ಮುಂಬೈ, ಜ. 28: ಇತ್ತೀಚೆಗೆ ನಗರ ಪ್ರದೇಶದಲ್ಲಿನ ಟ್ಯಾಕ್ಸಿ ಚಾಲಕರ ವಿರುದ್ದ ದಿನ ನಿತ್ಯ ದೂರು ಕೇಳಿ ಬರುತ್ತಲೇ ಇದೆ. ಈ ಮಧ್ಯೆ ಮಹಾರಾಷ್ಟ್ರದ ಮುಂಬೈಯಲ್ಲಿ ವಿದೇಶಿ ಪ್ರವಾಸಿಗರೊಬ್ಬರಿಗೆ ಟ್ಯಾಕ್ಸಿ ಚಾಲಕ ಭಾರಿ ವಂಚನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಕೇವಲ 400 ಮೀಟರ್ ದೂರದಲ್ಲಿರುವ ಹೋಟೆಲ್‌ಗೆ ತೆರಳಲು ಚಾಲಕ ವಿದೇಶಿ ಪ್ರವಾಸಿಗೆ 18,000 ರುಪಾಯಿ ಶುಲ್ಕ ವಿಧಿಸಿದ್ದಾನೆ. ಈ ವಿಚಾರವನ್ನು ಪ್ರವಾಸಿ ಸೋಶಿಯಲ್ ಮೀಡಿಯಾ ಪೋಸ್ಟ್ ಮೂಲಕ ಶೇರ್ (Viral News) ಮಾಡಿಕೊಂಡಿದ್ದಾರೆ.
ಈ ಆರೋಪವನ್ನು ಅವರು ಎಕ್ಸ್ ಪೋಸ್ಟ್‌ನಲ್ಲಿ ಮಾಡಿದ್ದು, ನೆಟ್ಟಿಗರ ಗಮನ ಸೆಳೆದಿದೆ. ಮುಂಬೈಯ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟ್ಯಾಕ್ಸಿ ಚಾಲಕನೊಬ್ಬ ಭಾರಿ ಪಂಗನಾಮ ಹಾಕಿದ್ದಾನೆ. ದೂರಿನ ಪ್ರಕಾರ, ಕೇವಲ 400 ಮೀಟರ್ ದೂರದಲ್ಲಿರುವ ಹೋಟೆಲ್‌ಗೆ ಟ್ಯಾಕ್ಸಿ ಚಾಲಕ ವಿದೇಶಿ ಪ್ರವಾಸಿಗೆ 18,000 ರುಪಾಯಿ ಶುಲ್ಕ ವಿಧಿಸಿದ್ದಾನೆ. ಪ್ರವಾಸಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ವಿದೇಶಿ ಪ್ರವಾಸಿಗನಿಗೆ ಪಂಗನಾಮ ಹಾಕಿದ ಟ್ಯಾಕ್ಸಿ ಚಾಲಕ:
ವಿದೇಶಿ ಪ್ರವಾಸಿ ಮಹಿಳೆ ಮುಂಬೈಗೆ ಬಂದಿಳಿದ ನಂತರ ವಿಮಾನ ನಿಲ್ದಾಣದ ಹತ್ತಿರವೇ ಇರುವ ಹಿಲ್ಟನ್ ಹೋಟೆಲ್‌ಗೆ ಟ್ಯಾಕ್ಸಿಯಲ್ಲಿ ಬಿಡಲು ಹೇಳಿದ್ದಾರೆ. ಆದರೆ ಟ್ಯಾಕ್ಸಿ ಚಾಲಕ ಮತ್ತು ಆತನ ಜತೆಗಿದ್ದ ಮತ್ತೊಬ್ಬ ವ್ಯಕ್ತಿ, ಪ್ರವಾಸಿಯನ್ನು ನೇರವಾಗಿ ಹೋಟೆಲ್‌ಗೆ ಬಿಡುವ ಬದಲು ದಾರಿ ತಪ್ಪಿಸಿ ಅಜ್ಞಾತ ಸ್ಥಳಕ್ಕೆ ಕರೆದೊಯ್ದರು ಎಂದು ಆರೋಪಿಸಲಾಗಿದೆ. ಹೀಗೆ ಸುತ್ತಾಡಿ ನಂತರ ಅವರನ್ನು ಹೋಟೆಲ್‌ಗೆ ಬಿಟ್ಟು ಅತಿ ಹೆಚ್ಚಿನ ಹಣಕ್ಕೆ ವಸೂಲಿ ಮಾಡಿದ್ದಾರೆ.
ಈ ದೇಶದ ಮಹಿಳೆಯರಿಗೆ ಬಾಡಿಗೆ ಗಂಡ ಬೇಕಂತೆ! ಸರ್ಕಾರವೇ ವಿದೇಶಿ ಹುಡುಗರಿಗೆ ಆಹ್ವಾನ ನೀಡುತ್ತೆ
ʼʼಟ್ಯಾಕ್ಸಿ ಚಾಲಕ ನಮ್ಮನ್ನು ಯಾವುದೋ ಅಪರಿಚಿತ ಸ್ಥಳಕ್ಕೆ ಕರೆದೊಯ್ದು ಆತಂಕ ಹುಟ್ಟಿಸಿದ್ದಾನೆ. ಕೇವಲ 400 ಮೀಟರ್ ದೂರಕ್ಕೆ ನಮ್ಮಿಂದ 200 ಡಾಲರ್ 18,000 ರುಪಾಯಿ ತೆಗೆದು ಕೊಂಡಿದ್ದಾನೆ. ಟ್ಯಾಕ್ಸಿ ಸಂಖ್ಯೆ MH 01 BD 5405ʼʼ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಲವರು ಚಾಲಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ದಯವಿಟ್ಟು ಟ್ಯಾಕ್ಸಿ ಪರವಾನಗಿಯನ್ನು ರದ್ದುಗೊಳಿಸಿ ಚಾಲಕನನ್ನು ಜೈಲಿಗೆ ಹಾಕಿ ಎಂದಿದ್ದಾರೆ.