.
ವಿಡಿಯೊ ವೀಕ್ಷಿಸಿ:
ಮಹಿಳೆಯ ಪತಿಯು ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲೆಯ ಟೋಪಾ ಕಲಾನ್‌ನ ಅಜಯ್ ನಗರ, ಸೀತಾಪುರದ ತಂಬೂರಿನ ದಾತುನಿ ಪ್ರಾಥಮಿಕ ಶಾಲೆಯಲ್ಲಿ ಸಹಾಯಕ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದಾನೆ. ಮಾಹಿತಿಯ ಪ್ರಕಾರ, ಮಂಗಳವಾರ (ಫೆಬ್ರವರಿ 17) ಆತ ಕಾರಿನಲ್ಲಿ ಶಾಲೆಯಿಂದ ಹಿಂತಿರುಗುತ್ತಿದ್ದಾಗ ಈ ಘಟನೆ ನಡೆದಿದೆ.
ಪ್ರೇಮಿಗಳ ದಿನವೇ ಪತ್ನಿಯ ಕೊಲೆ; ದರೋಡೆಯ ಕಥೆ ಕಟ್ಟಿದ ಆರೋಪಿ ಪತಿ ಸಿಕ್ಕಿ ಬಿದ್ದಿದ್ದು ಹೇಗೆ?
ಸುಮ್ಲಿ ಶಾಲೆಯ ಬಳಿ ಕಾರು ನಿಂತಾಗ, ಬುರ್ಖಾ ಧರಿಸಿದ ಮಹಿಳೆಯೊಬ್ಬಳು ಬಂದು ಆತನ ಮೇಲೆ ಹಲ್ಲೆ ನಡೆಸಿ, ಕಾರಿನ ಕಿಟಕಿಗಳನ್ನು ಒಡೆದಿದ್ದಾಳೆ. ಆಕೆ ತನ್ನ ಬುರ್ಖಾವನ್ನು ತೆಗೆದ ನಂತರವೇ ಪಕ್ಕದಲ್ಲಿದ್ದವರಿಗೆ ಅವಳು ಶಿಕ್ಷಕನ ಪತ್ನಿ ಎಂಬುದು ಗೊತ್ತಾಗಿದ್ದು. ಕುಟುಂಬ ಸದಸ್ಯರು ಸಹ ಇದರಲ್ಲಿ ಭಾಗಿಯಾಗಿದ್ದರು. ಆ ವ್ಯಕ್ತಿಯ ತಾಯಿ ಮತ್ತು ಮಗಳು ಘಟನಾ ಸ್ಥಳದಲ್ಲಿ ಮಹಿಳೆಯೊಂದಿಗೆ ಜಗಳವಾಡಿದ್ದು, ಗೊಂದಲವನ್ನು ಹೆಚ್ಚಿಸಿತು.
ನಂತರ ಅಜಯ್ ನಗರ್ ಪೊಲೀಸರಿಗೆ ಸ್ಥಳೀಯರು ದೂರು ನೀಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದ್ದಾರೆ. ಅರ್ಜಿಯಲ್ಲಿ ಕೌಟುಂಬಿಕ ಕಲಹ ಎಂದು ಉಲ್ಲೇಖಿಸಿದ್ದಾರೆ. ಈ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದು, ಘಟನೆ ಬಗ್ಗೆ ವಿವರವಾಗಿ ಪರಿಶೀಲಿಸುತ್ತಿದ್ದಾರೆ. ಎರಡೂ ಕಡೆಯಿಂದ ಇದುವರೆಗೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ, ಸ್ಥಳೀಯರು ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರರಲ್ಲಿ ಹಲವು ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಪೊಲೀಸರು ಪ್ರಕರಣವನ್ನು ಕೂಲಂಕುಷವಾಗಿ ಪರಿಶೀಲಿಸುತ್ತಿದ್ದಾರೆ.