ದಿಸ್‌ಪುರ, ಆ. 27: ಜನಗಣತಿ ಶಿಕ್ಷಕರು ತಮ್ಮ ಕರ್ತವ್ಯವನ್ನು ಪಾಲಿಸಬೇಕೆಂದು ಕಡ್ಡಾಯ ನಿಯಮ ಇದೆ. ಅದೇ ರೀತಿ ಅಸ್ಸಾಂನ ಶಾಲಾ ಶಿಕ್ಷಕಿಯೊಬ್ಬರು ತನ್ನ ಇಬ್ಬರು ಪುಟ್ಟ ಹೆಣ್ಣು ಮಕ್ಕಳೊಂದಿಗೆ ಜನಗಣತಿ ಕರ್ತವ್ಯ ನಿರ್ವಹಿಸುತ್ತಿರುವ ವಿಡಿಯೊವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗಿದೆ. ತಮ್ಮ ತಾಯಿ ಕ್ಷೇತ್ರ ಜವಾಬ್ದಾರಿಗಳನ್ನು ನಿರ್ವಹಿಸುವಾಗ ಮಕ್ಕಳು ಅವರೊಂದಿಗೆ ತೆರಳುತ್ತಿರುವುದು ವಿಡಿಯೊದಲ್ಲಿ ಕಂಡು ಬಂದಿದೆ.
ಶಿಕ್ಷಕರಿಗೆ ವೈಯಕ್ತಿಕ ಸಮಸ್ಯೆಗಳಿದ್ದರೂ ಜನಗಣತಿ ಕಾರ್ಯ ನಿರ್ವಹಿಸುವುದು ಅನಿವಾರ್ಯ. ಅದೇ ರೀತಿ ಸರ್ಕಾರಿ ಶಾಲಾ ಶಿಕ್ಷಕಿ ರೂಮಿ ದೇಕಾ ಇಬ್ಬರು ಪುಟ್ಟ ಹೆಣ್ಣು ಮಕ್ಕಳೊಂದಿಗೆ ಜನಗಣತಿ ಕರ್ತವ್ಯ ನಿರ್ವಹಿಸುತ್ತಿರುವ ವಿಡಿಯೊ ಗಮನ ಸೆಳೆದಿದೆ.
ರೂಮಿ ದೇಕಾ ಅವರಿಗೆ ಜನಗಣತಿಯ ಮನೆ-ಮನೆ ಸಮೀಕ್ಷೆಯ ಜವಾಬ್ದಾರಿ ನೀಡಲಾಗಿದೆ. ಆದರೆ ಅವರ ಇಬ್ಬರು ಪುಟ್ಟ ಮಕ್ಕಳನ್ನು ನೋಡಿಕೊಳ್ಳಲು ಮನೆಯಲ್ಲಿ ಯಾರೂ ಇಲ್ಲ. ಹೀಗಾಗಿ ಅವರು ತಮ್ಮ ಇಬ್ಬರು ಹೆಣ್ಣುಮಕ್ಕಳನ್ನು ಜತೆಗೆ ಕರೆದುಕೊಂಡು ಹೋಗಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಈ ವಿಡಿಯೊ ಕೆಲಸ ಮಾಡುವ ತಾಯಂದಿರು ಎದುರಿಸುವ ದೈನಂದಿನ ಸವಾಲುಗಳನ್ನು ತೆರೆದಿಟ್ಟಿದೆ.
ವಿಡಿಯೊ ನೋಡಿ:
ರೂಮಿ ದೇಕಾ ಹಂಚಿಕೊಂಡ ವಿಡಿಯೊ ಮಕ್ಕಳು ತಾಯಿಯೊಂದಿಗೆ ತೆರಳುತ್ತಿರುವುದನ್ನು ತೋರಿಸುತ್ತಿದೆ. ಅನೇಕರು ತಮ್ಮ ಮಕ್ಕಳನ್ನು ನೋಡಿಕೊಳ್ಳುವ ಜತೆಗೆ ತನಗೆ ನಿಯೋಜಿಸಲಾದ ಕೆಲಸವನ್ನು ಅವರು ಮಾಡುವ ರೀತಿಯನ್ನು ಶ್ಲಾಘಿಸಿದ್ದಾರೆ. ಶಿಕ್ಷಕಿಯ ಕರ್ತವ್ಯ ನಿಷ್ಠೆಗೆ ಹಾಗೂ ತಾಯ್ತನದ ಜವಾಬ್ದಾರಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಸರ್ಕಾರಿ ವಾಹನ ದುರುಪಯೋಗ ಪಡಿಸಿಕೊಂಡ ಸಬ್ ಇನ್ಸ್‌ಪೆಕ್ಟರ್ ವಿರುದ್ಧ ಕ್ರಮ
ಕೆಲಸ ಮಾಡುವ ಉದ್ಯೋಗಿಗಳಿಗೆ, ವಿಶೇಷವಾಗಿ ಮಹಿಳಾ ಸಿಬ್ಬಂದಿಗೆ ಎದುರಾಗುವ ಸವಾಲುಗಳು ಮತ್ತು ಮಕ್ಕಳ ಪಾಲನೆಯ ಬಗ್ಗೆ ತೆಗೆದುಕೊಳ್ಳುವ ಜವಾಬ್ದಾರಿ ಬಗ್ಗೆ ಹಲವರು ಪ್ರಶ್ನೆ ಎತ್ತಿದ್ದಾರೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬರು, ʼʼನಿಜವಾಗಿಯೂ ಈ ತಾಯಿಯ ಜವಾಬ್ದಾರಿ ಬಗ್ಗೆ ಮೆಚ್ಚಲೇ ಬೇಕುʼʼ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ʼʼಮಕ್ಕಳ ಜವಾಬ್ದಾರಿ ಜತೆ ಕರ್ತವ್ಯ ನಿಷ್ಠೆʼʼ ಎಂದು ಮುಕ್ತಕಂಠದಿಂದ ಹೊಗಳಿದ್ದಾರೆ.